ಶನಿವಾರ, ಡಿಸೆಂಬರ್ 4, 2021
20 °C
ಕೊಣ್ಣೂರು, ವಾಸನ, ಲಖಮಾಪುರದಲ್ಲಿ ನೆರೆ ನಿಂತರೂ ತಪ್ಪದ ಸಂಕಷ್ಟ

PV Web Exclusive: ಪ್ರವಾಹ ಸ್ಥಿತಿಯ ನಂತರದ ಸತ್ಯದರ್ಶನ

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಇನ್ನೇನು ಸೊಂಟ ಮುರಿದುಕೊಂಡು ಬೀಳುತ್ತದೆಯೇನೋ ಎಂಬ ಸ್ಥಿತಿಯಲ್ಲಿ ಕೊಳೆತು ನಿಂತಿರುವ ಸೂರ್ಯಕಾಂತಿ, ಹರಿಯುವ ನೀರಿನೊಳಗೆ ಉಸಿರುಗಟ್ಟುತ್ತಿರುವ ಪೇರಲೆ ಬೆಳೆ, ಹೂವಿನಂತೆ ಹಗುರವಾದ ಹತ್ತಿ ನೀರಿನ ಭಾರಕ್ಕೆ ಸಿಕ್ಕಿ ಕುಸಿದಿರುವ ದೃಶ್ಯಗಳೆಲ್ಲವೂ ಪ್ರವಾಹ ನಂತರದ ಭೀಕರ ಪರಿಣಾಮವನ್ನು ಕಟ್ಟಿಕೊಡುತ್ತಿದ್ದವು. ನೆರೆ ಇಳಿದಿದ್ದರೂ ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಕೊಣ್ಣೂರು, ವಾಸನ ಮತ್ತು ಲಖಮಾಪುರದಲ್ಲಿ ಗ್ರಾಮಗಳಲ್ಲಿ ಈಗಲೂ ಸಮಸ್ಯೆಗಳು ಜೀವಂತವಾಗಿವೆ.

ಮಂಗಳವಾರ ಪ್ರವಾಹ ಹಾನಿ ಪರಿಶೀಲನೆಗೆ ಬಂದಿದ್ದ ಕೇಂದ್ರ ಅಧ್ಯಯನ ತಂಡಕ್ಕೆ ಅಲ್ಲಿನ ಜನರು ಎದುರಿಸುತ್ತಿರುವ ಕಷ್ಟಗಳ ದರ್ಶನವಾಯಿತು.

ಕೊಣ್ಣೂರು ಸಮೀಪ ರಾಷ್ಟ್ರೀಯ ಹೆದ್ದಾರಿ ಬಾಯ್ತೆರೆದಿದ್ದು, ದುರಸ್ತಿ ಕಾರ್ಯ ಇನ್ನೂ ಆರಂಭವಾಗಿಲ್ಲ. ಅದರ ನಡುವೆಯೇ ನೂರಾರು ವಾಹನಗಳು ಪ್ರಯಾಸದಿಂದ ಸಂಚರಿಸುತ್ತಿವೆ. 

‘2019ರ ಪ್ರವಾಹದ ಹೊಡೆತದಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೆ ನೆರೆ ಬಂದು ನಮ್ಮ ಬದುಕಿಗೆ ಅಪ್ಪಳಿಸಿದೆ. ಹೋದವರ್ಷ ಮೂರೂವರೆ ಎಕರೆಯಲ್ಲಿ ಬೆಳೆದಿದ್ದ ಜೋಳವನ್ನು ನೀರು ನುಂಗಿಹಾಕಿತ್ತು. ಈ ವರ್ಷವೂ ಅದೇ ಪರಿಸ್ಥಿತಿ ಮರುಕಳಿಸಿದೆ. ಹಿಂದಿನ ವರ್ಷ ಆದ ನಷ್ಟಕ್ಕೆ ಇನ್ನೂ ಪೂರ್ಣ ಪರಿಹಾರ ಸಿಕ್ಕಿಲ್ಲ. ಈಗ ಅಧಿಕಾರಿಗಳು ಮತ್ತೆ ಅತಿವೃಷ್ಟಿ ಅಧ್ಯಯನಕ್ಕೆ ಬಂದಿದ್ದಾರೆ. ನಮ್ಮ ಬದುಕು ಮಾತ್ರ ಪ್ರತಿವರ್ಷ ಮುಳುತ್ತಲೇ ಇದೆ’ ಎಂದು ಅಳಲು ತೋಡಿಕೊಂಡ ಕೊಣ್ಣೂರು ಸೇತುವೆ ಬಳಿ ಪೇರಲೆ ಹಣ್ಣು ಮಾರುತ್ತಿದ್ದ ಯುವಕ ಮಂಜುನಾಥ.

ನೆರೆಹಾವಳಿಗೆ ಸಿಕ್ಕು ನಲುಗಿರುವ ಕೊಣ್ಣೂರು ಗ್ರಾಮದ ಅಕ್ಕಮಹಾದೇವಿ ಬಂಡೋಜಿ, ಭರತೇಶ ಬೂಗಾರ ಹಾಗೂ ಸಂತೋಷ ಅವರ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿರಲಿಲ್ಲ. ಅಧಿಕಾರಿಗಳ ಬಳಿ ನೋವು ತೋಡಿಕೊಂಡ ಅವರ ಮಾತಿನಲ್ಲೂ ಇದೇ ಭಾವ ಧ್ವನಿಸುತ್ತಿತ್ತು. ರೈತರ ಅಹವಾಲುಗಳನ್ನು ಸಾವಧಾನದಿಂದ ಆಲಿಸಿದ ತಂಡ ಬೆಳೆ ವಿಮೆ, ಖರ್ಚು–ವೆಚ್ಚ, ಆದಾಯ–ನಷ್ಟದ ಬಗ್ಗೆ ಮಾಹಿತಿ ಪಡೆಯಿತು.

ಕೊಣ್ಣೂರು ದಾಟಿ ವಾಸನ ಪ್ರವೇಶಿಸಿದ ಅಧ್ಯಯನ ತಂಡಕ್ಕೆ ಅಲ್ಲಿ ಪ್ರವಾಹ ಪರಿಸ್ಥಿತಿಯ ತೀವ್ರತೆ ತಿಳಿಯಿತು. ನವಿಲುತೀರ್ಥ ಜಲಾಶಯದಿಂದ ನಿತ್ಯವೂ ಐದು ಸಾವಿರ ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, ಇಲ್ಲಿನ ಕೃಷಿ ಭೂಮಿ ಈಗಲೂ ನೀರಿನಿಂದ ಆವೃತವಾಗಿದೆ. ನೀರು ಇಳಿದರೂ, ಭೂಮಿಯಲ್ಲಿನ ಶೀತಾಂಶ ಆರಲು ಇನ್ನೂ ಹಲವು ತಿಂಗಳುಗಳೇ ಬೇಕು. ಅಲ್ಲಿವರೆಗೂ ಆ ಭೂಮಿಯಲ್ಲಿ ಕೃಷಿ ಮಾಡುವುದು ಅಸಾಧ್ಯ ಎಂಬಂತಹ ಸ್ಥಿತಿ ಇದೆ.

‘ಕೊಣ್ಣೂರು ಸೇತುವೆ ನಿರ್ಮಾಣದಿಂದಾಗಿಯೇ ಹಲವಾರು ಸಮಸ್ಯೆಗಳು ಸೃಷ್ಟಿಯಾಗಿವೆ. ಸೇತುವೆ ನಿರ್ಮಾಣಗೊಂಡ ನಂತರ ಜಮೀನುಗಳಿಗೆ ನೀರು ನುಗ್ಗುವ ಪ್ರಮಾಣ ಹಿಗ್ಗಿತು. ಪ್ರವಾಹ ಭೀತಿ ಎದುರಾಯಿತು. ಸೇತುವೆಯನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು ಹಾಗೂ ನದಿಯಲ್ಲಿನ ಹೂಳು ಎತ್ತಿಸಬೇಕು. ಇವೆರಡು ಕೆಲಸಗಳು ಆದರೆ ಸಮಸ್ಯೆ ಇಷ್ಟು ಬಿಗಡಾಯಿಸುವುದಿಲ್ಲ’ ಎಂದು ವಾಸನ ಗ್ರಾಮಸ್ಥರು ಕೇಂದ್ರ ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿಕೊಟ್ಟರು.

ವಾಸನ ಗ್ರಾಮದದಲ್ಲಿ ಒಂದು ಭಾಗ ನೀರಿನಿಂದ ಆವೃತವಾಗಿದ್ದರೆ; ಮತ್ತೊಂದು ಭಾಗದಲ್ಲಿ ಪೈರುಗಳೆಲ್ಲವೂ ಸಮೃದ್ಧತೆಯಿಂದ ತೊನೆದಾಡುತ್ತಿದ್ದವು. ಅದನ್ನು ದಾಟಿ ಲಖಮಾಪುರಕ್ಕೆ ಬಂದ ತಂಡಕ್ಕೆ ಅಲ್ಲಿ ತದ್ವಿರುದ್ಧ ಚಿತ್ರಣ ಕಾಣಿಸಿತು.

ಲಖಮಾಪುರ ಸುತ್ತಮುತ್ತಲಿನ ಜಮೀನುಗಳಲ್ಲಿ ಇದ್ದ ಪೈರು ಕೊಳೆತು ಬೀಳುವ ಸ್ಥಿತಿಯಲ್ಲಿರುವುದು ಕಂಡುಬಂತು. ಈ ಊರಿಗೆ ಹೊರಗಿನಿಂದ ಸಂಪರ್ಕ ಕಲ್ಪಿಸುವ ಏಕೈಕ ಸೇತುವೆ ಬಳಿ ನೆರೆ ನೀರು ಇಳಿದಿತ್ತು. ಅದನ್ನು ದಾಟಿ ಮುಂದೆ ಹೋದಾಗ ಊರಿನಲ್ಲಿ ಉಸಿರುಗಟ್ಟಿಸುವಂತಹ ವಾತಾವರಣ ಇತ್ತು. ಪ್ರವಾಹದಿಂದ ಹಾನಿಗೊಳಗಾಗದ ಮನೆ ಹಾಗೂ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದ ತಂಡ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು.

‘ಗ್ರಾಮ ಸ್ಥಳಾಂತರಕ್ಕೆ ಸ್ಥಳ ಗುರುತಿಸಲಾಗಿದ್ದು, ಗ್ರಾಮಸ್ಥರೆಲ್ಲರೂ ಒಪ್ಪಿದಲ್ಲಿ ಸ್ಥಳಾಂತಕ್ಕೆ ಯತ್ನಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದರು. ಆದರೆ, ಊರಿನ ಜನ ಬೆಳಗಾವಿ ಜಿಲ್ಲೆಗೆ ಸೇರಿದ ಪ್ರದೇಶದಲ್ಲಿ ವಸತಿ ಸೌಕರ್ಯ ಕಲ್ಪಿಸಿಕೊಡಬೇಕು ಎಂಬ ಬೇಡಿಕೆ ಇಟ್ಟರು.

ಗದಗ ಜಿಲ್ಲೆ ವ್ಯಾಪ್ತಿಯಲ್ಲೇ ಸ್ಥಳ ನೋಡುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಬೇರೆ ಜಿಲ್ಲೆಗೆ ಸ್ಥಳಾಂತರಗೊಂಡರೆ ಆಗುವ ತೊಂದರೆಗಳ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು. ಈ ವಿಚಾರವಾಗಿ ಒಮ್ಮತದ ನಿರ್ಧಾರಕ್ಕೆ ಬಂದು ತಿಳಿಸುವುದಾಗಿ ಗ್ರಾಮಸ್ಥರು ತಿಳಿಸಿದರು.

ಪ್ರತಿವರ್ಷ ಪ್ರವಾಹ ಬಂದಾಗ ಊರು ತೊರೆಯುವ ಸ್ಥಿತಿ ಈ ಗ್ರಾಮಗಳಲ್ಲಿ ಇದೆ. ನೂರಾರು ಕೋಟಿಯಷ್ಟು ಬೆಳೆ ಹಾನಿಯಾಗುತ್ತದೆ. ಈ ಬಾರಿಯ ಪ್ರವಾಹದಿಂದಾಗಿ ಗದಗ ಜಿಲ್ಲೆಯಲ್ಲಿ ₹157 ಕೋಟಿ ಹಾನಿ ಸಂಭವಿಸಿದೆ. ಪ್ರವಾಹದ ಸಂಕಷ್ಟದಿಂದ ಜನರನ್ನು ಪಾರುಮಾಡಲು ಜಿಲ್ಲಾಡಳಿತ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು ಎಂಬುದು ಇಲ್ಲಿನ ಜನರ ಒತ್ತಾಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು