ಹಸಿರು ಉಳಿಸಲು ‘ಜೀವ ರಕ್ಷಕ’ ತಂತ್ರಜ್ಞಾನ..!

ಶುಕ್ರವಾರ, ಮೇ 24, 2019
30 °C
ಮಳೆಗಾಲಕ್ಕೆ ಮೊದಲೇ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡುತ್ತಿರುವ ಅರಣ್ಯ ಇಲಾಖೆ

ಹಸಿರು ಉಳಿಸಲು ‘ಜೀವ ರಕ್ಷಕ’ ತಂತ್ರಜ್ಞಾನ..!

Published:
Updated:
Prajavani

ಲಕ್ಷ್ಮೇಶ್ವರ: ಈ ಬಾರಿ ಮಳೆಗಾಲಕ್ಕೆ ಮುನ್ನವೇ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟು, ನೀರುಣಿಸಿ ಬೆಳೆಸಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ. ಈಗಾಗಲೇ ಲಕ್ಷ್ಮೇಶ್ವರ ತಾಲ್ಲೂಕು ವ್ಯಾಪ್ತಿಯಲ್ಲಿ ಸಸಿಗಳ ನೆಡುವಿಕೆಯೂ ಪ್ರಾರಂಭವಾಗಿದೆ.

ಸಾಮಾನ್ಯವಾಗಿ ಅರಣ್ಯ ಇಲಾಖೆಯು ಮಳೆಗಾಲ ಆರಂಭವಾದ ನಂತರ ಅಂದರೆ ಜೂನ್‌ ಅಂತ್ಯದಲ್ಲಿ ಮತ್ತು ಜುಲೈ ತಿಂಗಳಲ್ಲಿ ಸಸಿಗಳನ್ನು ನೆಡೆತ್ತಿತ್ತು. ಆದರೆ, ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆ ಉಂಟಾಗಿ ಈ ಸಸಿಗಳು ಒಣಗಿ ಹೋಗುತ್ತಿದ್ದವು. ಆದರೆ, ಈ ಬಾರಿ ಮಳೆಗಾಲದ ಪೂರ್ವದಲ್ಲೇ ಸಸಿಗಳನ್ನು ನೆಟ್ಟು, ಅದಕ್ಕೆ ನೀರುಣಿಸಿ, ಮಳೆಗಾಲ ಪ್ರಾರಂಭದ ಹೊತ್ತಿಗೆ ಅವು ಚೆನ್ನಾಗಿ ಚಿಗುರುವಂತೆ ಮಾಡುವ ಯೋಜನೆ ಹೊಂದಲಾಗಿದೆ. ನಂತರ ಮಳೆ ಕೊರತೆಯಾದರೂ ಈ ಸಸಿಗಳು ಬದುಕಿ ಉಳಿಯುತ್ತವೆ.

ಹೊಸ ತಂತ್ರಜ್ಞಾನ: ಈ ಬಾರಿ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡುವಾಗ, ದೀರ್ಘಾವಧಿವರೆಗೆ ಮಣ್ಣಿನಲ್ಲಿ ತೇವಾಂಶ ಕಾಯ್ದುಕೊಳ್ಳುವಂತೆ ಮಾಡಲು ಹೊಸ ‘ಜೀವ ರಕ್ಷಕ ತಂತ್ರಜ್ಞಾನ’ವನ್ನು ಇಲಾಖೆ ಬಳಸಿದೆ. ಅಂದರೆ, ಸಸಿಗಳನ್ನು ನೆಡುವಾಗ, ಸಸಿ ನೆಡುವ ಗುಂಡಿಯಲ್ಲಿ ‘ವ್ಯಾಮ್‌’ ಎನ್ನುವ ಜೈವಿಕ ಗೊಬ್ಬರನವನ್ನು ಹಾಕಲಾಗುತ್ತದೆ. ಇದರ ಜತೆಗೆ 1 ಗ್ರಾಂ ಅಕ್ವಾಜೆಲ್ ಮಿಶ್ರಣ ಹಾಗು ಒಂದು ಬುಟ್ಟಿ ಮರಳನ್ನು ಹಾಕಿ ನಂತರ ಸಸಿಗಳನ್ನು ನೆಡಲಾಗುತ್ತದೆ. ‘ಈ ರೀತಿ ಸಸಿಗಳನ್ನು ನೆಡುವುದರಿಂದ ಮಣ್ಣಿನಲ್ಲಿ ತೇವಾಂಶ ಒಂದು ತಿಂಗಳವರೆಗೆ ಇರುತ್ತದೆ. ಒಂದು ತಿಂಗಳು ಮಳೆಯಾಗದಿದ್ದರೂ ಸಸಿಗಳು ಒಣಗುವುದಿಲ್ಲ’ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್‌ ವೃಷ್ಣಿ ಹೇಳಿದರು.

‘ಮಳೆಯಾಗದಿದ್ದರೆ ತೇವಾಂಶ ಕೊರತೆಯಿಂದ ಸಸಿಗಳು ಒಣಗುತ್ತಿದ್ದವು. ಆದರೆ, ಈ ಬಾರಿ ಅದಕ್ಕೆ ಅವಕಾಶ ಇಲ್ಲ. ಜೀವ ರಕ್ಷಕ ತಂತ್ರಜ್ಞಾನದಿಂದ ಸಸಿಗಳು ಬದುಕಿ ಉಳಿಯುವ ಸಾಧ್ಯತೆ ಹೆಚ್ಚಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಎಚ್. ಪರಿಮಳ ಅಭಿಪ್ರಾಯಪಟ್ಟರು.

ಸದ್ಯ ತಾಲ್ಲೂಕಿನ ಬಸಾಪುರ ಹಾಗೂ ಲಕ್ಷ್ಮೇಶ್ವರದ ರಸ್ತೆಗುಂಟ ಈ ತಂತ್ರಜ್ಞಾನ ಬಳಸಿ 1800 ಸಸಿಗಳನ್ನು ನೆಡಲಾಗುತ್ತಿದೆ. ಸಸಿಗಳ ಬುಡದಲ್ಲಿ ಈ ರಾಸಾಯನಿಕ ಮಿಶ್ರಣ ಇರುವುದರಿಂದ ಮಣ್ಣಿನಲ್ಲಿ ಶೇ 20ರಷ್ಟು ತೇವಾಂಶ ಉಳಿದುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ತಾಲ್ಲೂಕು  ವಲಯ ಅರಣ್ಯಾಧಿಕಾರಿ ಸತೀಶ ಪೂಜಾರ ಮಾಹಿತಿ ನೀಡಿದರು.

‘ಜೀವ ರಕ್ಷಕ ತಂತ್ರಜ್ಞಾನ ಬಳಸಿ ಸಸಿಗಳನ್ನು ನೆಡುವುದರಿಂದ ತಿಂಗಳಿಗೊಮ್ಮೆ ನೀರು ಕೊಟ್ಟರೆ ಸಾಕಾಗುತ್ತದೆ’ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !