ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನೇತ್ರದಾನದ ಅರಿವು ಮೂಡಿಸಿ'

ರಸ್ತೆ ಅಪಘಾತಗಳ ಕುರಿತು ಅರಿವು ಕಾರ್ಯಕ್ರಮದಲ್ಲಿ ಡಾ.ಕೃಷ್ಣಪ್ರಸಾದ
Last Updated 5 ಏಪ್ರಿಲ್ 2022, 4:33 IST
ಅಕ್ಷರ ಗಾತ್ರ

ಗದಗ: ‘ಅಂಧರ ಬಾಳಿಗೆ ಬೆಳಕು ನೀಡಬಲ್ಲ ಶಕ್ತಿ ನೇತ್ರದಾನಕ್ಕೆ ಇದ್ದು, ಯುವಜನರು ನೇತ್ರದಾನ ಮಾಡುವಂತೆ ಹೆಚ್ಚಿನ ಜನರಿಗೆ ಪ್ರೇರಣೆ ನೀಡಬೇಕು’ ಎಂದು ಹುಬ್ಬಳ್ಳಿಯ ಎಂ.ಎಂ.ಜೋಶಿ ನೇತ್ರ ಚಿಕಿತ್ಸಾಲಯದ ಡಾ.ಕೃಷ್ಣಪ್ರಸಾದ್‌ ಹೇಳಿದರು.

ನಗರದ ಟಿ.ಸಿ.ಇ ಮಹಾವಿದ್ಯಾಲಯದಲ್ಲಿ ತೋಂಟದಾರ್ಯ ಜಾತ್ರಾ ಮಹೋತ್ಸವದ ಆರೋಗ್ಯ ಸಮಿತಿಯವರು ಸೋಮವಾರ ಏರ್ಪಡಿಸಿದ್ದ ರಕ್ತದಾನ, ನೇತ್ರದಾನ ಹಾಗೂ ರಸ್ತೆ ಅಪಘಾತಗಳ ಕುರಿತು ಅರಿವು ಕಾರ್ಯಕ್ರಮದಲ್ಲಿ ಅವರು ‘ನೇತ್ರದಾನದ ಮಹತ್ವ’ ವಿಷಯ ಕುರಿತು ಉಪನ್ಯಾಸ ನೀಡಿದರು.

‘ವರ್ಷಕ್ಕೆ ಸುಮಾರು 60ರಿಂದ 70 ಲಕ್ಷ ಜನರು ಸಾವನ್ನಪ್ಪುತ್ತಾರೆ. ಆದರೆ, ಇವರಲ್ಲಿ ನೇತ್ರದಾನಿಗಳ ಸಂಖ್ಯೆ ತೀರಾ ಕ್ಷೀಣವಾಗಿರುತ್ತದೆ. ನೇತ್ರದಾನವೆಂದರೆ ಕಣ್ಣುಗಳನ್ನು ಪೂರ್ತಿಯಾಗಿ ಕಿತ್ತುಕೊಳ್ಳುವುದು, ನೇತ್ರದಾನದಿಂದ ಮುಖ ವಿಕಾರವಾಗುತ್ತದೆ ಎಂಬೆಲ್ಲ ತಪ್ಪು ಕಲ್ಪನೆಗಳು ಜನರಲ್ಲಿದೆ. ಆದರೆ, ಕಣ್ಣಿನ ಒಳಪದರ ಕಾರ್ನಿಯಾವನ್ನಷ್ಟೇ ಕಣ್ಣುಗಳಿಂದ ಬೇರ್ಪಡಿಸಲಾಗುತ್ತಿದ್ದು ಇದರ ಅವಶ್ಯಕತೆಯಷ್ಟೇ ಅಂಧರಿಗೆ ಇರುತ್ತದೆ. ಸತ್ತನಂತರವೂ ಮತ್ತೊಬ್ಬರ ಬಾಳಿಗೆ ಬೆಳಕಾಗುವ ಮೂಲಕ ಸಾರ್ಥಕತೆ ಮೆರೆಯುವ ನೇತ್ರದಾನದ ಜಾಗೃತಿ ಮೂಡಿಸುವುದು ಅತಿ ಅವಶ್ಯಕವಾಗಿದೆ’ ಎಂದರು.

ಐಎಂಎ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ.ಆರ್.ಟಿ. ಪವಾಡಶೆಟ್ಟರ ‘ರಕ್ತದಾನದ ಮಹತ್ವ’ ಕುರಿತು ಉಪನ್ಯಾಸ ನೀಡಿ, ಕೆಲವು ವರ್ಷಗಳ ಹಿಂದೆ ರಕ್ತದ ಅವಶ್ಯಕತೆ ಇದ್ದಲ್ಲಿ ಹುಬ್ಬಳ್ಳಿಗೆ ತೆರಳುವ ಅನಿವಾರ್ಯತೆ ಗದುಗಿನ ಜನರದ್ದಾಗಿದ್ದು, ಈ ಪರಿಸ್ಥಿತಿಯನ್ನು ಮನಗಂಡು 2001ರಲ್ಲಿ ಇಲ್ಲಿ ಐಎಂಎ ಬ್ಲಡ್‍ಬ್ಯಾಂಕ್ ಸ್ಥಾಪಿಸಲಾಯಿತು. ಸರ್ಕಾರಿ ಆಸ್ಪತ್ರೆ ಹಾಗೂ ಚಾರಿಟಬಲ್ ಟ್ರಸ್ಟ್‌ಗಳಲ್ಲಿ ರಕ್ತದಾನ ಮಾಡುವುದು ಸೂಕ್ತವಾಗಿದ್ದು, ರಕ್ತದಾನದಿಂದ ಇನ್ನೊಂದು ಜೀವಕ್ಕೆ ಆಸರೆಯಾಗುವ ಸುಕೃತ ನಮ್ಮದಾಗುತ್ತದೆ’ ಎಂದರು.

ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿ ಬಾಲಚಂದ್ರ ‘ಅಪಘಾತ ಸುರಕ್ಷತಾ ಕ್ರಮ’ಗಳ ಕುರಿತು ಉಪನ್ಯಾಸ ನೀಡಿ, ವರ್ಷವೊಂದಕ್ಕೆ ಸುಮಾರು ಒಂದು ಲಕ್ಷ ಜನ ರಸ್ತೆ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದು, ಚಾಲಕರ ಅಜಾಗರೂಕತೆ ಅಪಘಾತಗಳ ಪ್ರಾಥಮಿಕ ಕಾರಣವಾಗಿದೆ. ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು, ಹೆಲ್ಮೆಟ್, ಸೀಟ್‍ಬೆಲ್ಟ್ ಧರಿಸುವುದು ನಮ್ಮ ಜೀವರಕ್ಷಣೆಗಾಗಿಯೇ ಎಂಬುದನ್ನು ಜನರು ಮರೆಯಬಾರದು ಎಂದರು.

ಮೃತ್ಯುಂಜಯ ಹಿರೇಮಠ ವಚನಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಟಿ.ಸಿ.ಇ ಕಾಲೇಜು ಪ್ರಾಚಾರ್ಯ ಡಾ.ಮಹೇಶ ಆವಟಿ ಸ್ವಾಗತಿಸಿದರು. ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ತೋಂಟದಾರ್ಯ ಜಾತ್ರಾ ಮಹೋತ್ಸವದ ಆರೋಗ್ಯ ಸಮಿತಿ ಅಧ್ಯಕ್ಷ ಡಾ.ಪ್ರಕಾಶ ಸಂಕನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಕಾರ್ಯದರ್ಶಿ ಡಾ.ಸುಭಾಸ ಶಿವನಗೌಡರ ಅತಿಥಿಗಳನ್ನು ಪರಿಚಯಿಸಿದರು. ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ಎಸ್.ಎಸ್ ಪಾಟೀಲ, ಡಾ.ಪ್ಯಾರಾ ಅಲಿ ನೂರಾನಿ, ಮಾರುತಿ ನೇತ್ರಾಲಯದ ಡಾ.ವಿಜಯಕುಮಾರ ಸಜ್ಜನರ, ನೇತ್ರ ತಜ್ಞ ಡಾ.ಸುಶಾಂತ ಚಾಫೇಕರ, ಕೊಟ್ರೇಶ ಮೆಣಸಿನಕಾಯಿ ವೇದಿಕೆ ಮೇಲಿದ್ದರು.

‘ನಿಮ್ಮ ಇಚ್ಛೆಗೆ ಬಿಟ್ಟಿದ್ದು’

‘ಅಪಘಾತಗೊಂಡವರನ್ನು ಆಸ್ಪತ್ರೆಗೆ ದಾಖಲಿಸುವುದರಿಂದ ಹಲವಾರು ಕಾನೂನು ತೊಡಕುಗಳನ್ನು ಎದುರಿಸಬೇಕಾಗುತ್ತದೆ ಎಂದು ಭಾವಿಸುವುದು ತಪ್ಪು’ ಎಂದುವಕೀಲ ದೀಪಕ್ ಶೆಟ್ಟರ್ ಹೇಳಿದರು.

‘2014ರ ಗುಡ್ ಸಮರೇಟನ್ ಕಾಯ್ದೆ ಅನ್ವಯ ಅಪಘಾತಗೊಂಡ ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸುವವರು ತಮ್ಮ ವೈಯಕ್ತಿಕ ಮಾಹಿತಿಯನ್ನು ಹೇಳದೇ ಇರಬಹುದು. ಕೋರ್ಟ್‌ನಲ್ಲಿ ಸಾಕ್ಷ್ಯ ಹೇಳುವುದು ಸಹ ಅವರ ಇಚ್ಛೆಗೆ ಬಿಟ್ಟ ವಿಷಯವಾಗಿದ್ದು, ಒಂದು ವೇಳೆ ಸಾಕ್ಷಿ ನೀಡಲು ಒಪ್ಪಿದರೆ ಖುದ್ದು ಕೋರ್ಟಿನವರೇ ಕಕ್ಷಿದಾರನ ಹತ್ತಿರ ಬಂದು ಸಾಕ್ಷಿ ತೆಗೆದುಕೊಳ್ಳುತ್ತಾರೆ ಆದ್ದರಿಂದ ಅಪಘಾತಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲು ಮೀನ-ಮೇಷ ಎಣಿಸದಿರಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT