ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಗುಂದ: ಅತಿವೃಷ್ಟಿಗೆ ಅಪಾರ ಬೆಳೆ ಹಾನಿ

ಬೆಣ್ಣೆಹಳ್ಳ, ಮಲಪ್ರಭಾ ಪ್ರವಾಹ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
Last Updated 26 ಜುಲೈ 2021, 2:58 IST
ಅಕ್ಷರ ಗಾತ್ರ

ನರಗುಂದ: ‘ಎಕರೆಗೆ ₹20 ಸಾವಿರ ಖರ್ಚು ಮಾಡಿ ಹೆಸರು ಬೆಳೆದಿದ್ದೀವಿ, ಕಾಯಿ ಆರಂಭವಾಗಿತ್ತು. ಆದ್ರ ಬೆಣ್ಣೆ ಹಳ್ಳದ ಪ್ರವಾಹದಿಂದ ಎಲ್ಲ ಕೊಚ್ಚಿಕೊಂಡು ಹೋಯಿತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂದು ತಾಲ್ಲೂಕಿನ ಸುರಕೋಡ ಗ್ರಾಮದ ರೈತ ಶಿವಾನಂದ ಬನಹಟ್ಟಿ ಸಂಕಷ್ಟ ತೋಡಿಕೊಂಡರು.

ಬೆಣ್ಣೆ ಹಳ್ಳ ದೂರದ ಸಂಶಿಯ ಬಳಿ ಉಗಮಿಸಿದರೂ ನರಗುಂದ, ರೋಣ ತಾಲ್ಲೂಕಿನ ರೈತರಿಗೆ ಬೆಳೆ ಹಾಳು ಮಾಡಿದೆ. ಪ್ರತಿ ವರ್ಷ ಸಿಂಹಸ್ವಪ್ನವಾಗಿ ಕಾಡುತ್ತಿದೆ. ಸುರಕೋಡ, ಕುರ್ಲಗೇರಿ, ಹದಲಿ, ಗಂಗಾಪುರ, ರಡ್ಡೇರ ನಾಗನೂರ, ಬನಹಟ್ಟಿ, ಯಾವಗಲ್ ಗ್ರಾಮಗಳ ಹಳ್ಳದ ದಂಡೆಯ ಬಹುತೇಕ ಬೆಳೆಗಳು ಜಲಾವೃತವಾಗಿವೆ.

ಬೆಳೆ ಹಾಳಾಗುವುದಲ್ಲದೇ ಜಮೀನಿನ ತೇವಾಂಶ ಕಡಿಮೆಯಾಗಿ ಮುಂದಿನ ಕೃಷಿ ಚಟುವಟಿಕೆ ಮಾಡಲು ಒಂದೆರಡು ತಿಂಗಳೇ ಬೇಕಾಗುತ್ತದೆ. ಇದರಿಂದ ಈ ಗ್ರಾಮಗಳ ರೈತರ ಬಾಳು ಗೋಳಾದಂತಾಗಿದೆ. ಅತಿವೃಷ್ಟಿಯಿಂದ ತತ್ತರಿಸಿದ ರೈತರು ಈಗ ಪ್ರವಾಹಕ್ಕೆ ತತ್ತರಿಸುವಂತಾಗಿದೆ.

ಹೆಸರು, ಮೆಕ್ಕೆಜೋಳ, ಈರುಳ್ಳಿ, ಶೇಂಗಾ, ಹತ್ತಿ, ಮೆಣಸಿನಕಾಯಿ ಬೆಳೆ ಸೇರಿದಂತೆ ಸುಮಾರು 2 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿ ವರ್ಷ ಬೆಣ್ಣೆ ಹಳ್ಳದ ದಂಡೆಯಲ್ಲಿನ ಜಮೀನಿನ ರೈತರ ಪಾಡು ಇದೇ ಆಗಿದೆ. ಬೆಳೆ ಹಾನಿ ಪರಿಹಾರವೂ ಸರಿಯಾಗಿ ದೊರೆಯುವುದಿಲ್ಲ. ಹೀಗಾದರೆ ರೈತರು ಬದುಕುವುದಾದರೂ ಹೇಗೆ? ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬದು ನೆಲಸಮ: ಪ್ರವಾಹದಿಂದ ಇದ್ದ ಮಣ್ಣು ಕೊಚ್ಚಿ ಕೊಂಡು ಹೋಗುವುದಲ್ಲದೇ ಎಲ್ಲ ಬದುಗಳು (ಒಡ್ಡುಗಳು) ನೆಲಸಮವಾಗಿ, ನೀರು ಹರಿಯುತ್ತಿದೆ.

ಮಲಪ್ರಭಾ ಪ್ರವಾಹಕ್ಕೂ ಕೊಣ್ಣೂರ ಸುತ್ತಮುತ್ತಲಿನ ಗ್ರಾಮಗಳ ಸಾಮಾನ್ಯ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿವೆ. ಮಲಪ್ರಭೆ ಎಲ್ಲ ರೀತಿ ತೊಂದರೆ ಉಂಟು ಮಾಡಿದ್ದು ರೈತರು ಕಂಗಾಲಾಗುವಂತಾಗಿದೆ.

‘ಪುಡಿಗಾಸಿನ ಪರಿಹಾರ ಕೊಡುವುದನ್ನು ಸರ್ಕಾರ ಕೈ ಬಿಡಬೇಕು. ಬೆಳೆ ಹಾನಿಯಾದಷ್ಟು ಪರಿಹಾರ ನೀಡಬೇಕು. ಸರಿಯಾಗಿ ಬೆಳೆ ಹಾನಿ ಸಮೀಕ್ಷೆ ನಡೆಯಬೇಕು’ ಎಂದು ಕುರ್ಲಗೇರಿ ರೈತ ಯಲ್ಲಪ್ಪ ಚಲುವಣ್ಣವರ ಆಗ್ರಹಿಸುತ್ತಾರೆ.

***

ಬೆಣ್ಣೆ ಹಳ್ಳ ಹಾಗೂ ಮಲಪ್ರಭಾ ಪ್ರವಾಹಕ್ಕೆ 16 ಹಳ್ಳಿಗಳ ಸುಮಾರು 4,500 ಹೆಕ್ಟೇರ್ ಬೆಳೆ ಹಾನಿಯಾಗಿದೆ. ತಂಡಗಳ ಮೂಲಕ ಬೆಳೆ ಹಾನಿ ಸಮೀಕ್ಷೆ ನಡೆಸಲಾಗುವುದು.
-ಎ.ಡಿ.ಅಮರಾವದಗಿ, ತಹಶೀಲ್ದಾರ್ ನರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT