ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡ ಮಲ್ಲಿಕಾರ್ಜುನಗೌಡ

ಬೆಳ್ಳುಳ್ಳಿ ಬೆಳೆಯುವಲ್ಲಿ ಮುಂದು: ರೈತ ದಂಪತಿ ಕೃಷಿ ಎಲ್ಲರಿಗೂ ಮಾದರಿ
Last Updated 23 ಸೆಪ್ಟೆಂಬರ್ 2022, 6:34 IST
ಅಕ್ಷರ ಗಾತ್ರ

ನರಗುಂದ: ‘ಕೃಷಿ ಎನ್ನುವುದು ಖುಷಿ ತರುವ ಉದ್ಯೋಗ. ನಿತ್ಯ ಹೊಲದಲ್ಲಿ ಶ್ರಮವಹಿಸಿ ಕೆಲಸ ಮಾಡುವವರಿಗೆ ಒಂದಿಲ್ಲೊಂದು ರೀತಿಯಲ್ಲಿ ಲಾಭ ಕಟ್ಟಿಟ್ಟ ಬುತ್ತಿ. ಬಿಳಿ ಉದ್ದನೆ ಅಂಗಿ ಧರಿಸಿ ನಾನು ರೈತ ಎಂದು ಘೋಷಿಸಿಕೊಂಡರೆ ಆದಾಯ ತರಲು ಸಾಧ್ಯವಿಲ್ಲ’ ಎನ್ನುತ್ತಾರೆ ಕೃಷಿಯಲ್ಲಿ ಖುಷಿ ಕಂಡ ತಾಲ್ಲೂಕಿನ ಗಂಗಾಪುರದ ಮಲ್ಲಿಕಾರ್ಜುನಗೌಡ ಶಂಕರಗೌಡ ಪಾಟೀಲ.

ಮಲ್ಲಿಕಾರ್ಜುನ ಅವರ ಸಮಗ್ರ ಕೃಷಿ ಪದ್ಧತಿ ಎಲ್ಲರಿಗೂ ಮಾದರಿಯಾಗಿದೆ. ಇವರ ಜತೆಗೆ ಅವರ ಪತ್ನಿ ಶಿವಲೀಲಾ ನಿರಂತರ ಸಾಥ್ ನೀಡಿ ದಂಪತಿಗಳಿಬ್ಬರೂ ಕೃಷಿಯಲ್ಲಿ ತೊಡಗಿಕೊಂಡು ನಿರಂತರ ಆದಾಯ ಪಡೆದುಕೊಳ್ಳುತ್ತಿದ್ದಾರೆ.

ಸುಮಾರು 80 ಎಕರೆ ಜಮೀನು ಹೊಂದಿರುವ ಇವರು ತೋಟಗಾರಿಕೆ, ತರಕಾರಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಸುತ್ತಮುತ್ತಲಿನ ರೈತರು ಅಚ್ಚರಿಪಡುವ ರೀತಿಯಲ್ಲಿ ಯಶಸ್ಸು ಸಾಧಿಸಿದ್ದಾರೆ. 40 ಎಕರೆ ಜಮೀನಿನಲ್ಲಿ ಕೊಳವೆ ಬಾವಿ, ಹಳ್ಳದ ನೀರಿನ ಮೂಲಕ ನೀರಾವರಿ ಹೊಂದಿದ್ದು, ನಿರಂತರ ಕೃಷಿಗೆ ಅನುಕೂಲವಾಗಿದೆ. ಇನ್ನುಳಿದ 40 ಎಕರೆ ಒಣ ಬೇಸಾಯದ ಭೂಮಿ ಇದ್ದು ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಬೆಳ್ಳುಳ್ಳಿಗೆ ಹೆಸರಾದ ರೈತ: ತಾಲ್ಲೂಕಿನಲ್ಲಿಯೇ ಹೆಚ್ಚು ಬೆಳ್ಳುಳ್ಳಿ ಬೆಳೆಯುವ ಮಲ್ಲಿಕಾರ್ಜುನ ಗೌಡ ಎಕರೆಗೆ 15 ಕ್ವಿಂಟಲ್‌ವರೆಗೆ ಇಳುವರಿ ತೆಗೆಯುತ್ತಾರೆ. ಕ್ವಿಂಟಲ್‌ಗೆ ₹6 ಸಾವಿರದಿಂದ ₹18 ಸಾವಿರದವರೆಗೂ ಆದಾಯ ಪಡೆಯುವ ಇವರು ಮೆಣಸಿನಕಾಯಿಯಲ್ಲೂ ವಿಶೇಷ ಆದಾಯ ಗಳಿಸುತ್ತಿದ್ದಾರೆ. ವಿವಿಧ ಬ್ಯಾಡಗಿ ಮೆಣಸಿನಕಾಯಿ ತಳಿಗಳನ್ನು ಬೆಳೆದು ಕ್ವಿಂಟಲ್‌ಗೆ ₹70 ಸಾವಿರದವರೆಗೂ ಮಾರುತ್ತಾರೆ. ಹೆಸರು,ಹತ್ತಿ, ಮೆಕ್ಕೆಜೋಳ, ಕಡಲೆ ,ಸಿರಿಧಾನ್ಯಗಳು ಸೇರಿದಂತೆ ಎಲ್ಲ ಬೆಳೆಗಳನ್ನು ಬೆಳೆಯುವ ದಂಪತಿ ರೈತರ ಕೃಷಿ ಎಲ್ಲರಿಗೂ ಮಾದರಿ ಆಗಿದೆ. ಅಗಸೆ,ಕುಸಬಿ,ತೊಗರಿ, ಗುರೆಳ್ಳು ಸೇರಿದಂತೆ ಅಂತರ್.ಬೇಸಾಯ ಪದ್ದತಿಗೂ ಸೈ ಎನಿಸಿಕೊಂಡಿದ್ದಾನೆ.

ಸಮಗ್ರ ಕೃಷಿ: 600 ಪೇರಲ ಗಿಡಗಳು, 100 ಮಹಾ ಗನಿ, ‌ನೇರಳೆ, ಬೆಟ್ಟದ ನೆಲ್ಲಿ ಬೆಳೆದರೆ, ಕರಬೇವು, ನುಗ್ಗೆ, ಈರುಳ್ಳಿ, ಕ್ಯಾಬೇಜ್ ಸೇರಿದಂತೆ ಎಲ್ಲ ರೀತಿಯ ತರಕಾರಿ ಬೆಳೆಯುತ್ತಾರೆ. ಈರುಳ್ಳಿ ಸಂಗ್ರಹ ಘಟಕ ಹೊಂದಿರುವ ಇವರು ಈರುಳ್ಳಿ ಬೀಜೋತ್ಪಾದನೆ ಮಾಡುತ್ತಾರೆ.

‘ಭೂಮಿಯು ನಮ್ಮ ದೇಹದಂತೆ ಅದರ ಅಗತ್ಯತೆ ಅರಿತು ಪೋಷಕಾಂಶಗಳನ್ನು,ಗೊಬ್ಬರವನ್ನು ನೀಡಬೇಕು. ಕಾಲ ಕಾಲಕ್ಕೆ ಪ್ರತಿ ವರ್ಷ ಮಣ್ಣು ಪರೀಕ್ಷೆ ನಡೆಸಿ ಪೋಷಕಾಂಶ ಒದಗಿಸಬೇಕು. ಆಗ ಅಂದುಕೊಂಡ ಬೆಳೆ ಬೆಳೆಯಲು ಸಾಧ್ಯ’ ಎನ್ನುತ್ತಾರೆ ಮಲಕಾಜಗೌಡ.

ಪ್ರಯೋಗದಲ್ಲಿ ಆಸಕ್ತಿ: ಕೇವಲ ಪಿಯುಸಿ ಓದಿದರೂ ಕೃಷಿಯಲ್ಲಿ ಹೊಸ ಪ್ರಯೋಗ ಮಾಡಬೇಕೆನ್ನುವ ಸಂಶೋಧನೆಯಲ್ಲಿ ಆಸಕ್ತಿ ಹೊಂದಿದ ಈ ರೈತ ನಿರಂತರ ಕೃಷಿ ವಿಜ್ಞಾನಿಗಳ ಸಲಹೆ ಪಡೆಯುತ್ತಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ದ್ರಾಕ್ಷಿ ತೋಟ ಮಾಡಿರುವುದು ಇವರ ಕೃಷಿ ಸಾಧನೆಗೆ ಸಾಕ್ಷಿ.

ಸಾವಯವ,ರಸಾಯನಿಕ, ಯಂತ್ರಗಳ ಬಳಕೆ, ಹನಿ ನೀರಾವರಿ ಸೇರಿದಂತೆ ಎಲ್ಲ ರೀತಿಯ ಕೃಷಿ ಪದ್ಧತಿಗಳನ್ನು ಅನುಸರಿಸುವ ಈತ ಜಿಲ್ಲೆಯಲ್ಲಿಯೇ ಮಾದರಿ ರೈತರಾಗಿದ್ದಾರೆ. ಮಲ್ಲಿಕಾರ್ಜುನ ಅವರಿಗೆ 2021ರಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಸಂದಿದೆ. ಅವರ ಪತ್ನಿ ಶಿವಲೀಲಾ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಪಡೆದಿದ್ದಾರೆ.

ಮಲ್ಲಿಕಾರ್ಜುನಗೌಡ ಪಾಟೀಲ ಪೇರಲ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಸಮಗ್ರ ಕೃಷಿಯಲ್ಲಿ ಖುಷಿಯಲ್ಲಿ ತೊಡಗಿಸಿಕೊಂಡಿರುವುದು
ಮಲ್ಲಿಕಾರ್ಜುನಗೌಡ ಪಾಟೀಲ ಪೇರಲ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಸಮಗ್ರ ಕೃಷಿಯಲ್ಲಿ ಖುಷಿಯಲ್ಲಿ ತೊಡಗಿಸಿಕೊಂಡಿರುವುದು

ಬಜೆಟ್‌ ಮಾದರಿ ಲೆಕ್ಕಾಚಾರ
ಲೆಕ್ಕ ಚೊಕ್ಕ
: ಬಜೆಟ್ ಮಂಡಿಸುವ ರೀತಿಯಲ್ಲಿ ಪ್ರತಿ ದಿನದ ಖರ್ಚು ಬರೆದು,ಪ್ರತಿ ವರ್ಷದ ಆದಾಯಕ್ಕೆ ತಾಳೆ ಮಾಡುವ ಮಲ್ಲಿಕಾರ್ಜುನ ಪ್ರತಿ ಮಾರ್ಚ್‌ ತಿಂಗಳಲ್ಲಿ ಆದಾಯ,ಉಳಿತಾಯ, ವೆಚ್ಚಗಳ ಲೆಕ್ಕ ಬರೆದು ಮುಂದಿನ ವರ್ಷ ಹೇಗೆ ಕೃಷಿ ಕೈಗೊಳ್ಳಬೇಕು ಎಂದು ಲೆಕ್ಕಹಾಕುವ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ.

ಸಾವಯವ ಗೊಬ್ಬರ ತಯಾರಿಕೆ
ಹೊಂಗೆ, ಬೇವಿನ ಬೀಜಗಳನ್ನು ಸಂಗ್ರಹಿಸಿ ಪುಡಿ ಮಾಡಿ ಸೆಗಣಿ ಗೊಬ್ಬರದೊಂದಿಗೆ ಮಿಶ್ರಣ ಮಾಡುತ್ತಾನೆ. ಭೂಮಿ ಫಲವತ್ತತೆಗೆ ಸೆಣಬು,ಅಲಸಂದಿ ಬಿತ್ತನೆ ಮಾಡಿ 40 ದಿನಗಳ ನಂತರ ಹಸಿರೆಲೆ ಗಳನ್ನು ಗೊಬ್ಬರವಾಗಿ ಪರಿವರ್ತಿಸುವುದು ಸಹಾಯಕವಾಗಿದೆ. ಡಿಕಾಂಪೋಸ್ಟ್ ತಂದು ಬೆಲ್ಲದ ಮಿಶ್ರಣ ಮಾಡಿ 40ದಿನದ ನಂತರ ಗೊಬ್ಬರವಾಗಿ ಬಳಸುವುದು ಸಾವಯವ ಕೃಷಿಗೆ ಸಾಕ್ಷಿ.

***

ಮಲ್ಲಿಕಾರ್ಜುನಗೌಡರ ಕೃಷಿಯಲ್ಲಿ ಹೊಸ ಪ್ರಯೋಗ,ನಿರಂತರ ದುಡಿಮೆ ಆದರ್ಶ ರೈತರಾಗಲು ಸಾಧ್ಯವಾಗಿದೆ.
–ಹಾಲವರ, ಆತ್ಮಾ ಯೋಜನೆ, ಕೃಷಿ ಅಧಿಕಾರಿ ನರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT