ಭಾನುವಾರ, ಏಪ್ರಿಲ್ 2, 2023
33 °C

‘ಪ್ರಜಾವಾಣಿ’ ಅಮೃತ ಮಹೋತ್ಸವ ಸಂಭ್ರಮ: ಗ್ರಾಮೀಣಾಭಿವೃದ್ಧಿ ವಿವಿ ಜೊತೆ ರೈತ ದಿನಾಚರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯವು ರೈತ ಸಮುದಾಯಕ್ಕೆ ಮುಕ್ತ ವಿಶ್ವವಿದ್ಯಾಲವಿದ್ದಂತೆ. ರೈತರು ಯಾವುದೇ ಸಮಯದಲ್ಲಿ ಭೇಟಿ ನೀಡುವ ಮೂಲಕ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸಂಶೋಧನೆ ಹಾಗೂ ವಿಸ್ತೀರ್ಣ ಚಟುವಟಿಕೆಗಳ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಕುಲಪತಿ ಪ್ರೊ. ವಿಷ್ಣುಕಾಂತ ಎಸ್. ಚಟಪಲ್ಲಿ ತಿಳಿಸಿದರು.

‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಫಲದ ಆಗ್ರೋ ರೀಸರ್ಚ್‌ ಫೌಂಡೇಷನ್‌ ಸಹಭಾಗಿತ್ವದಲ್ಲಿ ಇಲ್ಲಿನ ಮಾದರಿ ಸಸ್ಯ ಶಿಶುಪಾಲನಾ ಕೇಂದ್ರದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷಿಕರು, ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ಮಾರುಕಟ್ಟೆ ವ್ಯವಸ್ಥೆ ಇವೆಲ್ಲವನ್ನೂ ಸಂಯೋಜಿಸುವ ಒಂದು ಸಂಸ್ಥೆಯಾಗಿ ವಿಶ್ವವಿದ್ಯಾಲಯ ಕೆಲಸ ಮಾಡುತ್ತಿದೆ. ಹಾಗಾಗಿ, ನಮ್ಮ ವಿಶ್ವವಿದ್ಯಾಲಯ ಬೆಳೆದರೆ ಗ್ರಾಮೀಣಾಭಿವೃದ್ಧಿ ಇನ್ನೂ ಚೆನ್ನಾಗಿ ಆಗುತ್ತದೆ. ಮಣ್ಣು ಪರೀಕ್ಷೆಯಿಂದ ಹಿಡಿದು ಮೌಲ್ಯವರ್ಧನೆ ಹಾಗೂ ವಿವಿಧ ತರಬೇತಿ, ಚಟುವಟಿಕೆಗಳು ವಿವಿಯಲ್ಲಿ ನಡೆಯುತ್ತಿವೆ. ವಿವಿಧ ಇಲಾಖೆಗಳ ಜತೆಗೆ ಸೇರಿ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಇನ್ನೂ ಹೆಚ್ಚಿನ ಪ್ರಯತ್ನ ನಡೆಸಲಿದೆ’ ಎಂದು ತಿಳಿಸಿದರು.

‘ಇಲ್ಲಿ ಕಲಿತ ವಿದ್ಯಾರ್ಥಿಗಳು ಎಲ್ಲೋ ಒಂದು ಕಡೆ ಕೆಲಸಕ್ಕೆ ಸೇರುವ ಬದಲು ತಂತ್ರಜ್ಞಾನ ಬಳಸಿ ಕೃಷಿ ಮಾಡಬೇಕು. ಹೊಸದಾಗಿ ಸ್ಟಾರ್ಟಪ್‌ಗಳನ್ನು ಶುರು ಮಾಡಬೇಕು’ ಎಂದು ಸಲಹೆ ನೀಡಿದರು.

‘ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಡ್ರೋನ್‌ ಖರೀದಿಗೆ ಚಿಂತಿಸಲಾಗಿದೆ. ಜತೆಗೆ ಮುಂದಿನ ಒಂದು ವರ್ಷದಲ್ಲಿ ನಾಲ್ಕು ಜಿಲ್ಲೆಗಳಿಂದ ಒಟ್ಟು 25 ರೈತ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ’ ಎಂದು ತಿಳಿಸಿದರು.

ಡಾ. ರಂಗಪ್ಪ ಯರಡ್ಡಿ ಅವರು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ವಿವಿಧ ವಿಸ್ತೀರ್ಣ ಚಟುವಟಿಕೆಗಳು, ದೇಸಿ ಪ್ರಾಜೆಕ್ಟ್‌, ಬೀಜ ಬ್ಯಾಂಕ್‌, ಸಿರಿಧಾನ್ಯಗಳ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.

ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಸಂಜಯ ನಾಡಗೌಡರ ಮಾತನಾಡಿ, ಇಂದು ರೈತರಿಗೆ ವಿಶೇಷ ದಿನ ಹಾಗೂ ನಾವು ರೈತರಿಗೆ ಧನ್ಯವಾದ ತಿಳಿಸುವ ದಿನ. ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ದಿ. ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಅವರ ಜನ್ಮದಿನವನ್ನೇ ರೈತ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಶ್ರೀಮಂತರ ಕಪಿಮುಷ್ಠಿಯಲ್ಲಿದ್ದ ಸಾವಿರಾರು ಎಕರೆ ಭೂಮಿಯನ್ನು ಎಲ್ಲ ರೈತರಿಗೂ ದಕ್ಕುವಂತೆ ಮಾಡಿದರು. ಸಹಕಾರ ಮಾದರಿ ಕೃಷಿ ಪರಿಚಯಿಸಿಕೊಟ್ಟರು. ರೈತರ ಆರ್ಥಿಕ ಮಟ್ಟ ಸುಧಾರಿಸಲು ಅವರು ಶ್ರಮಿಸಿದರು ಎಂದು ತಿಳಿಸಿದರು.

ವಿದ್ಯಾವಂತರು ಕೃಷಿ ಕ್ಷೇತ್ರಕ್ಕೆ ಬರಬೇಕು. ಹೊಸ ತಂತ್ರಜ್ಞಾನ ಬಳಸಿ, ಹೆಚ್ಚಿನ ಆದಾಯಗಳಿಸಿ ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸಬೇಕು. ಸರ್ಕಾರದ ಎಲ್ಲ ಯೋಜನೆಗಳು ದೇಶದಲ್ಲಿರುವ ಪ್ರತಿಯೊಂದು ಹಳ್ಳಿಗಳ ರೈತರಿಗೂ ತಲುಪುವಂತಾಗಬೇಕು ಎಂದು ಹೇಳಿದರು.

ಪ್ರಧಾನಿ ಮೋದಿ ಅವರ ಕನಸಿನಂತೆ ರೈತರ ಆದಾಯ ದ್ವಿಗುಣಗೊಳ್ಳಬೇಕು. ಅದನ್ನು ನನಸು ಮಾಡಲು ಎಲ್ಲರೂ ಶ್ರಮಿಸಬೇಕು. ಉಪ ಉತ್ಪನ್ನಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಕೃಷಿ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆಯಿಂದ ರೈತರಿಗೆ ದೊರೆಯುವ ಸವಲತ್ತು ಹಾಗೂ ಯೋಜನೆಗಳ ಬಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ತಾರಾಮಣಿ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶೈಲೇಂದ್ರ ಬಿರಾದಾರ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಎಚ್‌.ಬಿ.ಹುಲಗಣ್ಣವರ ತಿಳಿಸಿಕೊಟ್ಟರು.

ಆನಂದಗೌಡ ಸ್ವಾಗತಿಸಿದರು. ಡಾ. ಸಂಜಯಕುಮಾರ ಶಿ.ಹಾರೋಬಿಡಿ ನಿರೂಪಣೆ ಮಾಡಿದರು. ಡಾ. ಉಡಚಪ್ಪ ಪೂಜಾರ್‌ ಕಾರ್ಯಕ್ರಮ ಸಂಯೋಜಿಸಿದ್ದರು. ಗೌರಾ ಸುರಗಿಮಠ ವಂದಿಸಿದರು.

ಸಾವಯವ ಕೃಷಿ ಜಾಗೃತಿ, ಮಾರುಕಟ್ಟೆ ಸೃಷ್ಟಿ

ಫಲದ ಆಗ್ರೋ ರೀಸರ್ಚ್‌ ಫೌಂಡೇಷನ್‌ನ ಎಜಿಎಂ ಸಿದ್ಧನಗೌಡ್ರ ಮಾತನಾಡಿ, ‘ರೈತರಲ್ಲಿ ಸಾವಯವ ಕೃಷಿ ಬಗ್ಗೆ ಜಾಗೃತಿ, ಸಾವಯವ ಕೃಷಿಯನ್ನು ಲಾಭದಾಯಕಗೊಳಿಸುವುದು ಹೇಗೆ? ಮಾರುಕಟ್ಟೆ ಸೃಷ್ಟಿಸಿಕೊಳ್ಳುವುದು ಹೇಗೆ? ಮೊದಲಾದ ವಿಷಯಗಳ ಬಗ್ಗೆ ನಮ್ಮ ಕಂಪನಿಯು ರೈತರಿಗೆ ತಿಳಿಸಿಕೊಡುತ್ತಿದೆ’ ಎಂದು ತಿಳಿಸಿದರು.

‘ರೈತರ ಆರೋಗ್ಯ ಚೆನ್ನಾಗಿದ್ದರೆ, ಆಲೋಚನೆಗಳು ಉತ್ತಮವಾಗಿರುತ್ತವೆ. ಇದರಿಂದ ಉತ್ಪಾದನೆ ಹೆಚ್ಚಾಗಿ ರೈತರಿಗೆ ಹೆಚ್ಚಿನ ಲಾಭ ಸಿಗುತ್ತದೆ. ರೈತರು
ಬೆಳೆದ ಬೆಳೆಗಳಿಗೆ ಮನೆಬಾಗಿಲಿನಲ್ಲೇ ಉತ್ತಮ ದರ ಕೊಡಿಸಲು ಸಂಸ್ಥೆ ಪ್ರಯತ್ನಿಸುತ್ತಿದೆ’ ಎಂದರು.

ರೈತ ದಿನಾಚರಣೆ ವಿಶೇಷತೆಗಳು

* ಡ್ರೋಣ್‌ ಬಗ್ಗೆ ರೈತರಿಗೆ ಮಾಹಿತಿ, ಔಷಧ ಸಿಂಪಡಣೆ ಪ್ರಾತ್ಯಕ್ಷಿಕೆ
* ಮಣ್ಣು ಪರೀಕ್ಷೆ ಮಾಡುವುದು ಹೇಗೆ? ರೈತರಿಗೆ ಮಾಹಿತಿ
* ದೇಸಿ ಹಾಗೂ ವಿದೇಶಿ ತರಕಾರಿಗಳ ಪ್ರಾತ್ಯಕ್ಷಿಕೆ
* ವಿವಿಧ ಬೀಜಗಳ ಪ್ರದರ್ಶನ
* ಗೋ ಆಧರಿತ ಕೃಷಿ ಉತ್ಪನ್ನಗಳ ಪ್ರದರ್ಶನ
* ಬೀಜೋಪಚಾರದ ಬಗ್ಗೆ ಪ್ರಾತ್ಯಕ್ಷಿಕೆ
* ಸುತ್ತಮುತ್ತಲಿನ ನೂರಾರು ಮಂದಿ ರೈತರು ಭಾಗಿ
* ವಿದ್ಯಾರ್ಥಿಗಳಿಂದ ಲವಲವಿಕೆಯ ಭಾಗವಹಿಸುವಿಕೆ
* ವಿಶ್ವವಿದ್ಯಾಲಯದ ಆವರಣದಲ್ಲಿ ಮೇಳೈಸಿದ ಸಂಭ್ರಮ
* ಕುಲಪತಿಗೆ ಉಣ್ಣೆ ಟೊಪ್ಪಿ ಉಡುಗೊರೆ ನೀಡಿದ ಕುರಿಗಾಹಿ ಅಶೋಕ

ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ‘ಪ್ರಜಾವಾಣಿ’ ಪತ್ರಿಕೆಗೆ ಶುಭಾಶಯಗಳು. ನಾಡಿನ ಜನರಿಗೆ ವಿಶ್ವಾಸಾರ್ಹ ಸುದ್ದಿ ಕೊಡುತ್ತಿರುವ ಪತ್ರಿಕೆಯು ಇನ್ನಷ್ಟು ಜನಪರ ಕೆಲಸ ಮಾಡುವಂತಾಗಲಿ
ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ, ಕುಲಪತಿ

ಕುಲಪತಿ ಪ್ರೊ.ವಿಷ್ಣುಕಾಂತ ಎಸ್‌.ಚಟಪಲ್ಲಿ ಅವರ ದೂರದೃಷ್ಟಿತ್ವ ಹಾಗೂ ಮುನ್ನೋಟದ ಫಲವಾಗಿ ನಮ್ಮ ವಿವಿ ರೈತರಿಗೆ, ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಅನೇಕ ಚಟುವಟಿಕೆಗಳನ್ನು ಮಾಡುತ್ತಿದೆ
ಪ್ರೊ. ಬಸವರಾಜ ಎಲ್‌.ಲಕ್ಕಣ್ಣವರ, ಕುಲಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು