ಗದಗ ಜಿಲ್ಲೆಯಲ್ಲಿ ಒಣಗಿದ ಕಡಲೆ ಬೆಳೆ: ರೈತ ಕಂಗಾಲು

7
ಈ ಬಾರಿ ಎಕರೆಗೆ 5 ಕೆ.ಜಿ. ಫಸಲು ಕೂಡ ಬರದಂತಹ ಪರಿಸ್ಥಿತಿ

ಗದಗ ಜಿಲ್ಲೆಯಲ್ಲಿ ಒಣಗಿದ ಕಡಲೆ ಬೆಳೆ: ರೈತ ಕಂಗಾಲು

Published:
Updated:
Prajavani

ಡಂಬಳ: ಹಿಂಗಾರು ಹಂಗಾಮಿನಲ್ಲಿ ಕಡಲೆ ಬಿತ್ತನೆ ಮಾಡಿದ ಹೋಬಳಿ ರೈತರು ಬೆಳೆಹಾನಿಯಿಂದ ಕಂಗಾಲಾಗಿದ್ದಾರೆ. ಮಳೆ ಕೊರತೆಯಿಂದಾಗಿ ಬೆಳೆಗಳು ಸಂಪೂರ್ಣ ಒಣಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

ತಾಲ್ಲೂಕಿನಲ್ಲಿ ಕೆರೆ ಮತ್ತು ಕೊಳವೆ ಬಾವಿಯ ನೀರಿನ ಲಭ್ಯತೆ ಹೊಂದಿರುವ ರೈತರ ಜಮೀನಿನಲ್ಲಿ ಮಾತ್ರ ಕಡಲೆ ಬೆಳೆ ಹಸಿರಿನಿಂದ ಕೂಡಿದೆ. ಉಳಿದಂತೆ ಇನ್ನುಳಿದ ಪ್ರದೇಶದಲ್ಲಿ ಸಂಪೂರ್ಣ ಬೆಳೆ ಒಣಗಿದೆ. ಒಂದು ಎಕೆರೆಗೆ ಬಿತ್ತನೆಗೆ 5 ಕೆ.ಜಿ. ಕಡಲೆ ಬೀಜ ಬೇಕಾಗುತ್ತದೆ. ಆದರೆ, ಈ ಬಾರಿ ಎಕರೆಗೆ 5 ಕೆ.ಜಿ. ಫಸಲು ಕೂಡ ಬರದಂತಹ ಪರಿಸ್ಥಿತಿ ಇದೆ ಎನ್ನುತ್ತಾರೆ ರೈತರು.

‘ಕೃಷಿ ಇಲಾಖೆ ಪ್ರತಿ ವರ್ಷ ಬೆಳೆ ಹಾನಿ ಸಮೀಕ್ಷೆ ನಡೆಸುತ್ತದೆ. ಆದರೆ, ಪರಿಹಾರ ರೈತರಿಗೆ ಲಭಿಸುತ್ತಿಲ್ಲ. ದುಡಿಯುವ ಕೈಗಳಿಗೆ ಉದ್ಯೋಗವಿಲ್ಲ. ಜಾನುವಾರುಗಳಿಗೆ ನೀರು ಮತ್ತು ಮೇವಿನ ಕೊರತೆ ಎದುರಾಗಿದೆ. ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ₹ 10 ಸಾವಿರ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸುತ್ತಾರೆ ಹಿರೇವಡ್ಡಟ್ಟಿ ಗ್ರಾಮದ ರೈತ ವೀರಣ್ಣ ಕನ್ಯಾಳ ಡಂಬಳದ ರೈತ ಮಂಜುನಾಥ ಸಂಜೀವಣ್ಣನವರ ಮತ್ತು ಡೋಣಿ ಗ್ರಾಮದ ರೈತ ದೇವರಾಜ ಕಟ್ಟಿಮನಿ.

‘2018-19ನೇ ಸಾಲಿನ ಹಿಂಗಾರಿ ಹಂಗಾಮಿನಲ್ಲಿ 11,000 ಹೆಕ್ಟೇರ್‌ನಲ್ಲಿ ಕಡಲೆ ಬಿತ್ತನೆ ಗುರಿ ಹೊಂದಲಾಗಿತ್ತು. ನೀರಾವರಿ ಕ್ಷೇತ್ರದಲ್ಲಿ 102 ಹೆಕ್ಟೇರ್‌ ಬಿತ್ತನೆಯಾಗಿದ್ದರೆ, ಖುಷ್ಕಿ ಜಮೀನಿನಲ್ಲಿ 9,591 ಹೆಕ್ಟೇರ್‌ ಅಂದರೆ ಒಟ್ಟು ಶೇ 88 ರಷ್ಟು ಬಿತ್ತನೆಯಾಗಿದೆ. ಆದರೆ, ಮಳೆ ಕೊರತೆಯಿಂದ ಹಲವೆಡೆ ಬೆಳೆ ಒಣಗಿದೆ. ಬೆಳೆಹಾನಿ ಪರಿಹಾರಕ್ಕೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು’ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ನೆಗಳೂರ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !