ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂ.ಪುಟ್ಟರಾಜರು ಅಮೂಲ್ಯ ನಕ್ಷತ್ರ: ತೋಂಟದ ಶ್ರೀ

ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತೋಂಟದ ಶ್ರೀ
Last Updated 8 ಸೆಪ್ಟೆಂಬರ್ 2022, 7:28 IST
ಅಕ್ಷರ ಗಾತ್ರ

ಗದಗ: ‘ಪಂ. ಪುಟ್ಟರಾಜ ಗವಾಯಿಗಳವರು ಅಮರತ್ವ ಪಡೆದಿರುವುದರಿಂದ ಅವರು ನಿತ್ಯಸ್ಮರಣೀಯರಾಗಿದ್ದಾರೆ. ನಮಗೆಲ್ಲ ಮಾದರಿಯಾಗಿರುವ ಗವಾಯಿಗಳವರ ತ್ಯಾಗಮಯ ಜೀವನ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು’ ಎಂದು ತೋಂಟದ ಡಾ. ಸಿದ್ದರಾಮ ಸ್ವಾಮೀಜಿ ಹೇಳಿದರು.

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ವತಿಯಿಂದ ಶಿವಯೋಗಿ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 12ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ‘ಶಿವಯೋಗಿಶ್ರೀ ಪುಟ್ಟರಾಜ ಪ್ರಶಸ್ತಿ’ ಪ್ರದಾನ ಹಾಗೂ ಅಹೋರಾತ್ರಿ ಸಂಗೀತ ಸ್ವರನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಪಂ.ಪುಟ್ಟರಾಜರು ಅಮೂಲ್ಯ ನಕ್ಷತ್ರವಿದ್ದತೆ. ಗವಾಯಿಗಳವರ ಪುಣ್ಯಸ್ಮರಣೋತ್ಸವದ ಸಂದರ್ಭದಲ್ಲಿ ಸೇವಾ ಸಮಿತಿಯವರು ಉತ್ತರ– ದಕ್ಷಿಣದ ಸಾಧಕರನ್ನು ಒಂದುಗೂಡಿಸಿದ್ದಾರೆ. ಪಂ.ಪಂಚಾಕ್ಷರ ಹಾಗೂ ಪಂ.ಪುಟ್ಟರಾಜ ಗವಾಯಿಗಳವರ ಸೇವಾ ಕಾರ್ಯಗಳನ್ನು ಪೂಜ್ಯ ಕಲ್ಲಯ್ಯಜ್ಜನವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹಾನಗಲ್ ಗುರು ಕುಮಾರೇಶ್ವರ ಪರಂಪರೆ ಹೊಂದಿರುವ ಈ ಮಠವು ನಮ್ಮೆಲ್ಲರ ಮಠವಾಗಿದೆ. ಇದೇ ರೀತಿ ಗುರುಪರಂಪರೆ ಮುಂದುವರಿಯಲಿ’ ಎಂದು ಹೇಳಿದರು.

ರಾಜೂರು- ಅಡ್ನೂರ ದಾಸೋಹ ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯರು ಮಾತನಾಡಿ, ‘ಅಂಧರನ್ನು ಪಕ್ಕಕ್ಕೆ ಸರಿಸಿ ಹೋಗುತ್ತಿದ್ದ ಸಂದರ್ಭದಲ್ಲಿ ಅಂತವರಿಗೆ ಜ್ಞಾನವನ್ನು ದಯಪಾಲಿಸಿ ವೇದಿಕೆಯಲ್ಲಿ ಗೌರವ ನೀಡುವ ಮಟ್ಟಕ್ಕೆ ಉಭಯ ಶ್ರೀಗಳು ಬೆಳೆಸಿದ್ದಾರೆ’ ಎಂದು ಹೇಳಿದರು.

ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಮಾತನಾಡಿ, ‘ಪಂ.ಪುಟ್ಟರಾಜ ಗವಾಯಿಗಳವರು ಬೆಳ್ಳಿ ಚುಕ್ಕಿ ಇದ್ದಂತೆ. ನೀರಿನಲ್ಲಿ ಜನ್ಮತಾಳಿದ ಉಪ್ಪು ನೀರು ಬಿದ್ದರೆ ಕರಗುತ್ತದೆ. ಆದರೆ, ಅದೇ ನೀರಿನಲ್ಲಿ ಹುಟ್ಟಿದ ಮುತ್ತಿಗೆ ಎಷ್ಟೇ ನೀರು ಬಿದ್ದರೂ ಕರಗುವುದಿಲ್ಲ. ಅಂತ ಮುತ್ತು ಪುಟ್ಟರಾಜ ಗವಾಯಿಗಳಾಗಿದ್ದಾರೆ’ ಎಂದು ಬಣ್ಣಿಸಿದರು.

ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಿದ್ದರು. ಗಾನಯೋಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಅಧ್ಯಕ್ಷ ಶಿವಲಿಂಗಶಾಸ್ತ್ರಿ ಸಿದ್ದಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ಅನಿಲ್ ಅಬ್ಬಿಗೇರಿ, ರಾಜಣ್ಣ ಕುರಡಗಿ, ಲಿಂಗರಾಜ ಗುಡಿಮನಿ, ಪ್ರಶಾಂತ ನಾಯ್ಕರ, ಪಂಚಾಕ್ಷರ ಹಿಡ್ಕಿಮಠ ಸೇರಿದಂತೆ ವೇದಿಕೆಯಲ್ಲಿ ಇದ್ದರು.

ಚಂಪಾವತಿ ಅಡ್ನೂರ ಶ್ರೀಮಠದ ದಾಸೋಹಕ್ಕೆ ₹1 ಲಕ್ಷ ದೇಣಿಗೆ ನೀಡಿದರು.

ಜಗದೀಶ್ವರ ಶಾಸ್ತ್ರಿ ವಿರಚಿತ ‘ವಚನ ಹೂದೋಟ’ ವಚನ ಸಂಕಲನ ಬಿಡುಗಡೆಗೊಂಡಿತು.

ಸಭಾ ಕಾರ್ಯಕ್ರಮದ ಬಳಿಕ ಡಾ. ವಿದ್ಯಾಭೂಷಣ ಅವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಿತು. ಆನಂದಯ್ಯ ವಿರಕ್ತಮಠ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಪುಟ್ಟರಾಜ ಪ್ರಶಸ್ತಿ

‘ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ’ಯನ್ನು ಕೊಪ್ಪಳದ ಲಿಂ. ರಾಜಶೇಖರಯ್ಯ ಹಾಗೂ ಲಿಂ. ನೀಲಾಂಬಿಕಾ ನವಲಿಹಿರೇಮಠ ಅವರ ಸ್ಮರಣಾರ್ಥ ಮೈಸೂರಿನ ಸಂಗೀತ ವಿದ್ವಾಂಸ ಡಾ. ವಿದ್ಯಾಭೂಷಣ, ಲಿಂ. ಸಿದ್ದಮ್ಮ ಸಂಗಪ್ಪ ಗುಡಿಮನಿ ಅವರ ಸ್ಮರಣಾರ್ಥ ಸಮಾಜಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೊಪ್ಪಳದ ಷಡಕ್ಷರಯ್ಯ ನವಲಿಹಿರೇಮಠ, ಪಂ. ಲಿಂ. ಚನ್ನವೀರಶಾಸ್ತ್ರಿಗಳು ಹಿಡ್ಕಿಮಠ ಅವರ ಸ್ಮರಣಾರ್ಥ ಪ್ರವಚನ ಕ್ಷೇತ್ರದಲ್ಲಿ ಕುರುಬಗೊಂಡದ ವೀರಭದ್ರಯ್ಯಶಾಸ್ತ್ರಿಗಳು ಹಿರೇಮಠ ಅವರಿಗೆ, ಸಚಿವ ಬಿ.ಶ್ರೀರಾಮುಲು ಅವರು ಮಾತೋಶ್ರೀ ಲಿಂ. ಹೊನ್ನೂರಮ್ಮ ಅವರ ಸ್ಮರಣಾರ್ಥ ಬೆಂಗಳೂರಿನ ನಟಿ ಮಾಲತಿಶ್ರೀ ಮೈಸೂರು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾವಿರಾರು ಅಂಧ- ಅನಾಥ ಮಕ್ಕಳಿಗೆ ಬೆಳಕು ತೋರಿದ ಅದಮ್ಯ ಚೇತನ ಪಂ.ಪುಟ್ಟರಾಜ ಗವಾಯಿಗಳವರ ಹೆಸರಿನಲ್ಲಿ ಪ್ರಶಸ್ತಿ ಪಡೆದಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಷಡಕ್ಷರಯ್ಯ ನವಲಿಹಿರೇಮಠ, ಸಮಾಜ ಸೇವಕ 60 ವರ್ಷಗಳ ಕಾಲ ರಂಗಭೂಮಿಯಲ್ಲಿ ಸೇವೆ ಮಾಡಿದ್ದಕ್ಕೂ ಸಾರ್ಥಕವಾಯಿತು. ನಾನು ಮೈಸೂರಿನವಳಾಗಿದ್ದರೂ 40 ವರ್ಷಗಳ ಕಾಲ ಉತ್ತರ ಕರ್ನಾಟಕದ ಜನರು ನನಗೆ ಅನ್ನ ಹಾಕಿದ್ದಾರೆ.
ಮಾಲತಿಶ್ರೀ, ಕಲಾವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT