ಲಕ್ಷ್ಮೇಶ್ವರ ಸಮೀಪದ ಅಕ್ಕಿಗುಂದ ತಾಂಡಾದಲ್ಲಿ ಪಡಿತರ ಅಕ್ಕಿಯಲ್ಲಿ ಗೊಬ್ಬರ: ಆತಂಕ

7

ಲಕ್ಷ್ಮೇಶ್ವರ ಸಮೀಪದ ಅಕ್ಕಿಗುಂದ ತಾಂಡಾದಲ್ಲಿ ಪಡಿತರ ಅಕ್ಕಿಯಲ್ಲಿ ಗೊಬ್ಬರ: ಆತಂಕ

Published:
Updated:
Deccan Herald

ಲಕ್ಷ್ಮೇಶ್ವರ: ಸಮೀಪದ ಅಕ್ಕಿಗುಂದ ತಾಂಡಾದಲ್ಲಿ ಪಡಿತರ ಅಕ್ಕಿಯಲ್ಲಿ ಗೊಬ್ಬರದ ಸಣ್ಣ ಸಣ್ಣ ಚೂರುಗಳು ಕಂಡು ಬಂದಿದ್ದು ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

ಆಗಸ್ಟ್‌ ತಿಂಗಳಲ್ಲಿ ವಿತರಿಸಲಾದ ಅಕ್ಕಿಯಲ್ಲಿ ಈ ಗೊಬ್ಬರದ ಚೂರುಗಳು ಕಂಡು ಬಂದಿವೆ. ಇದರಿಂದ ಅನ್ನ ತಯಾರಿಸಿ ಮಕ್ಕಳಿಗೆ ಊಟ ಬಡಿಸಿದ ತಕ್ಷಣ ಹೊಟ್ಟೆ ನೋವು ಎಂದು ಹೇಳಿ ಮಕ್ಕಳು ಶೌಚಾಲಯಕ್ಕೆ ಓಡುತ್ತಿದ್ದಾರೆ. ಇದರಿಂದಾಗಿ ಸಂಶಯಗೊಂಡ ತಾಂಡಾದ ಮಹಿಳೆಯರು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅಕ್ಕಿಯಲ್ಲಿ ಗೊಬ್ಬರದ ಚೂರುಗಳು ಮಿಶ್ರಣ ಆಗಿದ್ದು ಕಂಡು ಬಂದಿವೆ. ಹೀಗಾಗಿ ನಿವಾಸಿಗಳಲ್ಲಿ ಅವ್ಯಕ್ತ ಭಯ ಆರಂಭವಾಗಿದೆ.

‘ಅನ್ನ ಉಂಡ ಕೂಡಲೇ ನಮ್ಮ ಮಕ್ಕಳು ಹೊಟ್ಟೆ ನೋವು ಎಂದು ಅಳುತ್ತಿದ್ದಾರೆ. ಅಕ್ಕಿಯನ್ನು ನೋಡಿದಾಗ ಅದರಲ್ಲಿ ಯೂರಿಯಾ ಗೊಬ್ಬರ ಕೂಡಿರುವುದು ಗೊತ್ತಾತ್ರೀ’ ಎಂದು ನೀಲವ್ವ ಲಮಾಣಿ ಹಾಗೂ ಕಮಲವ್ವ ಲಮಾಣಿ ಆತಂಕ ವ್ಯಕ್ತಪಡಿಸಿದರು.

‘ಬಡವರು ಏನು ಕೊಟ್ಟರೂ ತಿಂತಾರ ಅಂತ ಸರ್ಕಾರದವರು ತಿಳಕೊಂಡಾರ್ರೀ. ಪುಗ್ಸಟ್ಟೆ ಅಕ್ಕಿ ಕೊಡ್ತೇವಿ ಅಂತ ವಿಷ ಕೊಡಾಕತ್ತಾರ’ ಎಂದು ಪ್ರೇಮಾ ಲಮಾಣಿ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ತಹಶೀಲ್ದಾರ್‌ ವೆಂಕಟೇಶ ನಾಯಕ ಅವರನ್ನು ಸಂಪರ್ಕಿಸಿದಾಗ ‘ಆಹಾರ ನಿರೀಕ್ಷಕರನ್ನು ತಾಂಡಾಕ್ಕೆ ಕಳುಹಿಸಿಕೊಟ್ಟಿದ್ದೇವೆ. ಪರಿಶೀಲನೆ ನಂತರ ನಿಜಾಂಶ ಗೊತ್ತಾಗಲಿದೆ’ ಎಂದರು.

ಸಂಬಂಧಿಸಿದ ಆಹಾರ ಇಲಾಖೆ ಅಧಿಕಾರಿಗಳು ತಕ್ಷಣ ತಾಂಡಾಕ್ಕೆ ಭೇಟಿ ನೀಡಿ ಈ ಕುರಿತು ಜನರಿಗೆ ಮಾಹಿತಿ ನೀಡಬೇಕು’ ಎಂದು ವೇಣಪ್ಪ ಲಮಾಣಿ, ಶೋಭಾ ಲಮಾಣಿ, ಜಗದೀಶ ದೊಡ್ಡಮನಿ, ನಾರಾಯಣ ಲಮಾಣಿ, ಸೋಮವ್ವ ಲಮಾಣಿ, ಸೋನವ್ವ ಲಮಾಣಿ, ಭೀಮಪ್ಪ ಲಮಾಣಿ ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !