ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಷನ್-–30 ಗುರಿ ಸಾಧಿಸುವ ವಿಶ್ವಾಸ

ಗದಗ–ಬೆಟಗೇರಿ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ
Last Updated 20 ಡಿಸೆಂಬರ್ 2021, 2:41 IST
ಅಕ್ಷರ ಗಾತ್ರ

ಗದಗ: ಈ ಬಾರಿಯ ಗದಗ-ಬೆಟಗೇರಿ ನಗರಸಭೆಯ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ 30 ಅಭ್ಯರ್ಥಿಗಳು ಗೆಲ್ಲಲಿದ್ದು, ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಚಿವ ಸಿ.ಸಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಗದಗ-ಬೆಟಗೇರಿ ನಗರಸಭೆಯ ಚುನಾವಣೆಯಲ್ಲಿ ಬಿಜೆಪಿಯು ‘ಮಿಷನ್-30’ ಗುರಿಯನ್ನು ಹೊಂದಿದೆ. ಅದಕ್ಕಾಗಿ ನನ್ನ ನೇತೃತ್ವದಲ್ಲಿ ಒಂದು, ಶಾಸಕ ಕಳಕಪ್ಪ ಬಂಡಿ, ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ ಹಾಗೂ ಮುಖಂಡ ಅನೀಲ ಮೆಣಸಿನಕಾಯಿ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಿದ್ದೇವೆ. ಹಾಗಾಗಿ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮಿಷನ್‌– 30 ಗುರಿ ಸಾಧಿಸಲಿದ್ದಾರೆ’ ಎಂದರು.

2 ತಿಂಗಳಲ್ಲಿ ಹಕ್ಕುಪತ್ರ: ‘ವಾರ್ಡ್‌ ನಂ.1,2,30 ಸೇರಿ ವಿವಿಧೆಡೆ ಇರುವ ಕಾಲೊನಿಗಳಲ್ಲಿ 20 ವರ್ಷಗಳಿಂದ ವಾಸಿಸುವ ಜನರಿಗೆ ಹಕ್ಕು ಪತ್ರಗಳನ್ನು ನೀಡುವಲ್ಲಿ ನಗರಸಭೆ ಆಡಳಿತ ಹಾಗೂ ಕಾಂಗ್ರೆಸ್‌ನ ನಾಯಕತ್ವ ವಿಫಲವಾಗಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲೇ ಹಕ್ಕುಪತ್ರ ನೀಡಲಾಗುವುದು. ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿ, ವಿಶೇಷ ಅನುದಾನ ತಂದು, ಅವಳಿ ನಗರದ ಅಭಿವೃದ್ಧಿ ಮುಂದಾಗುತ್ತೇವೆ’ ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಗದಗ – ಬೆಟಗೇರಿ ಚುನಾವಣೆಗೆ ಸಂಬಂಧಿಸಿದಂತೆ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಮೋಹನ ಮಾಳಶೆಟ್ಟಿ, ರೋಣ ಶಾಸಕ ಕಳಕಪ್ಪ ಜಿ.ಬಂಡಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜು ಕುರಡಗಿ, ಮುಖಂಡ ಅನೀಲ ಮೆಣಸಿನಕಾಯಿ ಇದ್ದರು.

ಭ್ರಷ್ಟಾಚಾರ ಮುಕ್ತ ಆಡಳಿತ: ಪಾಟೀಲ

ಗದಗ– ಬೆಟಗೇರಿಯ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲಾಗುವುದು. ಅಪೂರ್ಣಗೊಂಡಿರುವ ರಿಂಗ್ ರೋಡ್ ಕಾಮಗಾರಿ ಪೂರ್ಣಗೊಳಿಸುತ್ತೇವೆ. ಅವೈಜ್ಞಾನಿಕವಾಗಿರುವ 24x7 ನೀರು ಪೂರೈಕೆ ಹಾಗೂ ಒಳಚರಂಡಿ ಯೋಜನೆಯನ್ನು ವೈಜ್ಞಾನಿಕವಾಗಿ ಶಾಶ್ವತ ಪರಿಹಾರಕ್ಕೆ ತುರ್ತಾಗಿ ಮುಂದಾಗುತ್ತೇವೆ ಎಂದು ಸಚಿವ ಸಿ. ಸಿ. ಪಾಟೀಲ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT