ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಾಗುವವರೆಗೆ ನರೇಗಾ ಕೆಲಸ ನೀಡಿ: ರಾಜ್ಯ ರೈತ ಸಂಘದ ಯಲ್ಲಪ್ಪ ಎಚ್. ಬಾಬರಿ

ಬದು ನಿರ್ಮಾಣ ಕಾಮಗಾರಿ ವೀಕ್ಷಣೆ; ರೈತ ಮುಖಂಡ ಯಲ್ಲಪ್ಪ ಬಾಬರಿ ಮನವಿ
Published 2 ಜೂನ್ 2023, 12:40 IST
Last Updated 2 ಜೂನ್ 2023, 12:40 IST
ಅಕ್ಷರ ಗಾತ್ರ

ಗದಗ: ‘ಮುಂಗಾರು ಸಕಾಲಕ್ಕೆ ಆರಂಭಗೊಳ್ಳದ ಕಾರಣ ರೈತರ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿಲ್ಲ. ಇಂತಹ ಸಮಯದಲ್ಲಿ ರೈತರು, ಕೂಲಿ ಕಾರ್ಮಿಕರಿಗೆ ನರೇಗಾ ಆರ್ಥಿಕವಾಗಿ ನೆರವಾಗಿದೆ. ಮಳೆ ಬರುವವರಿಗೆ ಕೆಲಸ ಕೊಡುವುದನ್ನು ನಿಲ್ಲಿಸಬಾರದು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಹೇಳಿದರು.

ತಾಲ್ಲೂಕಿನ ತಿಮ್ಮಾಪೂರ ಗ್ರಾಮದ ರೈತರ ಜಮೀನಿನಲ್ಲಿ ಕೃಷಿ ಇಲಾಖೆಯ ಜಲ ಸಂಜಿವೀನಿ ಯೋಜನೆಯಡಿ ನಡೆಯುತ್ತಿರುವ ಬದು ನಿರ್ಮಾಣ ಕಾಮಗಾರಿ ವೀಕ್ಷಿಸಿದ ಬಳಿಕ, ಕೃಷಿ ಇಲಾಖೆ ಅಧಿಕಾರಿಗಳಿಗೆ ಅವರು ಮನವಿ ಮಾಡಿದರು.

ಕೃಷಿ ಇಲಾಖೆ ಅಧಿಕಾರಿ ಕರಿಯಲ್ಲಪ್ಪ ಕೊರಚರ ಮಾತನಾಡಿ, ‘ಜಲ ಸಂಜೀವಿನಿ ಯೋಜನೆ ಅಡಿ ಗದಗ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಶೇ 100ಷ್ಟು ಉದ್ಯೋಗ ಕಲ್ಪಿಸಲಾಗಿದೆ. ರೈತರು, ಕೂಲಿ ಕಾರ್ಮಿಕರಿಗೆ ಕೆಲಸ ಕೊಟ್ಟು, ಜಮೀನಿನಲ್ಲಿ ಬದು ನಿರ್ಮಿಸಿ, ಮಳೆನೀರು ಭೂಮಿಯಲ್ಲಿ ಇಂಗುವಂತೆ ಮಾಡಲಾಗಿದೆ’ ಎಂದು ತಿಳಿಸಿದರು.

ಕೃಷಿ ಇಲಾಖೆ ಅಧಿಕಾರಿ ವೀರಣ್ಣ ಗಡಾದ ಮಾತನಾಡಿ, ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ಗ್ರಾಮಗಳಲ್ಲಿ 2782.25 ಹೆಕ್ಟೇರ್ ಪ್ರದೇಶದಲ್ಲಿ ಬದು ನಿರ್ಮಾಣ ಮಾಡಲಾಗಿದೆ. ₹429.86 ಲಕ್ಷ ವೇತನ ಪಾವತಿಸಲಾಗಿದೆ. 2,48,556 ಮಾನವ ದಿನಗಳನ್ನು ಸೃಜಿಸಿ, ಸಾವಿರಾರು ಮಂದಿಗೆ ಕೆಲಸ ನೀಡಲಾಗಿದೆ. ತಿಮ್ಮಾಪೂರ ಗ್ರಾಮದಲ್ಲಿ ಈಗಾಗಲೇ ₹40 ಲಕ್ಷ ಕೂಲಿ ಹಣ ಪಾವತಿ ಮಾಡಲಾಗಿದೆ’ ಎಂದು ತಿಳಿಸಿದರು.

ಕೂಲಿ ಕಾರ್ಮಿಕರಾದ ಮುದುಕಪ್ಪ ಶಿಗರಗಡ್ಡಿ, ಶರಣಪ್ಪ ಜೋಗಿನ, ಬಸವ್ವ ಬಿಚಗಲ್ಲ ಮಾತನಾಡಿ, ‘ಬೇಸಿಗೆಯಲ್ಲಿ ಮಾಡಿದ್ದ ನರೇಗಾ ಕೆಲಸಕ್ಕೆ ಕೃಷಿ ಇಲಾಖೆಯವರು ₹15 ಸಾವಿರ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ’ ಎಂದು ತಿಳಿಸಿದರು.

ಜಗದೀಶ್ ಸತ್ಯಪ್ಪನವರ, ವೆಂಕಟೇಶ ಪೂಜಾರ, ಉದ್ಯೋಗ ಮಿತ್ರರು ಹಾಗೂ ನೂರಾರು ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT