ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಂಗಾ ಘಟಕ ಸ್ಥಾಪನೆ; 30 ಮಂದಿಗೆ ಉದ್ಯೋಗ

ರಫ್ತು ವಹಿವಾಟಿನಲ್ಲಿ ಯಶಸ್ಸು ಕಂಡ ಉದ್ಯಮಿ ವೀರಣ್ಣ ಬೇವಿನಮರದ
Last Updated 4 ಏಪ್ರಿಲ್ 2019, 16:54 IST
ಅಕ್ಷರ ಗಾತ್ರ

ಮುಂಡರಗಿ: ಕೇವಲ ಏಳನೇ ತರಗತಿ ಓದಿರುವ ಪಟ್ಟಣದ ವೀರಣ್ಣ ಫಕ್ಕೀರಪ್ಪ ಬೇವಿನಮರದ ಅವರು ಶೇಂಗಾ ಘಟಕ ಸ್ಥಾಪಿಸಿ ಆ ಮೂಲಕ ಸ್ಥಳೀಯವಾಗಿ 30 ಮಂದಿಗೆ ಕಾಯಂ ಉದ್ಯೋಗ ಒದಗಿಸಿದ್ದಾರೆ. ವಾರ್ಷಿಕ ₹3ರಿಂದ ₹4 ಕೋಟಿ ವಹಿವಾಟು ನಡೆಸುತ್ತಿರುವ ಅವರು, ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ₹20 ಲಕ್ಷ ಪಾವತಿಸುತ್ತಾರೆ.

ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ವೀರಣ್ಣ ಅವರು ಉದ್ಯಮಿಯಾಗಿ ಬೆಳೆದ ಹಿಂದೆ ಸತತ ಪರಿಶ್ರಮ ಅಡಗಿದೆ. ಪಟ್ಟಣದ ಎಪಿಎಂಸಿಯಲ್ಲಿ ಅವರು ಖರೀದಿದಾರರಾಗಿ ವೃತ್ತಿ ಪ್ರಾರಂಭಿಸಿದರು. ಸತತ ಪ್ರಯತ್ನ, ಕಾಯಕ ನಿಷ್ಠೆಯಿಂದಾಗಿ, ಈ ಉದ್ಯೋಗದಲ್ಲಿ ಹಂತ ಹಂತವಾಗಿ ಮೇಲೇರಿದರು. 1992ರಲ್ಲಿ ಪಟ್ಟಣದ ಕೊಪ್ಪಳ ರಸ್ತೆ ಬದಿ ಅಂದಪ್ಪ ಬೆಲ್ಲದ ಅವರ ಆವರಣದಲ್ಲಿ ಶೇಂಗಾ ಒಡೆಯುವ ಘಟಕವನ್ನು ಸ್ಥಾಪಿಸಿದರು.

ರೈತರಿಂದ ಶೇಂಗಾ ಖರೀದಿಸಿ, ಅದನ್ನು ತಮ್ಮ ಘಟಕದಲ್ಲಿ ಒಡೆದು ಅಂದರೆ ಸಿಪ್ಪೆ ಬೇರ್ಪಡಿಸಿ, ಕಾಳು ತೆಗೆದು ಅದನ್ನು ಬೇರೆಡೆಗೆ ರಫ್ತು ಮಾಡುತ್ತಾರೆ. ಪ್ರತಿನಿತ್ಯ ಸುಮಾರು 500ಚೀಲದಷ್ಟು ಶೇಂಗಾ ಒಡೆಯುತ್ತಾರೆ. ಗುಣಮಟ್ಟದ ಕಾಳನ್ನು ಪ್ರತ್ಯೇಕಿಸಿ, ಮಹಾರಾಷ್ಟ್ರ, ಪುಣೆ, ಮುಂಬೈ, ಗೋವಾ, ಚಳ್ಳಕೆರೆ ಸೇರಿದಂತೆ ಹಲವೆಡೆ ಪೂರೈಸುತ್ತಾರೆ. ಶೇಂಗಾ ಹಂಗಾಮಿನಲ್ಲಿ ಮತ್ತು ಬೇಡಿಕೆ ಹೆಚ್ಚಿದ್ದಾಗ, ರಾತ್ರಿ ವೇಳೆಯೂ ಇವರ ಘಟಕ ಕಾರ್ಯನಿರ್ವಹಿಸುತ್ತದೆ. ರಾತ್ರಿಯಲ್ಲೂ 400ರಿಂದ 500 ಚೀಲದಷ್ಟು ಶೇಂಗಾದ ಸಿಪ್ಪೆ ಬೇರ್ಪಡಿಸುತ್ತಾರೆ.

ಶೇಂಗಾ ಒಡೆಯುವ ಘಟಕದಲ್ಲಿ 8 ಮಂದಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಬೀಜಗಳನ್ನು ಹಸನು ಮಾಡಿ ಅದರಲ್ಲಿರುವ ಸಣ್ಣ ಕಲ್ಲು ಹಾಗೂ ಮತ್ತಿತರ ಕಸ ಕಡ್ಡಿಗಳನ್ನು ಬೇರ್ಪಡಿಸುವ ಕೆಲಸದಲ್ಲೂ 12 ಮಹಿಳೆಯರು ತೊಡಗಿಸಿಕೊಂಡಿದ್ದಾರೆ. 4ರಿಂದ 5 ಮಂದಿ ಹಮಾಲರು ಶೇಂಗಾ ತೂಕ ಮಾಡಿ, ಚೀಲಗಳಿಗೆ ತುಂಬುತ್ತಿರುತ್ತಾರೆ.ಈ ಘಟಕದ ಎಲ್ಲ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಹುಚ್ಚಪ್ಪ ಡೊಣ್ಣಿ ಹಾಗೂ ಶಿವಪ್ಪ ಲದ್ದಿ ಎಂಬ ಇಬ್ಬರು ಕಾರಕೂನರು ಇದ್ದಾರೆ. ವೀರಣ್ಣನವರ ಮಗ ವಿಜಯಕುಮಾರ ಅವರು ಈ ಘಟಕ ಉಸ್ತುವಾರಿ ನೋಡಿಕೊಳ್ಳುತ್ತಾರೆ.

ಶೇಂಗಾಕ್ಕೆ ಎಲ್ಲ ಹಂಗಾಮಿನಲ್ಲೂ ದೇಶದ ಎಲ್ಲ ಭಾಗಗಳಲ್ಲೂ ಬೇಡಿಕೆ ಇರುತ್ತದೆ. ಇತ್ತೀಚೆಗೆ ಮಳೆ ಕೊರತೆಯಿಂದ ಸ್ಥಳೀಯವಾಗಿ ಗುಣಮಟ್ಟದ ಕಾಳುಗಳು ಬರುತ್ತಿಲ್ಲ. ಯಾವುದೇ ಉದ್ಯಮವಾದರೂ ಅದರಲ್ಲಿ ಸ್ಪರ್ಧೆ ಇರುತ್ತದೆ ಎನ್ನುತ್ತಾರೆವೀರಣ್ಣ ಬೇವಿನಮರದ.

*

ನವೋದ್ಯಮ ಸ್ಥಾಪಿಸಲು ಇಂದು ಯುವಕರಿಗೆ ಸಾಕಷ್ಟು ಅವಕಾಶಗಳಿವೆ. ಸತತ ಪರಿಶ್ರಮ ಮತ್ತು ಪ್ರಾಮಾಣಿಕತೆ ಇದ್ದರೆ ಉದ್ಯಮದಲ್ಲಿ ಮೇಲೆ ಬರಬಹುದು.
-ವೀರಣ್ಣ ಬೇವಿನಮರದ, ಉದ್ಯಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT