ಬರ ನಿರೋಧಕ ಬೆಳೆಯತ್ತ ರೈತರ ಚಿತ್ತ

7
ಮಳೆ ಕೊರತೆ: ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಸಲಹೆ

ಬರ ನಿರೋಧಕ ಬೆಳೆಯತ್ತ ರೈತರ ಚಿತ್ತ

Published:
Updated:
Deccan Herald

ಗದಗ: ಜಿಲ್ಲೆಯು ಕಳೆದೊಂದು ದಶಕದಿಂದ ಬರ ಮತ್ತು ಮಳೆ ಕೊರತೆ ಎದುರಿಸುತ್ತಿದೆ. ವಾರ್ಷಿಕ 550ಮಿ.ಮೀ ವಾಡಿಕೆ ಮಳೆಯಾದರೂ, ಇದರ ಅರ್ಧದಷ್ಟು ಮಳೆಯೂ ಲಭಿಸುತ್ತಿಲ್ಲ. ಪ್ರಸಕ್ತ ವರ್ಷ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿತ್ತು. ಆದರೆ, ಜೂನ್‌ ನಂತರ ಸಮರ್ಪಕ ಮಳೆಯಾಗಿಲ್ಲ. ಹೀಗಾಗಿ ಬೆಳೆಗಳು ಒಣಗಲು ತೊಡಗಿವೆ.

‘ಮಳೆ ಕೊರತೆ ಮತ್ತು ಹವಾಮಾನ ವೈಪರೀತ್ಯದಿಂದ ಬೆಳೆಹಾನಿಯನ್ನು ತಪ್ಪಿಸಿಕೊಳ್ಳಲು ರೈತರು ಪರ್ಯಾಯ ಬೆಳೆ ಯೋಜನೆಗಳತ್ತ ಮತ್ತು ಹೊಸ ಕೃಷಿ ತಾಂತ್ರಿಕತೆಯತ್ತ ಗಮನ ಹರಿಸಬೇಕು’ ಎಂದು ಸಲಹೆ ನೀಡುತ್ತಾರೆ ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಎಲ್‌.ಜಿ ಹಿರೇಗೌಡರ.

ಪರ್ಯಾಯ ಬೆಳೆ ಯೋಜನೆಗಳು
ಆಗಸ್ಟ್‌ ತಿಂಗಳಲ್ಲಿ ಸಮರ್ಪಕ ಮಳೆ ಲಭಿಸಿದರೆ ಬಿತ್ತನೆ ಮಾಡಬಹುದಾದ ಬೆಳೆಗಳು
ಕಪ್ಪು ಭೂಮಿ: ಸೂರ್ಯಕಾಂತಿ, ಔಡಲ, ಎಳ್ಳು, ಸಜ್ಜೆ, ನವಣೆ, ಹುರುಳಿ, ಮಡಕೆ ಕಾಳು ಮತ್ತು ಮೇವಿನ ಬೆಳೆಗಳು
ಮಸಾರಿ ಭೂಮಿ: ಸಜ್ಜೆ, ನವಣೆ, ಎಳ್ಳು, ಗುರೆಳ್ಳು, ಔಡಲ, ಹುರುಳಿ ಮತ್ತು ಮಡಕಿ ಕಾಳು

ಮಳೆ ವಿಳಂಬವಾದಾಗ ಅನುಸರಿಸಬೇಕಾದ ತಾಂತ್ರಿಕತೆಗಳು: ಚೌಕು ಮಡಿ ಹಾಗೂ ದಿಂಡು ಸಾಲುಗಳ ನಿರ್ಮಾಣ: ಜಮೀನಿನಲ್ಲಿ ಬಿದ್ದ ಮಳೆ ನೀರನ್ನು ಅಲ್ಲೇ ಇಂಗುವಂತೆ ಮಾಡಲು ಚೌಕು ಮಡಿಗಳು ಅಥವಾ ದಿಂಡು ಸಾಲುಗಳನ್ನು ನಿರ್ಮಾಣ ಮಾಡಬೇಕು.ಜಮೀನಿನ ಇಳಿಜಾರಿಗೆ ಅನುಗುಣವಾಗಿ 15 ಅಥವಾ 20 ಅಡಿ ಉದ್ದ–ಅಗಲ ಅಳತೆಯಲ್ಲಿ ಚೌಕು ಮಡಿಗಳನ್ನು ಎಡೆ ಕುಂಟೆ ಉಪಯೋಗಿಸಿ ನಿರ್ಮಿಸಿಕೊಳ್ಳಬೇಕು. ಜಮೀನಿನ ಇಳಿಜಾರಿಗೆ ಅಡ್ಡಲಾಗಿ ನೇಗಿಲು ಉಪಯೋಗಿಸಿಕೊಂಡು ದಿಂಡು ಸಾಲುಗಳನ್ನು ರಚಿಸಬೇಕು.ಚೌಕು ಮಡಿ ಅಥವಾ ದಿಂಡು ಸಾಲುಗಳಲ್ಲಿ ಸಂಗ್ರಹಗೊಂಡು ಭೂಮಿಯಲ್ಲಿ ಇಂಗಿದ ಮಳೆ ನೀರು ಬೆಳೆಗಳಿಗೆ ಬಹುಕಾಲದವರೆಗೆ ಸಿಗುತ್ತದೆ.

ಕ್ಯಾಲ್ಸಿಯಂ ಕ್ಲೊರೈಡ್‌ ದ್ರಾವಣದಲ್ಲಿ ನೆನೆಸಿ ಬಿತ್ತನೆ : ಒಣಬೇಸಾಯ ಪದ್ಧತಿಯಲ್ಲಿ ಬೆಳೆಯುವ ಬೆಳೆಗಳಲ್ಲಿ ಬರ ನಿರೋಧಕ ಶಕ್ತಿ ಬರಲು ಬಿತ್ತನೆ ಬೀಜಗಳನ್ನು ಕ್ಯಾಲ್ಸಿಯಂ ಕ್ಲೊರೈಡ್‌ ದ್ರಾವಣದಲ್ಲಿ ನೆನೆಸಿ ಬಿತ್ತನೆ ಮಾಡಬೇಕು. 20ಗ್ರಾಂ ಕ್ಯಾಲ್ಸಿಯಂ ಕ್ಲೊರೈಡ್‌ ಪುಡಿಯನ್ನು 1ಲೀಟರ್ ನೀರಿನಲ್ಲಿ ಬೆರೆಸಿ, ಈ ದ್ರಾವಣದಲ್ಲಿ1 ಕೆ.ಜಿ ಬಿತ್ತನೆ ಬೀಜವನ್ನು 1ಗಂಟೆ ನೆನೆಸಿಡಬೇಕು. ಸೂರ್ಯಕಾಂತಿ ಬೀಜವನ್ನು 4-ರಿಂದ 5 ಗಂಟೆಗಳ ಕಾಲ ನೆನೆಸಿ, ನಂತರ ನೆರಳಲ್ಲಿ ಒಣಗಿಸಿ ಬಿತ್ತನೆ ಮಾಡಬೇಕು. ಹೀಗೆ ಮಾಡುವುದರಿಂದ ಬೀಜದ ಮೊಳಕೆ ಪ್ರಮಾಣ, ಸಸಿಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ.

ಅಂತರದ ಸಾಲಿನ ಬಿತ್ತನೆ: ಒಣಬೇಸಾಯ ಪದ್ಧತಿಯಲ್ಲಿ ಕಪ್ಪು ಮಣ್ಣಿನಲ್ಲಿ ಸೂರ್ಯಕಾಂತಿ ಬೆಳೆ ಬಿತ್ತುವಾಗ ಅಗಲವಾದ ಅಂತರದ ಸಾಲುಗಳಲ್ಲಿ (3 ರಿಂದ 4 ಅಡಿ) ಬಿತ್ತನೆ ಮಾಡಬೇಕು. ಇದರಿಂದ ಸಾಲಗಳ ಮಧ್ಯದಲ್ಲಿ ಮೇಲಿಂದ ಮೇಲೆ ಎಡೆ ಹೊಡೆಯುವುದು ತಪ್ಪುತ್ತದೆ. ಮಣ್ಣಿನಲ್ಲಿರುವ ತೇವಾಂಶ ಬಹುದಿನಗಳವರೆಗೆ ಉಳಿಯುತ್ತದೆ. ಇಳುವರಿಯೂ ಶೇ 25ರಷ್ಟು ಹೆಚ್ಚುತ್ತದೆ.

ಭೂಮಿಯಲ್ಲಿ ತೇವಾಂಶ ಕಾಯ್ದುಕೊಳ್ಳಲು 30-ರಿಂದ 35 ಅಡಿ ಅಂತರದಲ್ಲಿ ತೇವಾಂಶ ಸಂರಕ್ಷಣಾ ಹರಿಗಳನ್ನು ನಿರ್ಮಿಸಿಕೊಳ್ಳಬಹುದು.ಮಳೆ ನೀರು ಈ ಹರಿಗಳಲ್ಲಿ ಇಂಗಿ ತೇವಾಂಶ ಹೆಚ್ಚುತ್ತದೆ
ಡಾ. ಎಲ್‌.ಜಿ ಹಿರೇಗೌಡರ,ಕೆವಿಕೆ ಮುಖ್ಯಸ್ಥ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !