ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ: ನದಿ ತುಂಬಿದ್ದರೂ ನೀರಿನ ಬರ

ನಿರ್ಲಕ್ಷ್ಯ ಮಾಡಿದರೆ ನೀರು ಬಂದ್ ಆಗುವ ಭಯ
Last Updated 26 ಫೆಬ್ರುವರಿ 2022, 5:09 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಹಾವೇರಿ ಜಿಲ್ಲೆ ಮೇವುಂಡಿ ಹತ್ತಿರದ ತುಂಗಭದ್ರಾ ನದಿಯಿಂದ ಲಕ್ಷ್ಮೇಶ್ವರಕ್ಕೆ 18 ವರ್ಷಗಳಿಂದ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಆದರೆ ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ನದಿ ತುಂಬಿ ಹರಿಯುತ್ತಿದ್ದರೂ ಜನತೆ ನೀರಿಗಾಗಿ ಆಗಾಗ ಪರದಾಡಬೇಕಾಗಿದೆ. ನಿರ್ಲಕ್ಷ್ಯದಿಂದಾಗಿ ಮಹತ್ವದ ಯೋಜನೆ ವಿನಾಶದ ಅಂಚಿಗೆ ತಲುಪಿದ್ದು ಇದು ಹೀಗೆಯೇ ಮುಂದುವರಿದರೆ ಇನ್ನು 2-3 ವರ್ಷಗಳಲ್ಲಿ ಪಟ್ಟಣಕ್ಕೆ ನದಿ ನೀರು ಬಂದ್ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಏನಿದು ಯೋಜನೆ: 2002ರಲ್ಲಿ ಶಾಸಕರಾಗಿದ್ದ ಜಿ.ಎಸ್. ಗಡ್ಡದೇವರಮಠ ಅವರು ಪಟ್ಟಣಕ್ಕೆ ಮೇವುಂಡಿ ಹತ್ತಿರದ ತುಂಗಭದ್ರಾ ನದಿಯಿಂದ ನೀರು ತರಲು ಯೋಜನೆ ರೂಪಿಸಿದರು. ಯೋಜನೆ ಅನುಷ್ಠಾನದ ಜವಾಬ್ದಾರಿಯನ್ನು ಕರ್ನಾಟಕ ನಗರ ನೀರು ಮತ್ತು ಒಳ ಚರಂಡಿ ಮಂಡಳಿಗೆ ವಹಿಸಿಕೊಡಲಾಯಿತು. ಅಂದಾಜು ₹15.50 ಕೋಟಿ ವೆಚ್ಚದಲ್ಲಿ ಮೇವುಂಡಿಯಲ್ಲಿ ಜಾಕ್‍ವೆಲ್, ಸೂರಣಗಿಯಲ್ಲಿ ಶುದ್ಧೀಕರಣ ಘಟಕ ಹಾಗೂ ಸಿಬ್ಬಂದಿ ಕೊಠಡಿ, ಲಕ್ಷ್ಮೇಶ್ವರದವರೆಗೆ 42 ಕಿ.ಮೀ. ಪೈಪ್‍ಲೈನ್ ಮತ್ತು 85 ಚೇಂಬರ್‌ಗಳನ್ನು ನಿರ್ಮಿಸುವುದು ಯೋಜನೆಯಲ್ಲಿತ್ತು. ಅಲ್ಲದೆ ಮಾರ್ಗ ಮಧ್ಯದ ಸೂರಣಗಿ, ದೊಡ್ಡೂರು, ಶಿಗ್ಲಿ ಗ್ರಾಮಗಳಿಗೂ ಸಹ ನೀರು ಪೂರೈಸಲು ಒಪ್ಪಂದ ಆಯಿತು. ಅದರಂತೆ 2004ರಲ್ಲಿ ಪಟ್ಟಣಕ್ಕೆ ನದಿ ನೀರು ಬಂತು. ಅಂದಿನಿಂದ ಇಂದಿನವರೆಗೆ ತುಂಗಭದ್ರೆ ಪಟ್ಟಣದ ಐದು ಸಾವಿರಕ್ಕೂ ಹೆಚ್ಚು ಜನರ ದಾಹ ನೀಗಿಸುತ್ತಿದ್ದಾಳೆ.

ಸೌಲಭ್ಯಗಳು: ಮೇವುಂಡಿ ಜಾಕ್‍ವೆಲ್‍ನಲ್ಲಿ 215 ಎಚ್.ಪಿಯ 3 ಮೋಟಾರು ಮತ್ತು 215 ಎಚ್.ಪಿಯ ಮೂರು ಪಂಪುಗಳು, ಸೂರಣಗಿ ಶುದ್ಧೀಕರಣ ಘಟಕದಲ್ಲಿ 250 ಎಚ್‍ಪಿಯ 3 ಮೋಟಾರು ಮತ್ತು 250 ಎಚ್‍ಪಿಗಳ 3 ಪಂಪುಗಳು, 5 ಎಚ್‍ಪಿಯ 1 ಏರ್ ಟ್ಯಾಂಕರ್ ಮೋಟಾರ್, 1 ಎಚ್‍ಪಿ ಸಾಮರ್ಥ್ಯದ 8 ಮಿಕ್ಸರ್ ಮೋಟಾರುಗಳು ಇದರೊಂದಿಗೆ ಜಾಕ್‍ವೆಲ್‍ನಲ್ಲಿ ಎರಡು ಮತ್ತು ಶುದ್ಧೀಕರಣ ಘಟಕದಲ್ಲಿ ಎರಡು ಟಿಸಿಗಳು ಇರಬೇಕು ಎಂಬ ಅಂಶಗಳು ಯೋಜನೆಯಲ್ಲಿ ಇವೆ.

ಸಮಸ್ಯೆಗಳು: ಸೂರಣಗಿ ಶುದ್ಧೀಕರಣ ಘಟಕದಲ್ಲಿ ಒಬ್ಬರು ಎಂಜಿನಿಯರ್ ಮತ್ತು ಇಬ್ಬರು ಸಿಬ್ಬಂದಿ ಕಾಯಂ ಆಗಿ ಇರಬೇಕು ಎಂಬ ನಿಯಮ ಇದ್ದು ಅದಕ್ಕಾಗಿ ಘಟಕದ ಆವರಣದಲ್ಲಿ ಮೂರು ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ ಯೋಜನೆ ಆರಂಭ ಆದಾಗಿನಿಂದ ಅಲ್ಲಿ ಯಾರೂ ಇಲ್ಲ. ದಿನಗೂಲಿ ಆಧಾರದ ಮೇಲೆ ಕೆಲವರನ್ನು ನೇಮಕ ಮಾಡಿಕೊಂಡು ಕೆಲಸ ಮಾಡಿಸಲಾಗುತ್ತಿದೆ.

ಕೈ ಕೊಡುವ ಮಷಿನ್‍ಗಳು: ವರ್ಷದಲ್ಲಿ 2-3 ಬಾರಿಯಾದರೂ ಮೋಟಾರ್‌, ಪಂಪು ಅಥವಾ ಟಿಸಿಗಳು ಸುಟ್ಟು ನೀರಿನ ಸಮಸ್ಯೆ ಉಂಟಾಗುತ್ತದೆ. ಇನ್ನು ಹದಿನೆಂಟು ವರ್ಷಗಳ ಹಿಂದೆ ಅಳವಡಿಸಿರುವ ಪೈಪ್‍ಗಳ ಮೇಲಿನ ಸಿಮೆಂಟ್ ಕೋಟ್ ಅಲ್ಲಲ್ಲಿ ಒಡೆದು ಅವು ಹಾಳಾಗುತ್ತಿವೆ. ಶುದ್ಧೀಕರಣ ಘಟಕದಲ್ಲಿನ ಬ್ರಿಡ್ಜ್‌ನ ಮೋಟಾರು ಸಂಪೂರ್ಣ ತುಕ್ಕು ಹಿಡಿದಿವೆ. ಅಲ್ಲದೆ ಅದು ತಿರುಗುವ ಕಬ್ಬಿಣದ ಹಳಿ ಸಹ ತುಕ್ಕು ಹಿಡಿದು ಅಲ್ಲಲ್ಲಿ ಕಿತ್ತು ನಾಶವಾಗಿದ್ದು, ಸದ್ಯ ಅದು ಸ್ಥಗಿತಗೊಂಡಿದೆ. ಇದರಿಂದಾಗಿ ನೀರು ಶುದ್ಧೀಕರಣ ಆಗುತ್ತಿಲ್ಲ. ನಿರ್ವಹಣೆ ಕೊರತೆಯಿಂದಾಗಿ ಸಾಕಷ್ಟು ಚೇಂಬರ್‌ಗಳು ಒಡೆದು ಹಾಳಾಗಿವೆ. ಸೂರಣಗಿ ಗ್ರಾಮದ ಹತ್ತಿರ ನಾಲ್ಕೈದು ಚೇಂಬರ್‌ಗಳು ಒಡೆದು ಶೇ 30ರಷ್ಟು ನೀರು ಸೋರಿಕೆ ಆಗುತ್ತಿದೆ.

*

ಮೇವುಂಡಿ ನೀರು ಪೂರೈಕೆಯಲ್ಲಿ ಆಗುತ್ತಿರುವ ತೊಂದರೆಗಳನ್ನು ಶೀಘ್ರದಲ್ಲಿಯೇ ಬಗೆಹರಿಸಲಾಗುವುದು. ಇದಕ್ಕಾಗಿ ಈಗಾಗಲೇ ₹93 ಲಕ್ಷ ತೆಗೆದರಿಸಲಾಗಿದೆ. ಹೊಸದಾಗಿ ಪೈಪ್‍ಲೈನ್ ಅಳವಡಿಸುವ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಲು ಸಂಸದರು ಹೇಳಿದ್ದು, ಆ ಕೆಲಸ ನಡೆಯುತ್ತಿದೆ.
-ಶಂಕರ ಹುಲ್ಲಮ್ಮನವರ, ಪುರಸಭೆ ಮುಖ್ಯಾಧಿಕಾರಿ

*

ಪಟ್ಟಣದ ಜನತೆಗೆ ಶಾಶ್ವತ ಕುಡಿಯುವ ನೀರನ್ನು ಪೂರೈಸಬೇಕು ಎಂಬ ಉದ್ಧೇಶದಿಂದ ಮೇವುಂಡಿ ಯೋಜನೆ ಅನುಷ್ಠಾನಗೊಂಡಿದೆ. ಆದರೆ ಆಗಾಗ ನಿರ್ವಹಣೆ ಮಾಡಬೇಕಾಗುತ್ತದೆ.
-ಜಿ.ಎಸ್. ಗಡ್ಡದೇವರಮಠ, ಮಾಜಿ ಶಾಸಕ

*

ಮೇವುಂಡಿ ಯೋಜನೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಳ್ಳಲಾಗಿದೆ.
-ಅಶ್ವಿನಿ ಅಂಕಲಕೋಟಿ, ಪುರಸಭೆ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT