ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಹಬ್ಬ ಸಂಭ್ರಮ; ಪ್ರಶಸ್ತಿ ಪ್ರದಾನ

Last Updated 18 ಅಕ್ಟೋಬರ್ 2021, 6:25 IST
ಅಕ್ಷರ ಗಾತ್ರ

ಗದಗ: ‘ದಲಿತ ಸಾಹಿತ್ಯ ಪರಿಷತ್‌ ಕೇವಲ ದಲಿತರ ಸಂಘಟನೆಯಲ್ಲ. ಬದಲಿಗೆ, ವಿಚಾರವಾದ ಹಾಗೂ ಪ್ರಗತಿಪರರ ವೇದಿಕೆಯಾಗಿದೆ’ ಎಂದು ಕಲಬುರಗಿ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಎಚ್.ಟಿ.ಪೋತೆ ಹೇಳಿದರು.

ನಗರದ ತೋಂಟದಾರ್ಯ ಕಲ್ಯಾಣ ಮಂದಿರದಲ್ಲಿ ಭಾನುವಾರ ನಡೆದ ದಲಿತ ಸಾಹಿತ್ಯ ಪರಿಷತ್‌ನ ‘ಬೆಳ್ಳಿ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವೇಶ್ವರರ ಉದಾತ್ತ ಧ್ಯೇಯಗಳನ್ನು ಅಳವಡಿಸಿಕೊಂಡಿದ್ದರೆ ಕರ್ನಾಟಕ ಜಾತ್ಯತೀತ ರಾಜ್ಯವಾಗುತ್ತಿತ್ತು. ಬಸವಣ್ಣನ ತತ್ವಗಳನ್ನು ಅನುಸರಿಸದೇ; ಅವರನ್ನು ಪೂಜಿಸುತ್ತಿರುವುದು ವಿಪರ್ಯಾಸವಾಗಿದೆ. ಸಂವಿಧಾನದಲ್ಲಿನ ಸೌಲಭ್ಯಗಳನ್ನು ಬಳಸಿಕೊಳ್ಳುತ್ತೇವೆ. ಆದರೆ ಅಂಬೇಡ್ಕರರ ಚಿಂತನೆಗಳನ್ನು ನೇಪಥ್ಯಕ್ಕೆ ಸರಿಸುತ್ತಿದ್ದೇವೆ. ಕೇವಲ ದಲಿತರ ಉದ್ಧಾರಕ್ಕೆ ಅಂಬೇಡ್ಕರ್‌ ಶ್ರಮಿಸಲಿಲ್ಲ. ಬದಲಿಗೆ ಭಾರತೀಯರ ಅಸ್ಮಿತೆಗೆ ಹೋರಾಡಿದರು. ಎಲ್ಲಾ ವರ್ಗದ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದ್ದು ಇದಕ್ಕೆ ಸಾಕ್ಷಿ’ ಎಂದು ಹೇಳಿದರು.

‘25 ವರ್ಷಗಳಿಂದ ಬುದ್ಧ, ಬಸವ, ಅಂಬೇಡ್ಕರ್‌ ತತ್ವಗಳನ್ನು ಜನಮಾನಸಕ್ಕೆ ತಲುಪಿಸುತ್ತಿರುವ ದಲಿತ ಸಾಹಿತ್ಯ ಪರಿಷತ್‌ನ ಕಾರ್ಯ ಶ್ಲಾಘನೀಯ. ಈ ನಿಟ್ಟಿನಲ್ಲಿ ದಸಾಪ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ ಗೊಳಸಂಗಿ ಅವರ ಶ್ರಮ ಸಾರ್ಥಕ’ ಎಂದು ಹೇಳಿದರು.

‘ವಿಜ್ಞಾನ ಎಷ್ಟೇ ಉತ್ತುಂಗಕ್ಕೇರಿದ್ದರೂ ಮೌಢ್ಯ ಆಚರಣೆ, ಜಾತಿ ಪದ್ಧತಿಯ ಬೇರುಗಳು ಇನ್ನಷ್ಟು ಬಲಿಷ್ಠವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಬುದ್ಧ-ಬಸವ-ಅಂಬೇಡ್ಕರರ ತತ್ವಗಳು ಸಾಮಾಜಿಕ ಸಮಸ್ಯೆಗಳಿಗೆ ದಿವ್ಯ ಔಷಧವಾಗಿವೆ’ ಎಂದರು.

‘ದಸಾಪ ಬೆಳ್ಳಿ ಸಂಭ್ರಮ’ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಕಲಬುರಗಿಯ ಡಾ.ಶ್ರೀಶೈಲ ನಾಗರಾಳ, ‘ಸಮಾಜದಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ. ಸನ್ಮಾನ ಸ್ವೀಕರಿಸಿದವರು ಇನ್ನಷ್ಟು ಸಮಾಜಮುಖಿ ಚಟುವಟಿಕೆಗಳತ್ತ ತೊಡಗಿಕೊಳ್ಳಬೇಕು’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ಕೋಮು ಸೌಹಾರ್ದದ ಹರಿಕಾರರಾಗಿದ್ದ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳು ದಸಾಪಕ್ಕೆ ಪ್ರೇರಕಶಕ್ತಿಯಾಗಿದ್ದಾರೆ. ಸಮತಾವಾದದ ಪ್ರತಿಪಾದಕರಾಗಿದ್ದ ಶ್ರೀಗಳು ಬುದ್ಧ-ಬಸವ-ಅಂಬೇಡ್ಕರ್‌, ಸಂತ ಸೇವಾಲಾಲರ ಪುರಾಣ ಬರೆಯಿಸಿ ಶ್ರೀಮಠದಲ್ಲೇ ಮೊದಲು ಅವುಗಳ ವಾಚನ ಏರ್ಪಡಿಸಿದ್ದ ಜಾಗೃತ ಕಾರ್ಯ ಅವಿಸ್ಮರಣೀಯ’ ಎಂದರು.

ಅಧ್ಯಕ್ಷತೆ ವಹಿಸಿದ್ದ ದಸಾಪ ರಾಜ್ಯ ಘಟಕದ ಅಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಮಾತನಾಡಿ, ‘ಶೋಷಿತರ ಧ್ವನಿಯಾಗಿರುವ ದಸಾಪ ತನ್ನ ಗುರಿಗಳನ್ನು ತಲುಪುವ ಹಂತದಲ್ಲಿದ್ದು, ವಿಷಮ ಪರಿಸ್ಥಿತಿಯಲ್ಲೂ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿದೆ. ಸರ್ಕಾರ ಅನುದಾನ ನೀಡದಿದ್ದರೂ ಎಂಟು ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ನಡೆಸಿದೆ. ಸಮ ಸಮಾಜ ನಿರ್ಮಾಣಕ್ಕೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

ಶರೀಫ ಬಿಳೆಎಲಿ ಹಾಗೂ ಸಂಗಡಿಗರ ಸಮತಾಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸುರಪುರದ ಪ್ರಾಚಾರ್ಯ ಡಾ.ಎಸ್.ಎಚ್ ಹೊಸಮನಿ ಅಭಿನಂದನಾ ನುಡಿ ಆಡಿದರು. ದಸಾಪ ಉಪಾಧ್ಯಕ್ಷ ಡಾ.ವೈ.ಎಂ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಎಚ್.ಬಿ ಕೋಲ್ಕಾರ ಸ್ವಾಗತಿಸಿದರು. ಡಾ.ಸುರೇಖಾ ರಾಠೋಡ ವಂದಿಸಿದರು. ಬಾಹುಬಲಿ ಜೈನರ್ ಹಾಗೂ ಮಂಜರಿ ಹೊಂಬಾಳಿ ನಿರೂಪಿಸಿದರು.

25 ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವೈ.ಎಸ್ ಹರಗಿ, ಮಾರುತಿ ಭೋಸಲೆ, ಡಾ.ಅಪ್ಪಣ್ಣ ಹಂಜೆ, ಬಿ.ಬಾಬು, ಶಂಕ್ರಣ್ಣ ಅಂಗಡಿ, ಎ.ಎಸ್.ಮಕಾನದಾರ, ಶಿವಾನಂದ ತಮ್ಮಣ್ಣವರ, ಡಾ.ನಿಂಗು ಸೊಲಗಿ, ವಿನಾಯಕ ಬಳ್ಳಾರಿ, ಮರುಳಸಿದ್ಧಪ್ಪ ದೊಡಮನಿ, ಕರೆಪ್ಪ ಶಿರಹಟ್ಟಿ, ಶಂಕ್ರಣ್ಣ ಸಂಕಣ್ಣವರ, ಡಾ.ಶಾಂತಕುಮಾರ ಭಜಂತ್ರಿ, ವಿರೂಪಾಕ್ಷಪ್ಪ ಗೊರವನವರ, ಮುತ್ತಣ್ಣ ಹಾಳಕೇರಿ, ಶರೀಫ ಬಿಳೆಎಲಿ, ಬಾಹುಬಲಿ ಜೈನರ್, ಬಸವರಾಜ ಜಕ್ಕಮ್ಮನವರ, ಮಂಜರಿ ಹೊಂಬಾಳಿ, ಸಾವಿತ್ರಿ ಲಮಾಣಿ, ಡಾ.ಬಿ.ಎಲ್ ಚವ್ಹಾಣ, ವಾಣಿಶ್ರೀ ಮಚಗಾರ, ಸಂಗಮೇಶ ಹರ್ಲಾಪೂರ, ಪರಶುರಾಮ ಪೂಜಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT