ಶನಿವಾರ, ಆಗಸ್ಟ್ 13, 2022
24 °C
ಪಶ್ಚಿಮ ಪದವೀಧರರ ಮತ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ. ಆರ್‌.ಎಂ.ಕುಬೇರಪ್ಪ ಆಗ್ರಹ

ಕಷ್ಟದಲ್ಲಿರುವ ಶಿಕ್ಷಕರಿಗೂ ಪ್ಯಾಕೇಜ್‌ ಪ್ರಕಟಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಕೋವಿಡ್‌ ಕಾರಣದಿಂದಾಗಿ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ತೊಂದರೆ ಎದುರಾಗಿದ್ದು, ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ದುಡಿಯುತ್ತಿರುವ ಶಿಕ್ಷಕ ವರ್ಗಕ್ಕೆ ಸರ್ಕಾರ ಕನಿಷ್ಠ ವೇತನ ನೀಡಲು ಕ್ರಮವಹಿಸಬೇಕು’ ಎಂದು ಪಶ್ಚಿಮ ಪದವೀಧರರ ಮತ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ. ಆರ್‌.ಎಂ.ಕುಬೇರಪ್ಪ ಒತ್ತಾಯಿಸಿದರು.

‘ಕೋವಿಡ್‌ ಕಾರಣದಿಂದಾಗಿ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಆನ್‌ಲೈನ್‌ ತರಗತಿಗಳು ಶುರುವಾಗಿದ್ದರೂ ಕೂಡ ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ಸರಿಯಾಗಿ ಸಂಬಳ ಸಿಗುತ್ತಿಲ್ಲ. ಕೆಲವರು ಜೀವನ ನಿರ್ವಹಣೆಗಾಗಿ ತರಕಾರಿ ವ್ಯಾಪಾರ, ಕೂಲಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಜವಾಬ್ದಾರಿ ಹೊಂದಿರುವ ಶಿಕ್ಷಕರು ಕಷ್ಟದಲ್ಲಿದ್ದರೂ ಸರ್ಕಾರ ಅವರ ಬಗ್ಗೆ ಕಾಳಜಿ ತೋರದಿರುವುದು ದುರ್ದೈವದ ಸಂಗತಿ’‍ ಎಂದು ಅವರು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಅನುದಾನಿತ ಶಾಲೆ ಮತ್ತು ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೋವಿಡ್‌ ನೆಪ ಹೇಳಿ ನೇಮಕಾತಿ ತಡೆಹಿಡಿಯಬಾರದು. ಖಾಲಿ ಇರುವ ಹುದ್ದೆಗಳನ್ನು ತುಂಬಲು ಅವಕಾಶ ಮಾಡಿಕೊಡಬೇಕು’ ಎಂದು ಅವರು ಒತ್ತಾಯಿಸಿದರು.

‘ಮುಂದಿನ ತಿಂಗಳು ಶಾಲೆಗಳನ್ನು ತೆರೆಯಲು ಸರ್ಕಾರ ಸಿದ್ಧತೆ ನಡೆಸಿದೆ. ಆದರೆ, ಅದಕ್ಕೆ ಪೂರ್ವತಯಾರಿ ಆಗಿಲ್ಲ. ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇಲ್ಲವಾಗಿದೆ. ಈ ವಿಚಾರವಾಗಿ ಅಧಿಕಾರಿಗಳು ಹೇಳಿದಂತೆ ಅವರು ದಿನಕ್ಕೊಂದು ನಿರ್ಧಾರ ಪ್ರಕಟಿಸುತ್ತಿದ್ದಾರೆ. ಅವರ ಮೇಲಿದ್ದ ಭರವಸೆ ಹೊರಟುಹೋಗಿದೆ’ ಎಂದು ಹೇಳಿದರು.

‘ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಶಾಲೆ ಆರಂಭಿಸುವ ಮುನ್ನ ಶಿಕ್ಷಣತಜ್ಞರ ಸಮಿತಿ ನೇಮಕ ಮಾಡಿ ಅವರಿಂದ ವರದಿ ತರಿಸಿಕೊಂಡು ಈ ವಿಚಾರವಾಗಿ ಸರಿಯಾದ ಕ್ರಮ ಕೈಗೊಳ್ಳಬೇಕು’ ಎಂದು ಅವರು ಹೇಳಿದರು.

‘ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪೂರ್ಣಕಾಲಿಕ ಕುಲಪತಿಗಳ ನೇಮಕವಾಗಿಲ್ಲ. ಇದರಿಂದಾಗಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣ ವ್ಯವಸ್ಥೆ ಸುಗಮವಾಗಿ ನಡೆಯಲು ತೊಂದರೆ ಉಂಟಾಗಿದೆ. ವಿವಿಗಳಿಗೆ ಕುಲಪತಿಗಳ ನೇಮಕ ಮಾಡಲು ಸರ್ಕಾರ ಕ್ರಮವಹಿಸಬೇಕು’ ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಮಹಾಂತೇಶ್‌, ಅನುದಾನ ರಹಿತ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಸಂಗಮೇಶ ಹಾದಿಮನಿ, ಮನೋಹರ್‌ ಮಡಿವಾಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.