ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ‘ವರ’ವಾದ ಕೃಷಿಹೊಂಡ..!

Last Updated 4 ಜುಲೈ 2018, 17:54 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಕಳೆದೆರಡು ವಾರಗಳಿಂದ ತಾಲ್ಲೂಕಿನಲ್ಲಿ ಮಳೆ ಕೈಕೊಟ್ಟಿದ್ದು, ತೇವಾಂಶದ ಕೊರತೆಯಿಂದಾಗಿ ಬೆಳೆಗಳು ಬಾಡಲು ಪ್ರಾರಂಭಿಸಿವೆ. ಆದರೆ, ಮಳೆ ಕೊರತೆಯಿಂದ ಕಂಗಾಲಾಗಿರುವ ರೈತರಿಗೆ ಕೃಷಿ ಹೊಂಡಗಳು ಹೊಸ ಭರವಸೆ ಮೂಡಿಸಿವೆ.

ತಾಲ್ಲೂಕಿನಲ್ಲಿ ಕಳೆದ 3 ವರ್ಷಗಳಲ್ಲಿ 849ಕ್ಕೂ ಹೆಚ್ಚು ರೈತರು ತಮ್ಮ ಜಮೀನಿನಲ್ಲಿ 1,500ಕ್ಕೂ ಹೆಚ್ಚು ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಮುಂಗಾರು ಪೂರ್ವದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಬಹುತೇಕ ಕೃಷಿ ಹೊಂಡಗಳು ಭರ್ತಿಯಾಗಿವೆ. ಈ ಕೃಷಿ ಹೊಂಡದ ನೀರನ್ನೇ ಹನಿ ನೀರಾವರಿ ಪದ್ಧತಿ ಮೂಲಕ ಬಳಸಿಕೊಂಡು, ಬೆಳೆ ಉಳಿಸಿಕೊಳ್ಳುವ ಪ್ರಯತ್ನವನ್ನು ಅನ್ನದಾತರು ಮಾಡುತ್ತಿದ್ದಾರೆ.

ಕಳೆದೊಂದು ವಾರದಿಂದ ದಟ್ಟ ಮೋಡಗಳು ಇದ್ದರೂ, ಗಾಳಿ ವೇಗ ಹೆಚ್ಚಿರುವುದರಿಂದ ಮೋಡಗಳು ಚದುರಿ ಮಳೆ ಆಗುತ್ತಿಲ್ಲ. ಈ ಬಾರಿ ಮುಂಗಾರು ಪೂರ್ವದಲ್ಲಿ ಆಗಿದ್ದ ಉತ್ತಮ ಮಳೆಯಿಂದ ಉತ್ಸಾಹಗೊಂಡ ರೈತರು, ಹೆಸರು, ಶೇಂಗಾ ಬಿತ್ತನೆ ಮಾಡಿದ್ದರು. ಈಗ ಮಳೆ ಕೊರತೆ ಎದುರಾಗಿದೆ.

‘ಮಳೆ ಕ್ಷೀಣಿಸಿರುವ ಈ ಹೊತ್ತಿನಲ್ಲಿ ಕೃಷಿ ಹೊಂಡಗಳು ರೈತರಿಗೆ ವರದಾನವಾಗಿವೆ. ಪ್ರತಿಯೊಬ್ಬರೂ ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಆದ್ಯತೆ ನೀಡಬೇಕು’ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಫ್.ಎಸ್. ರಾಯನಗೌಡರ ಹೇಳಿದರು.

ಇಲ್ಲಿಗೆ ಸಮೀಪದ ಹರದಗಟ್ಟಿ ಗ್ರಾಮದ ರೈತ ಹೂವಪ್ಪ ಲಮಾಣಿ ಅವರು 9 ಎಕರೆಯಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ. ಬೆಳೆ ಮೊಳಕೆಯೊಡೆದು ನಿಂತಿದೆ. ಮಳೆ ಇಲ್ಲದ ಕಾರಣ, ತಮ್ಮ ಹೊಲದಲ್ಲಿನ ಕೃಷಿಹೊಂಡದ ನೀರನ್ನೇ ಬಳಸಿಕೊಂಡು ಬೆಳೆ ಉಳಿಸಿಕೊಳ್ಳುತ್ತಿದ್ದಾರೆ.

‘ಒಂದು ಸಲಾ ನೀರು ಕೊಟ್ಟರ ಸಾಕ್ರೀ ಹೆಸರು ಬಂದಂಗ. ಕೃಷಿಹೊಂಡ ನಮ್ಗ ಭಾಳ ಅನುಕೂಲ ಆಗೇತ್ರೀ’ ಎಂದು ಹೂವಪ್ಪ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT