ಅಂಧ ಮಕ್ಕಳಿಂದ ನಾಟ್ಯಯೋಗ

7
ಹೊಳೆ ಆಲೂರಿನ ಜ್ಞಾನಸಿಂಧು ವಸತಿ ಶಾಲೆಯ ಚಿಣ್ಣರು

ಅಂಧ ಮಕ್ಕಳಿಂದ ನಾಟ್ಯಯೋಗ

Published:
Updated:
ಹೊಳೆ ಆಲೂರಿನ ಜ್ಞಾನಸಿಂಧು ವಸತಿ ಶಾಲೆಯ ಅಂಧ ಮಕ್ಕಳು ಮೈಸೂರಿನಲ್ಲಿ ನಡೆದ 83ನೇ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ನೀಡಿದ ಮಲ್ಲಗಂಬ ಪ್ರದರ್ಶನ (ಸಂಗ್ರಹ ಚಿತ್ರ)

ಗದಗ: ರಾಜ್ಯದಲ್ಲಿ ಅಂಧ ಮಕ್ಕಳಿಗಾಗಿ 30 ವಸತಿ ಶಾಲೆಗಳಿದ್ದರೂ, ಇವು ಗಳಲ್ಲಿ ಭಿನ್ನವಾಗಿ ನಿಲ್ಲುವುದು ರೋಣ ತಾಲ್ಲೂಕು ಹೊಳೆ ಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆ.

ಇಲ್ಲಿನ ವಿಶೇಷ ಮಕ್ಕಳು ‘ನಾಟ್ಯಯೋಗ’ದ ಹೊಸ ಪ್ರಕಾರವನ್ನೇ ವಿಶ್ವದೆದುರು ತೆರೆದಿಟ್ಟಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದ ಹಲವು ವೇದಿಕೆಗಳಲ್ಲಿ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಯೋಗ ಮತ್ತು ಮಲ್ಲಗಂಬ ತರಬೇತಿ ಮೂಲಕವೇ ಈ ಶಾಲೆ ರಾಜ್ಯದಲ್ಲಿ ಗಮನ ಸೆಳೆದಿದೆ.

(ಬಾಲ ಯೋಗ ಪ್ರತಿಭೆ ಮಣಿಕಂಠ)

ಯೋಗ ಪಟು ಶಿವಾನಂದ ಕೇಲೂರ ಅವರು 2010ರಲ್ಲಿ ಐವರು ಮಕ್ಕಳೊಂದಿಗೆ ಬಾಡಿಗೆ ಕಟ್ಟಡದಲ್ಲಿ ಈ ವಸತಿ ಶಾಲೆ ಪ್ರಾರಂಭಿಸಿದರು.

ಸದ್ಯ 1ರಿಂದ 9ನೇ ತರಗತಿವರೆಗೆ 100ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಅಂಧ ಮಕ್ಕಳಿಗೆ ಪಾಠ ಮಾಡಲು ವಿಶೇಷ ತರಬೇತಿ ಪೂರ್ಣಗೊಳಿಸಿರುವ 12 ಮಂದಿ ಶಿಕ್ಷಕರು ಇಲ್ಲಿದ್ದಾರೆ.

ಶಿಶು ಕೇಂದ್ರೀಕೃತ ಯೋಜನೆಯಡಿ ಪ್ರತಿ ಮಗುವಿಗೆ ಸರ್ಕಾರದಿಂದ ಅನು ದಾನ ಲಭಿಸುತ್ತಿದೆ. ಈ ಅನುದಾನದಲ್ಲೇ ಶಾಲೆ ಮುನ್ನಡೆಯುತ್ತಿದೆ. ಆದರೆ, ಪ್ರಾಯೋಜಕರ ಕೊರತೆಯು ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಅಡ್ಡಿಯಾಗಿದೆ.

ಬ್ರೈಲ್‌ ಲಿಪಿ, ಪರಿಸರ, ಸಮಾಜ ವಿಜ್ಞಾನ, ವಾಣಿಜ್ಯ ಹೀಗೆ ಎಲ್ಲ ವಿಷಯಗಳನ್ನು ಇಲ್ಲಿ ಕಲಿಸಲಾಗುತ್ತದೆ. ಸಂಗೀತ, ನಾಟ್ಯ ಮತ್ತು ಯೋಗದ ಸಂಗಮ ಕ್ಷೇತ್ರವಾಗಿಯೂ ಈ ವಿದ್ಯಾಮಂದಿರ ಗಮನ ಸೆಳೆಯುತ್ತಿದೆ.

ಶಿವಾನಂದ ಕೇಲೂರ ಅವರ ತಾಯಿ ತುಳಸಮ್ಮ ಕೇಲೂರ ಅವರು ಈ ಶಾಲೆಯ ಮೂಲಕ ಮಾಡುತ್ತಿರುವ ಸಮಾಜ ಸೇವೆ ಪರಿಗಣಿಸಿ ಅವರಿಗೆ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ.

(ರೋಣ ತಾಲ್ಲೂಕಿನ ಹೊಳೆ ಆಲೂರಿನಲ್ಲಿರುವ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿಗಳು)

ಬಾಗಲಕೋಟೆ, ಸಿಂಧನೂರು, ರಾಯಚೂರು, ಕೊಪ್ಪಳ, ಹರಿಹರ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಿಂದ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.

ನಾಲ್ಕು ವರ್ಷದ ಪುಟಾಣಿಗಳಿಂದ ಹಿಡಿದು 18 ವರ್ಷದ ವರೆಗಿನ ಬಾಲಕ, ಬಾಲಕಿಯರು ಇದ್ದಾರೆ.

‘ಹೆಚ್ಚಿನ ಮಕ್ಕಳು ತೀವ್ರ ಬಡತನದ ಹಿನ್ನೆಲೆಯಿಂದ ಬಂದವರು. ಅವರ ಆಸಕ್ತಿ ಗುರುತಿಸಿ ಸಂಗೀತ, ಯೋಗ, ಮಲ್ಲಗಂಬ ತರಬೇತಿ ನೀಡುತ್ತೇವೆ. ಸದ್ಯ ಶಾಲೆಯಲ್ಲಿರುವ 60ರಿಂದ 70 ಮಕ್ಕಳು ಸಂಪೂರ್ಣ ದೃಷ್ಟಿದೋಷ ಕಳೆದು ಕೊಂಡವರು. ಅವರ ಬದುಕಿಗೆ ಬೆಳಕಾಗಿ ನಮ್ಮ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಶಿವಾನಂದ ಕೇಲೂರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂಗೀತ ನಾದ ಯೋಗ’ ಅಥವಾ ‘ಶಿವಪುರಾಣ’ದಲ್ಲಿ ಬರುವ ನಾಟ್ಯಯೋಗವನ್ನು ನಮ್ಮ ಶಾಲೆಯ ಮಕ್ಕಳು ಪ್ರದರ್ಶಿಸುತ್ತಿದ್ದಾರೆ. ಇದನ್ನು ಅವರಿಗೆ ಸ್ಪರ್ಶ ಮತ್ತು ಧ್ವನಿಯ ಮೂಲಕ ಕಲಿಸಲಾಗುತ್ತದೆ. ಅಂಧ ಮಕ್ಕಳ ಸ್ಮರಣ ಶಕ್ತಿ ಅದ್ಭುತ. ಸಾಮಾನ್ಯ ಮಕ್ಕಳಿಗಿಂತ ನೂರು ಪಟ್ಟು ವೇಗದಲ್ಲಿ ಅವರು ಯೋಚಿಸುತ್ತಾರೆ. ಹೀಗಾಗಿ ಅವರು ಪ್ರತಿ ವೇದಿಕೆಯಲ್ಲೂ ವಿನೂತನ ಪ್ರದರ್ಶನ ನೀಡುತ್ತಾರೆ. ಕಣ್ಣಿದ್ದವರನ್ನು ಬೆಕ್ಕಸ ಬೆರಗಾಗಿಸುತ್ತಾರೆ’ ಎಂದು ಶಿವಾನಂದ ಕೇಲೂರ ತಿಳಿಸಿದರು.

(ರೋಣ ತಾಲ್ಲೂಕಿನ ಹೊಳೆ ಆಲೂರಿನಲ್ಲಿರುವ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆ)

‘ಯೋಗವು ನನ್ನಲ್ಲಿ ಅದಮ್ಯ ಆತ್ಮವಿಶ್ವಾಸ ಮೂಡಿಸಿದೆ. ಕಣ್ಣಿಲ್ಲದಿದ್ದರೇನಂತೆ ಮುಂದೆ ವೈದ್ಯನಾಗುತ್ತೇನೆ. ನೂರಾರು ಜನರ ಬಾಳಿಗೆ ಬೆಳಕಾಗುತ್ತೇನೆ’ ಎಂದು ಈ ಶಾಲೆಯ 7ನೇ ತರಗತಿ ವಿದ್ಯಾರ್ಥಿ, ಬಾಲ ವಿಕಾಸ ಅಕಾಡೆಮಿಯಿಂದ ಬಾಲ ಪ್ರತಿಭೆ ಪುರಸ್ಕಾರವನ್ನೂ ಪಡೆದಿರುವ ಮಣಿಕಂಠ ಎಸ್‌.ಟಿ ಹೇಳಿದರು.

**

ಅಂಧ ಮಕ್ಕಳಿಗಾಗಿ ಬ್ರೈಲ್‌ಲಿಪಿ ಪಠ್ಯ ಪುಸ್ತಕಗಳು ಸಮರ್ಪಕವಾಗಿ ಲಭಿಸುತ್ತಿಲ್ಲ. ಹೀಗಾಗಿ ಅವರಿಗೆ ಶಾಲೆಯಲ್ಲಿ ಆಡಿಯೊ ಲೈಬ್ರರಿ ಪ್ರಾರಂಭಿಸುವ ಯೋಜನೆ ಇದೆ.

-ಶಿವಾನಂದ ಕೇಲೂರ, ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆ ಸ್ಥಾಪಕ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !