ನೆಲಕಚ್ಚಿದ ಅರಣ್ಯ ಇಲಾಖೆ ನೆಟ್ಟ ಸಸಿಗಳು

7
ತಾ.ಪಂ.ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಕ್ರೋಶ

ನೆಲಕಚ್ಚಿದ ಅರಣ್ಯ ಇಲಾಖೆ ನೆಟ್ಟ ಸಸಿಗಳು

Published:
Updated:
Deccan Herald

ರೋಣ: ಸಾಮಾಜಿಕ ಅರಣ್ಯ ಇಲಾಖೆಯಿಂದ ತಾಲ್ಲೂಕಿನ ಬಹುತೇಕ ಕಡೆಗಳ ರಸ್ತೆಯ ಬದಿಯಲ್ಲಿ, ಸ್ಮಶಾನದಲ್ಲಿ ನೆಟ್ಟಿರುವ ಸಸಿಗಳು ಸಂಪೂರ್ಣ ನೆಲಕ್ಕುರುಳಿವೆ. ಸಿಬ್ಬಂದಿ ಕಂಡರೂ ಕಾಣದಂತಿರುವುದು ಏಕೆ? ಇಂತಹ ಕಾಟಾಚಾರದ ಕೆಲಸಗಳಿಂದ ಪರಿಸರ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎ.ತರಫದಾರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಶುಕ್ರವಾರ ಜರುಗಿದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ತರಫದಾರ ಅವರು, ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಪ್ರಕಾಶ ಪವಾಡಿಗೌಡ್ರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

‘ನನ್ನ ಮತಕ್ಷೇತ್ರದ ಚಿಕ್ಕಮಣ್ಣೂರ ಗ್ರಾಮದ ರೈತರ ಜಮೀನುಗಳಲ್ಲಿ ₹4.25 ಲಕ್ಷ ವೆಚ್ಚದಲ್ಲಿ ಸಸಿ ನೆಡಲಾಗಿದೆ ಎಂಬ ಮಾಹಿತಿ ಸಭೆಗೆ ನೀಡಲಾಗಿದೆ. ಯಾವ ರೈತರಿಗೆ ಸಸಿಗಳನ್ನು ವಿತರಣೆ ಮಾಡಿದ್ದೀರಿ. ರೈತರಿಗೆ ನೀಡಿದ ಅನುದಾನವೆಷ್ಟು ಎಂದು ಪ್ರಶ್ನಿಸಿದರು.

ಈ ಕುರಿತ ಮಾಹಿತಿ ಕಚೇರಿಯಲ್ಲಿದೆ. ಸದ್ಯ ತಮ್ಮ ಬಳಿ ಇಲ್ಲ ಎಂದು ಅಧಿಕಾರಿ ಪ್ರಕಾಶ ಪವಾಡಿಗೌಡ್ರ ಹೇಳಿದಾಗ, ಅಧ್ಯಕ್ಷೆ ಪ್ರೇಮಾ ನಾಯಕ, ಉಪಾಧ್ಯಕ್ಷೆ ಇಂದಿರಾ ತೇಲಿ ಜಂಟಿಯಾಗಿ ಅಧಿಕಾರಿಗೆ ಪ್ರಶ್ನೆಗಳ ಸುರಿಮಳೆಯನ್ನೆ ಹರಿಸಿದರು.

ಹಡಗಲಿ-ಸವಡಿ ರಸ್ತೆಯ ಎರಡು ಬದಿಯಲ್ಲಿ ನೆಟ್ಟಿರುವ ಬಹುತೇಕ ಸಸಿಗಳಿಗೆ ಸಮರ್ಪಕವಾದ ಆಸರೆ ಕಲ್ಪಿಸದ್ದರಿಂದ ಮುರಿದು ಬಿದ್ದಿವೆ ಎಂದು ಸದಸ್ಯರು ಹೇಳಿದರು.

ರೇಷ್ಮೆ ಇಲಾಖೆಯ ಅಧಿಕಾರಿ ಸಂಗಳದ ಸಭೆಗೆ ಮಾಹಿತಿ ನೀಡುತ್ತಿದ್ದಾಗ ಫಲಾನುಭವಿಗಳನ್ನು ಯಾವ ಮಾನದಂಡದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ತರಫದಾರ ಪ್ರಶ್ನಿಸಿದರು.

ಗೋಗೇರಿ, ಹೊಳೆಮಣ್ಣೂರ, ರಾಜೂರ ಸೇರಿದಂತೆ ಹಲವು ಗ್ರಾಮಗಳ ರೇಷ್ಮೆ ಬೆಳೆಗಾರರನ್ನು ಆಯ್ಕೆ ಮಾಡಲಾಗಿದೆ. ಇದು ಆನ್‍ಲೈನ್ ಪ್ರಕ್ರಿಯೆ ಎಂದು ಅಧಿಕಾರಿ ಮಾಹಿತಿ ನೀಡಿದರು.

12 ಕಾಮಗಾರಿ ಮಂಜೂರಿ: ನೀರಾವರಿ ಇಲಾಖೆಯಿಂದ ತಾಲ್ಲೂಕಿಗೆ 12 ಕಾಮಗಾರಿಗಳು ಮಂಜೂರಿಯಾಗಿದೆ ಎಂದು ಸಭೆಗೆ ಜಗದೀಶ ಮಡಿವಾಳರ ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಸಿದ್ದೇಶ ಕೊಡಿಹಳ್ಳಿ, ಜಿ.ಪಂ.ಎಇಇ ಕೆ.ಡಿ.ಕರಮಳ್ಳಿ, ಬಿಸಿಎಂ ವಿಸ್ತೀರ್ಣಾಧಿಕಾರಿ ಎಮ್.ಕೆ.ಸುರಕೋಡ, ಶಿಶು ಅಬಿವೃದ್ದಿ ಯೋಜನೆಯ ರಾಘವೇಂದ್ರ ಕೌಜಗೇರಿ, ತೋಟಗಾರಿಕೆ ಎಂ.ಎಂ. ತಾಮಭೋಟೆ, ಬಿಇಒ ನಂಜುಂಡಯ್ಯ, ಅಕ್ಷರ ದಾಸೋಹದ ಬಸವರಾಜ ಅಂಗಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಇಒ ಎಂ.ವಿ.ಚಳಗೇರಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !