ಬುಧವಾರ, ಸೆಪ್ಟೆಂಬರ್ 18, 2019
22 °C
ಇದುವರೆಗಿನ ಸಮೀಕ್ಷೆಯಂತೆ 2698 ಮನೆಗಳಿಗೆ ಸಂಪೂರ್ಣ ಹಾನಿ

ಮುಂಜಾಗ್ರತೆ ಕ್ರಮದಿಂದ ಹೆಚ್ಚಿನ ಹಾನಿಗೆ ತಡೆ

Published:
Updated:
Prajavani

ಗದಗ: ‘ಪ್ರವಾಹ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಎರಡು ದಿನಗಳ ಮುಂಚಿತವಾಗಿ ನದಿದಂಡೆಯ ಗ್ರಾಮಸ್ಥರನ್ನು ಸ್ಥಳಾಂತರ ಮಾಡಿದ್ದರಿಂದ ಹೆಚ್ಚಿನ ಹಾನಿ ತಪ್ಪಿತು. ಜಿಲ್ಲಾಡಳಿತದ ಕ್ರಮ ನಿಜಕ್ಕೂ ಅಭಿನಂದನೀಯ’ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.

ಜಿಲ್ಲಾ ಪಂಚಾಯ್ತಿ ಸಭಾ ಭವನದಲ್ಲಿ ಬುಧವಾರ ನೆರೆ ಹಾಗೂ ಮಳೆ ಹಾನಿ ಕುರಿತ ಪರಿಹಾರ ಕ್ರಮಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ನವಿಲುತೀರ್ಥ ಜಲಾಶಯದಿಂದ 70 ಸಾವಿರದಿಂದ 1.20 ಲಕ್ಷ ಕ್ಯುಸೆಕ್‌ ನೀರನ್ನು ಎರಡು ದಿನಗಳ ಕಾಲ ಮಲಪ್ರಭಾ ನದಿಗೆ ಹರಿಸಿದ್ದರಿಂದ, ಜಿಲ್ಲೆಯಲ್ಲಿ ಕಂಡು ಕೇಳರಿಯದ ಪ್ರವಾಹ ಉಂಟಾಯಿತು. ಇದರಿಂದ ನರಗುಂದ, ರೋಣ ತಾಲ್ಲೂಕುಗಳ ನದಿ ಪಾತ್ರದ ಗ್ರಾಮಗಳು ಜಲಾವೃತಗೊಂಡವು. ಪರಿಹಾರ ಕಾರ್ಯಕ್ಕೆ ತ್ವರಿತವಾಗಿ ಸ್ಪಂದಿಸಿದ ಎಲ್ಲ ಇಲಾಖೆಗಳಿಗೆ ಅಭಿನಂದನೆ’ ಎಂದು ಸಿ.ಸಿ ಪಾಟೀಲ ಹೇಳಿದರು.

ಇದುವರೆಗಿನ ಸಮೀಕ್ಷೆಯಂತೆ 2698 ಮನೆಗಳು ಸಂಪೂರ್ಣ, 2388 ಮನೆಗಳು ಭಾಗಶಃ ಹಾನಿಯಾಗಿವೆ. ಪೂರ್ಣ ಹಾನಿಯಾದ ಮನೆಗಳಿಗೆ ₹5 ಲಕ್ಷ ಭಾಗಶಃ ಹಾನಿಯಾದ ಮನೆಗಳಿಗೆ ₹25 ಸಾವಿರದಿಂದ ₹1 ಲಕ್ಷದವರೆಗೆ ಪರಿಹಾರ ನೀಡಲಾಗುವುದು’ ಎಂದರು.

‘ಜಿಲ್ಲೆಯ ನರಗುಂದ, ರೋಣ ತಾಲ್ಲೂಕುಗಳು ಮಲಪ್ರಭಾ ಹಾಗೂ ಬೆಣ್ಣೆಹಳ್ಳಗಳ ಪ್ರವಾಹದಿಂದ, ತುಂಗಭದ್ರಾ ಮತ್ತು ವರದಾ ನದಿ ಪ್ರವಾಹದಿಂದ ಶಿರಹಟ್ಟಿ ಹಾಗೂ ಮುಂಡರಗಿ ತಾಲ್ಲೂಕುಗಳ ಒಟ್ಟು 40 ಗ್ರಾಮಗಳು ಜಲಾವೃತಗೊಂಡಿದ್ದವು. ಒಟ್ಟು 44 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿತ್ತು. ಈಗಲೂ 6 ಪರಿಹಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, 7171 ಸಂತ್ರಸ್ಥರು ಆಶ್ರಯ ಪಡೆದಿದ್ದಾರೆ’ ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್.ಪಿ. ಬಳಿಗಾರ,ರೋಣ ಶಾಸಕ ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಸಿಇಒ ಮಂಜುನಾಥ ಚವ್ಹಾಣ , ಎಸ್ಪಿ ಶ್ರೀನಾಥ ಜೋಶಿ, ಡಿಎಫ್‌ಒ ಸೂರ್ಯ ಸೇನ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಇದ್ದರು. ಕೆಎಸ್‌ಎಸ್‌ ಶಿಕ್ಷಣ ಸಂಸ್ಥೆಯ ರವಿ ದಂಡಿನ ಅವರು ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ₹1 ಲಕ್ಷ ದೇಣಿಗೆ ನೀಡಿದರು.

Post Comments (+)