ಬುಧವಾರ, ಡಿಸೆಂಬರ್ 11, 2019
27 °C
ಮಳೆ ಕೊರತೆಯಿಂದ ತಗ್ಗಿದ ಬಿತ್ತನೆ; ಮೇವಿಗೆ ಪರದಾಟ

ಜಾನುವಾರುಗಳಿಗೂ ತಟ್ಟಿದ ಬರದ ಬಿಸಿ..!

ನಾಗರಾಜ ಎಸ್. ಹಣಗಿ Updated:

ಅಕ್ಷರ ಗಾತ್ರ : | |

Deccan Herald

ಲಕ್ಷ್ಮೇಶ್ವರ: ಈ ವರ್ಷ ತಾಲ್ಲೂಕಿನಾದ್ಯಂತ ಮುಂಗಾರು, ಹಿಂಗಾರಿನಲ್ಲಿ ಮಳೆ ಕೈಕೊಟ್ಟಿದ್ದು ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಬೆಳೆಹಾನಿಯಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿರುವುದರಿಂದ ದನಕರುಗಳನ್ನು ‘ಹೇಗಪ್ಪಾ ಸಾಕೋದು’ಎಂಬ ಚಿಂತೆಯೂ ರೈತರನ್ನು ಕಾಡುತ್ತಿದೆ.

ಪ್ರತಿ ಶುಕ್ರವಾರ ಪಟ್ಟಣದಲ್ಲಿ ಜಾನುವಾರು ಸಂತೆ ನಡೆಯುತ್ತಿದ್ದು, ಸಾಕಷ್ಟು ರೈತರು ಎತ್ತುಗಳನ್ನು ಮಾರಾಟ ಮಾಡಲು ತಂದಿದ್ದರು. ಮುಂಗಾರಿನಲ್ಲಿ ಬೆಳೆಯು ಗೋವಿನ ಜೋಳ, ಹಿಂಗಾರು ಹಂಗಾಮಿನ ಬಿಳಿಜೋಳದ ದಂಟುಗಳು, ಶೇಂಗಾ ಹೊಟ್ಟು ಜಾನುವಾರುಗಳಿಗೆ ಪ್ರಮುಖ ಆಹಾರ. ಆದರೆ, ಈ ವರ್ಷ ಮಳೆ ಕೊರತೆಯಿಂದ ಬಿತ್ತನೆ ಆಗದ ಕಾರಣ, ಈ ಮೇವಿಗೂ ಕೊರತೆ ಎದುರಾಗಿದೆ.

‘ಈ ವರ್ಷ ಮಳೆ, ಬೆಳೆ ಇಲ್ಲ. ಮುಂದ ದನ–ಕರಾ ಸಾಕೋದ ಹ್ಯಾಂಗೆ ಎಂಬ ಚಿಂತಿಗೆ ರೈತರು ಅವನ್ನು ಮಾರಾಕತ್ತಾರ್ರೀ’ ಎಂದು ಕಣವಿ ಗ್ರಾಮದ ರೈತ ಮಲ್ಲೇಶ ಹಳೇಮನಿ ಹೇಳಿದರು.

ಈ ವರ್ಷ ಶೇಂಗಾ ಹೊಟ್ಟಿನ ಬೆಲೆ ಆಕಾಶಕ್ಕೇರಿದೆ. ಮೂರು ಎಕರೆಯಷ್ಟು ಶೇಂಗಾ ಹೊಟ್ಟಿಗೆ ₨15 ರಿಂದ ₨20 ಸಾವಿರ ದರ ಇದೆ. ಬರಗಾಲದ ಬವಣೆಯಲ್ಲಿ ಬೇಯುತ್ತಿರುವ ರೈತನಿಗೆ ಇಷ್ಟು ದೊಡ್ಡ ಮೊತ್ತದ ಹಣ ಕೊಟ್ಟು, ಮೇವು ಖರೀದಿಸಲು ಶಕ್ತಿ ಇಲ್ಲ. ಅನಿವಾರ್ಯವಾಗಿ ಜಾನುವಾರುಗಳನ್ನು ಮಾರುತ್ತಿದ್ದಾನೆ.

ರೈತರಿಗೆ ಹೆದರಿಕೆ: ‘ಮಳಿ ಇಲ್ಲದ್ದಕ್ಕ ಅಡಿವ್ಯಾಗ ಹಸಿರು ಒಣಗಾಕತ್ತೈತಿ. ಶೇಂಗಾ ಹೊಟ್ಟು ಬಾಳ ತುಟ್ಟಿ ಆಗ್ಯಾವು. ಈ ವರ್ಷ ಆಕಳ, ಎಮ್ಮಿ ಸಾಕಾಕ ರೈತರು ಹೆದರಾಕತ್ತಾರ. ಹೀಗಾಗಿ ಹಾಲಿನ ಉತ್ಪಾದನೆಯೂ ಗಣನೀಯವಾಗಿ ತಗ್ಗಬಹು’ ಎನ್ನುತ್ತಾರೆ ಗೊಜನೂರು ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ನಾಗನಗೌಡ ಪಾಟೀಲ.

ಪ್ರತಿಕ್ರಿಯಿಸಿ (+)