ಬೆಳೆ ವಿಮೆ ತುಂಬಲು ಮುಗಿಬಿದ್ದ ರೈತರು

7
ಕೊನೆಯ ದಿನ ದಟ್ಟಣೆ; ಬ್ಯಾಂಕು, ಕಂಪ್ಯೂಟರ್‌ ಸೆಂಟರ್‌ಗಳ ಮುಂದೆ ಸರತಿ ಸಾಲು

ಬೆಳೆ ವಿಮೆ ತುಂಬಲು ಮುಗಿಬಿದ್ದ ರೈತರು

Published:
Updated:
Deccan Herald

ಗದಗ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಹಣ ಪಾವತಿಸಲು ಕೊನೆಯ ದಿನವಾದ ಮಂಗಳವಾರ (ಜುಲೈ 31) ನಗರದಲ್ಲಿ ರೈತರ ದಟ್ಟಣೆ ಕಂಡುಬಂತು.

ರೋಣ, ಮುಂಡರಗಿ, ಲಕ್ಷ್ಮೇಶ್ವರ, ನರಗುಂದ ತಾಲ್ಲೂಕುಗಳ ರೈತರು, ಜಿಲ್ಲಾ ಕೇಂದ್ರವಾದ ಗದುಗಿಗೆ ಬಂದು, ಬ್ಯಾಂಕುಗಳಲ್ಲಿ, ಕೆಲವು ಖಾಸಗಿ ಕಂಪ್ಯೂಟರ್‌ ಸೆಂಟರ್‌ಗಳ ಎದುರು ಸರತಿ ಸಾಲಿನಲ್ಲಿ ನಿಂತು ಹಣ ಪಾವತಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮುಂಗಾರು ಬೆಳೆಗಳಾದ ಹೆಸರು, ಶೇಂಗಾ, ಮುಸುಕಿನ ಜೋಳ, ಜೋಳ, ತೊಗರಿ, ಹತ್ತಿ ಸಜ್ಜೆ, ಎಳ್ಳು, ಹುರುಳಿ, ನವಣಿ ಬೆಳೆಗಳಿಗೆ ವಿಮೆ ತುಂಬಲು ಮಂಗಳವಾರ ಕೊನೆಯ ದಿನವಾಗಿತ್ತು.

‘ಮುಂಡರಗಿ ತಾಲ್ಲೂಕಿನ ಹಳ್ಳಿಕೇರಿ, ಹಳ್ಳಿಗುಡಿ , ಡಂಬಳ ಗ್ರಾಮಗಳಿಂದ ಬೆಳೆ ವಿಮೆ ಕಂತು ತುಂಬಲು ಗದುಗಿಗೆ ಬಂದಿದ್ದ ರೈತರು, ವಿಮೆ ಕಂತು ತುಂಬಲು ನಿಗದಿಪಡಿಸಿರುವ ಅವಧಿಯನ್ನು ಇನ್ನೂ 15 ದಿನಗಳ ಕಾಲ ವಿಸ್ತರಿಸಬೇಕು’ ಎಂದು ಆಗ್ರಹಿಸಿದರು.
ಈ ಬಾರಿ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ನೀರೀಕ್ಷೆ ಮೀರಿ ಹೆಸರು ಬಿತ್ತನೆ ಮಾಡಿದ್ದರು.ಆದರೆ, ಜೂನ್‌ 2ನೇ ವಾರದ ನಂತರ ಮಳೆ ಕೈಕೊಟ್ಟಿತ್ತು. ನೀರಿನ ಕೊರತೆಯಿಂದ ಬೆಳೆ ಒಣಗತೊಡಗಿದೆ. ರೋಣ ತಾಲ್ಲೂಕಿನಲ್ಲಿ ರೈತರು ಬೆಳೆ ಉಳಿಸಿಕೊಳ್ಳಲು ಜಮೀನಿಗೆ ಟ್ಯಾಂಕರ್‌ ಮೂಲಕ ನೀರು ತರಿಸಿ, ಹಾಕಿಸುತ್ತಿದ್ದಾರೆ.

ಮಳೆ ಕೊರತೆ ಎದುರಾಗಿರುವ ಬೆನ್ನಲ್ಲೇ ಈ ಬಾರಿ ಫಸಲ್ ಬಿಮಾ ಯೋಜನೆಗೆ ಹಣ ಕಟ್ಟುತ್ತಿರುವ ರೈತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ‘ಬ್ಯಾಂಕ್‌ನಿಂದ ಕೃಷಿ ಸಾಲ ಪಡೆದ ರೈತರಿಗೆ ಫಸಲ್‌ ಬಿಮಾ ಕಡ್ಡಾಯ. ಆದರೆ, ಈ ಬಾರಿ ಮಳೆ ಕೊರತೆ ಎದುರಾಗಿರುವುದರಿಂದ ಸಾಲ ಪಡೆಯದ ರೈತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬಿಮಾ ಯೋಜನೆಯ ಕಂತು ತುಂಬಿದ್ದಾರೆ’ ಎಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !