ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೇಶ್ವರ: ಬೇಸಿಗೆಯಲ್ಲೂ ಅರಳಿ ನಿಂತ ಹೂಗಳು

ಅರಣ್ಯ ಇಲಾಖೆಯ ಸತತ ಪ್ರಯತ್ನದ ಫಲ
Published : 13 ಮೇ 2024, 4:37 IST
Last Updated : 13 ಮೇ 2024, 4:37 IST
ಫಾಲೋ ಮಾಡಿ
Comments

ಲಕ್ಷ್ಮೇಶ್ವರ: ಬರಗಾಲದ ಸುಡುಬಿಸಿಲಿಗೆ ಗಿಡ ಮರಗಳು ಒಣಗುತ್ತಿವೆ. ಈಗಾಗಲೇ ಅರಣ್ಯ ಪ್ರದೇಶಗಳಲ್ಲಿ ತೇವಾಂಶದ ಕೊರತೆಯಿಂದಾಗಿ ಹಸಿರು ಮರಗಳು ಒಣಗಿವೆ. ಇನ್ನು ಹಸಿರನ್ನೇ ಅವಲಂಬಿಸಿರುವ ಪಶು, ಪ್ರಾಣಿ, ಪಕ್ಷಿಗಳು ಬಳಲುತ್ತಿವೆ. ಇಂಥ ಭೀಕರ ಪರಿಸ್ಥಿತಿಯಲ್ಲೂ ತಾಲ್ಲೂಕು ಸಾಮಾಜಿಕ ವಲಯ ಅರಣ್ಯ ಇಲಾಖೆಯ ಸತತ ಪ್ರಯತ್ನದಿಂದಾಗಿ ರಸ್ತೆ ಬದಿಯಲ್ಲಿ ನೂರಾರು ಗಿಡಗಳು ಹಸಿರಿನಿಂದ ಕಂಗೊಳಿಸುತ್ತಿದ್ದು, ಕೆಲ ಗಿಡ ಮರಗಳಲ್ಲಿ ಬೇಸಿಗೆ ಕಾಲದ ಹೂಗಳು ಅರಳಿ ಪ್ರಕೃತಿ ಪ್ರಿಯರ ಮನ ಮುದಗೊಳಿಸುತ್ತಿವೆ.

ತಾಲ್ಲೂಕಿನ ಹುಲ್ಲೂರು ಗ್ರಾಮದಿಂದ ಸೂರಣಗಿ ಕ್ರಾಸ್‍ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಯಲ್ಲಿ ಮೂರು ವರ್ಷಗಳ ಹಿಂದೆ ನಾಟಿ ಮಾಡಿದ್ದ ಹತ್ತಾರು ಜಾತಿಯ ನೂರಾರು ಗಿಡಗಳು ಇಂದು ಚೆನ್ನಾಗಿ ಬೆಳೆದಿದ್ದು ದಾರಿಹೋಕರಿಗೆ ನೆರಳು ನೀಡುತ್ತಿವೆ. ಸಣ್ಣ ಸಣ್ಣ ಸಸಿಗಳನ್ನು ನಾಟಿ ಮಾಡಿದ ನಂತರ ಅರಣ್ಯ ಇಲಾಖೆಯು ಬೇಸಿಗೆ ಕಾಲದಲ್ಲಿ ಗಿಡಗಳಿಗೆ ಟ್ಯಾಂಕರ್ ಮೂಲಕ ನೀರು ಹರಿಸಿ ಅವು ಬಾಡದಂತೆ ನೋಡಿಕೊಂಡಿತ್ತು. ಇದೀಗ ಸಸಿಗಳು ದೊಡ್ಡದಾಗಿ ಬೆಳೆದು ಗಿಡಳಾಗಿವೆ.

ರಸ್ತೆಯ ಎರಡೂ ಬದಿಯಲ್ಲಿ ಇಲಾಖೆಯು ಅಂದಾಜು 900 ಗಿಡಗಳನ್ನು ಬೆಳೆಸಿದ್ದು ಅವುಗಳಲ್ಲಿ ಗುಲ್‍ಮೊಹರ್ ಗಿಡಗಳು ಹೂ ಬಿಟ್ಟು ನಳನಳಿಸುತ್ತಿವೆ. ಬೆಳಗಿನ ಸಮಯದಲ್ಲಿ ಕೆಂಪು ಬಣ್ಣದ ಹೂಗಳು ಬೀಸುವ ಗಾಳಿಗೆ ತಲೆದೂಗುತ್ತಿದ್ದು ಅಧಿಕಾರಿಗಳ ಶ್ರಮವನ್ನು ಸಾರ್ಥಕ ಮಾಡಿವೆ.

ಬೇವು, ಮಹಾಗನಿ, ಇಲಾಚಿ ಹುಣಸೆ, ಬಸವನಪಾದ, ತಪಸಿ, ಗುಲ್‍ಮೊಹರ್, ಅರಳಿ, ಪೋಲ್ಟೋಫಾರ್ಮ್ ಸೇರಿದಂತೆ ಮತ್ತಿತರ ಗಿಡಗಳು ಹಸಿರು ತುಂಬಿಕೊಂಡು ನಗುತ್ತಿವೆ.

‘ತಾಲ್ಲೂಕಿನ ಎಲ್ಲ ರಸ್ತೆಗಳ ಎರಡೂ ಬದಿಗಳಲ್ಲಿ ಸಾವಿರಾರು ಗಿಡಗಳನ್ನು ಬೆಳೆಸಲಾಗುತ್ತಿದೆ. ಈ ವರ್ಷದ ಬೇಸಿಗೆಯಲ್ಲಿ ಗಿಡಗಳನ್ನು ಉಳಿಸಿಕೊಳ್ಳುವುದೇ ನಮಗೆ ಸವಾಲಾಗಿತ್ತು. ಕೆರೆ- ಕಟ್ಟೆ, ಹಳ್ಳ- ಕೊಳ್ಳಗಳು ತುಂಬಿದ್ದರೆ ಅಲ್ಲಿನ ನೀರನ್ನು ಟ್ಯಾಂಕರ್ ಮೂಲಕ ಗಿಡಗಳಿಗೆ ಹಾಕುವುದು ಸುಲಭ. ಆದರೆ ಭೀಕರ ಬರಗಾಲದಿಂದಾಗಿ ಈ ನೀರಿನ ಮೂಲಗಳು ಬರಿದಾಗಿವೆ’ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೌಶಿಕ್ ದಳವಾಯಿ ಹೇಳಿದರು.

‘ಅವಶ್ಯಕತೆ ಇದ್ದಾಗ ಟ್ಯಾಂಕರ್ ಮೂಲಕ ನೀರು ಹಾಕಿ ಗಿಡಗಳನ್ನು ಕಾಪಾಡಿ ಬೆಳೆಸಿದ್ದೇವೆ. ಹೀಗಾಗಿ ಅವು ಚೆನ್ನಾಗಿ ಬೆಳೆದಿವೆ’ ಎಂದು ಸಾಮಾಜಿಕ ಅರಣ್ಯ ಇಲಾಖೆಯ ಗಸ್ತು ವನಪಾಲಕ ಮಹಾಂತೇಶ ಲಮಾಣಿ ತಿಳಿಸಿದರು.

ಕಷ್ಟಪಟ್ಟು ಬೆಳೆಸಿದ ಗಿಡಗಳನ್ನು ಉಳಿಸಿಕೊಳ್ಳಲು ಖಾಸಗಿ ಕೊಳವೆಬಾವಿಗಳಿಂದ ನೀರು ತಂದು ಹಾಕಿದ್ದೇವೆ. ಗಿಡ ಮರಗಳನ್ನು ಉಳಿಸಿ ಬೆಳೆಸುವುದು ಇಲಾಖೆಯ ಕೆಲಸವಷ್ಟೇ ಅಲ್ಲ. ನಾಗರಿಕ ಸಮಾಜದ ಜವಾಬ್ದಾರಿ ಕೂಡ ಹೌದು

–ಕೌಶಿಕ್ ದಳವಾಯಿ ಸಾಮಾಜಿಕ ವಲಯ ಅರಣ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT