ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಶಂಕೆ; ತನಿಖೆಗೆ ಆಗ್ರಹ

ನಗರಸಭೆ ಮಳಿಗೆಗಳಿಗೆ ಟೆಂಡರ್ ಕರೆಯುವಂತೆ ಡಿಎಸ್‌ಎಸ್‌ ಒತ್ತಾಯ
Last Updated 24 ಆಗಸ್ಟ್ 2021, 16:10 IST
ಅಕ್ಷರ ಗಾತ್ರ

ಗದಗ: ‘2016ರಿಂದ ಈವರೆಗೆ ನಗರಸಭೆ ಮಳಿಗೆಗಳ ಟೆಂಡರ್ ಕರೆದಿಲ್ಲ. ಈಗ ನಗರಸಭೆಯಲ್ಲಿ ಅಧಿಕಾರಿಗಳ ಆಡಳಿತ ಇರುವುದರಿಂದ ಭ್ರಷ್ಟಾಚಾರ ನಡೆದಿರುವ ಬಗ್ಗೆ ಅನುಮಾನಗಳು ದಟ್ಟವಾಗಿವೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ, ತನಿಖೆಗೆ ಆದೇಶಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ತಮ್ಮಣ್ಣವರ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2016ರಲ್ಲಿ ಅವಧಿ ಮುಗಿದ ಬಳಿಕ ಬಹುತೇಕ ಮಳಿಗೆ ಬಾಡಿಗೆದಾರರು ನಗರಸಭೆಗೆ ಬಾಡಿಗೆಯನ್ನೇ ಭರಣಾ ಮಾಡಿಲ್ಲ. ಮಳಿಗೆ ಅವಧಿ ವಿಸ್ತರಣೆ ವೇಳೆ ನಿಯಮಗಳನ್ನು ಪಾಲಿಸಿಲ್ಲ. ಇದರಲ್ಲಿ ಅಧಿಕಾರಿಗಳದ್ದೂ ಪಾಲಿರುವ ಶಂಕೆ ಮೂಡಿದೆ. ಈ ಬಗ್ಗೆ ತನಿಖೆ ಆಗಬೇಕು’ ಎಂದು ಆಗ್ರಹಿಸಿದರು.

‘2011ರಲ್ಲೇ ಅವಧಿ ಮುಗಿದಿದ್ದ ಮಳಿಗೆಗಳನ್ನು ಅಂದು ಇದ್ದ ನಗರಸಭೆಯ ಚುನಾಯಿತ ಮಂಡಳಿ ಶೇ 30ರಷ್ಟು ಬಾಡಿಗೆ ಹೆಚ್ಚಿಸಿ, ಹಾಲಿ ಫಲಾನುಭವಿಗಳಿಗೆ ಮತ್ತೆ ಐದು ವರ್ಷಗಳ ಕಾಲ (2016ರವರೆಗೆ) ವಿಸ್ತರಿಸುವ ಬಗ್ಗೆ ಠರಾವು ಮಾಡಿದೆ. ಆದರೆ, ಈ ಠರಾವು ನಕಲಿ ಎಂಬ ಬಗ್ಗೆ ಅನುಮಾನ ಮೂಡುತ್ತಿದೆ. ಈ ಬಗ್ಗೆ ತನಿಖೆಯಾಗಬೇಕು. ಬಾಡಿಗೆ ಹೆಚ್ಚಿಸಿದ ಬಳಿಕ ನಗರಸಭೆಗೆ ಎಷ್ಟು ಆದಾಯ ಬಂದಿದೆ ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ’ ಎಂದು ಅವರು ಆರೋಪ ಮಾಡಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ಷರೀಫ ಬಿಳೆಯಲಿ ಮಾತನಾಡಿ, ‘ನಗರಸಭೆಯ 395 ಮಳಿಗೆಗಳಿದ್ದು, ಈ ಪೈಕಿ 332 ಮಳಿಗೆಗಳ ಅವಧಿ 2011ರಲ್ಲೇ ಪೂರ್ಣಗೊಂಡಿದೆ. 2007ರಲ್ಲಿ 20 ವರ್ಷಗಳವರೆಗೆ ಹಂಚಿಕೆಯಾದ ಕುಮಾರವ್ಯಾಸ ಕಾಂಪ್ಲೆಕ್ಸ್‌ನ 65 ಮಳಿಗೆಗಳ ಅವಧಿ ಇನ್ನೂ ಇದೆ. ಉಳಿದ ಮಳಿಗೆಗಳನ್ನು ಮರು ಟೆಂಡರ್ ಮಾಡಬೇಕು. ನಗರಸಭೆ ಮಾಲೀಕತ್ವದಲ್ಲಿರುವ ಹಾಗೂ ಅವಧಿ ಮುಗಿದಿರುವ ವಾಣಿಜ್ಯ ಮಳಿಗೆಗಳನ್ನು ರೋಸ್ಟರ್ ಅನ್ವಯ ಮರು ಟೆಂಡರ್ ಮಾಡಬೇಕು’ ಎಂದು ಅವರು ಒತ್ತಾಯಿಸಿದರು

‘2016ರಲ್ಲೇ ಅವಧಿ ಮುಗಿದಿರುವ ನಗರಸಭೆ ಮಳಿಗೆಗಳನ್ನು ಟೆಂಡರ್ ಕರೆದಿಲ್ಲ. ಇದರಲ್ಲಿ ನಗರಸಭೆ ಅಧಿಕಾರಿಗಳಿಂದ ಭ್ರಷ್ಟಾಚಾರ ನಡೆದಿರುವ ಬಗ್ಗೆ ಅನುಮಾನವನ್ನು ದುಪ್ಪಟ್ಟಾಗಿಸಿದೆ’ ಎಂದು ದೂರಿದರು.

ಆನಂದ ಸಿಂಗಾಡಿ, ಮುತ್ತು ಬಿಳೆಯಲಿ, ರಾಮಪ್ಪ ಚಲವಾದಿ, ಪರಶು ಕಾಳೆ, ಅನೀಲ ಕಾಳೆ, ಮಂಜು ಸಿತಾರಹಳ್ಳಿ, ಮಂಜುನಾಥ ಮಲ್ಲಸಮುದ್ರ ಇದ್ದರು.

ಮಾಹಿತಿ ಕೋರಿ ಆರ್‌ಟಿಐ ಅಡಿ ಸಲ್ಲಿಸಿದ ಅರ್ಜಿಗೆ ಆರು ತಿಂಗಳಾದರೂ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಈ ಬಗ್ಗೆ ನಗರಸಭೆಯ ಆಡಳಿತಾಧಿಕಾರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಅವರೂ ಸ್ಪಂದಿಸಿಲ್ಲ
ಷರೀಫ ಬಿಳೆಯಲಿ, ಡಿಎಸ್‍ಎಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT