ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರ ಹದ್ದಿನ ಕಣ್ಣು

ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತದಿಂದ ಬಿಗಿಕ್ರಮ
Last Updated 25 ಮಾರ್ಚ್ 2023, 6:03 IST
ಅಕ್ಷರ ಗಾತ್ರ

ಗದಗ: ಚುನವಾಣೆ ದಿನಾಂಕ ಘೋಷಣೆಗೂ ಮುನ್ನವೇ ಜಿಲ್ಲಾ ಪೊಲೀಸರು ಆಯಕಟ್ಟಿನ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದಿದ್ದು, ಅಕ್ರಮ ಎಸಗುವವರ ಮೇಲೆ ಹದ್ದಿನ ಕಣ್ಣು ಇರಿಸಿದ್ದಾರೆ. ಈವರೆಗೆ ₹2.50 ಕೋಟಿ ಮೌಲ್ಯದ ಹಣ ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

‘ಚುನಾವಣೆ ಸಮೀಪಿಸುತ್ತಿರುವ ಕಾರಣ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಅವರ ನೇತೃತ್ವದಲ್ಲಿ ನಗರ ಪ್ರವೇಶಿಸುವ ಸ್ಥಳಗಳು ಮತ್ತು ಜಿಲ್ಲಾ ಸರಹದ್ದುಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಜಿಲ್ಲೆಯ ವಿವಿಧೆಡೆ ಒಟ್ಟು 17 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಅಕ್ರಮ ತಡೆಗೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ನೇಮಗೌಡ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪೊಲೀಸ್‌ ಇಲಾಖೆ, ಅಬಕಾರಿ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಸಂಯೋಜನೆಯೊಂದಿಗೆ ಜಿಲ್ಲೆಯ ವಿವಿಧೆಡೆ ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ. ಸಣ್ಣ ಚೆಕ್‌ಪೋಸ್ಟ್‌ಗಳಲ್ಲಿ ನಾಲ್ಕರಿಂದ ಆರು ಮಂದಿ ಸಿಬ್ಬಂದಿ ಹಾಗೂ ದೊಡ್ಡ ಚೆಕ್‌ಪೋಸ್ಟ್‌ಗಳಿಗೆ ಅದಕ್ಕಿಂತಲೂ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ.

ಚೆಕ್‌ಪೋಸ್ಟ್‌ ಆರಂಭಿಸಿದ ನಂತರ ಪೊಲೀಸರು ಜಿಲ್ಲೆಯ ವಿವಿಧೆಡೆ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ಹಣ ಜಪ್ತಿ ಮಾಡಿದ್ದಾರೆ. ₹50 ಸಾವಿರದಿಂದ ₹20 ಲಕ್ಷದವರೆಗೂ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಪ್ರತಿನಿತ್ಯ ದಾಖಲೆ ಇಲ್ಲದ ಲಕ್ಷಾಂತರ ಹಣ ಜಪ್ತಿ ಆಗುತ್ತಿರುವುದು ಜಿಲ್ಲೆಯ ಜನರಿಗೆ ಅಚ್ಚರಿ ತರಿಸಿದೆ.

‘ದಾಖಲೆ ಇರಿಸಿಕೊಂಡು ಎಷ್ಟು ಹಣವನ್ನು ಬೇಕಾದರೂ ತೆಗೆದುಕೊಂಡು ಹೋಗಬಹುದು. ಆದರೆ, ದಾಖಲೆ ಇಲ್ಲದೇ ₹50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಸಾಗಿಸುವಂತಿಲ್ಲ. ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಹಣ ಒಯ್ಯುವವರು ತಪಾಸಣೆ ವೇಳೆ ದಾಖಲೆ ಒದಗಿಸಲು ಸಾಧ್ಯವಾಗದಿದ್ದರೆ; ತದನಂತರ ಮಾಹಿತಿ ಕೊಡಬಹುದು. ಬಳಿಕವೂ ದಾಖಲೆ ನೀಡಿದ್ದರೆ ಕಾನೂನಿನ ಪ್ರಕಾರ ಮುಂದಿನ ಕ್ರಮ ವಹಿಸಲಾಗುತ್ತದೆ’ ಎನ್ನುತ್ತಾರೆ ಎಸ್‌ಪಿ ನೇಮಗೌಡ.

ಗದಗ ಜಿಲ್ಲಾ ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ತೀವ್ರಗೊಳಿಸಿದ್ದು, ದಾಖಲೆ ಇಲ್ಲದ ಹಣದ ಜತೆಗೆ ಅಕ್ರಮ ಮದ್ಯ, ತಂಬಾಕು ಉತ್ಪನ್ನಗಳು, ಮೊಬೈಲ್‌ ಬಿಡಿಭಾಗಗಳು ಸೇರಿದಂತೆ ವಿವಿಧ ಪ್ರಕಾರದ ವಸ್ತುಗಳನ್ನು ಕೂಡ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಈವರೆಗೆ ಜಪ್ತಿ ಮಾಡಿರುವ ಹಣದಲ್ಲಿ ಚುನಾವಣೆ ಉದ್ದೇಶಕ್ಕೆ ಬಳಕೆ ಮಾಡಲು ಹಣ ಸಾಗಣೆ ಮಾಡುತ್ತಿದ್ದರು ಎಂಬ ಯಾವುದೇ ಪ್ರಕರಣ ಕಂಡುಬಂದಿಲ್ಲ.
-ಬಿ.ಎಸ್‌.ನೇಮಗೌಡ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT