‘ಸ್ಮಾರ್ಟ್‌ ವಿಲೇಜ್‌’ ಗುರುತಿಸುವಿಕೆಗೆ ಚಾಲನೆ

ಭಾನುವಾರ, ಏಪ್ರಿಲ್ 21, 2019
32 °C
ಗ್ರಾಮೀಣಾಭಿವೃದ್ಧಿ ವಿವಿ ಸಹಯೋಗದ ಯೋಜನೆ; ಅ.2ರಂದು ಫಲಿತಾಂಶ

‘ಸ್ಮಾರ್ಟ್‌ ವಿಲೇಜ್‌’ ಗುರುತಿಸುವಿಕೆಗೆ ಚಾಲನೆ

Published:
Updated:
Prajavani

ಗದಗ: ರಾಜ್ಯ ಸರ್ಕಾರ, ಭಾರತೀಯ ಗುಣಮಟ್ಟ ಮಂಡಳಿ ಸಹಯೋಗದೊಂದಿಗೆ ಇಲ್ಲಿನ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯವು ‘ಸ್ಮಾರ್ಟ್ ವಿಲೇಜ್’ ಗುರುತಿಸುವಿಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಭಾರತೀಯ ಗುಣಮಟ್ಟ ಮಂಡಳಿಯ ನಿರ್ದೇಶಕ ಡಾ. ವೆಂಕಟೇಶ್ ತುಪ್ಪಿಲ್ ಹಾಗೂ ಭಾರತೀಯ ಗುಣಮಟ್ಟ ಪ್ರಾಧಿಕಾರದ ಟಾಗೋರ್‌ ಹಾಗೂ ಸತೀಶ್ ಜೈನ್ ಅವರನ್ನೊಳಗೊಂಡ ಸಂಪನ್ಮೂಲ ವ್ಯಕ್ತಿಗಳ ತಂಡವು ಗುರುವಾರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಈ ಕುರಿತು ಚರ್ಚೆ ನಡೆಸಿದರು.

ಈ ಎರಡೂ ಸಂಸ್ಥೆಗಳು ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಸಹಯೋಗದೊಂದಿಗೆ ‘ಪ್ರಗತಿ’ (ಪಂಚಾಯತ್‌ ರಾಜ್‌ ಆಡಳಿತ ಮೌಲ್ಯಮಾಪನ ಮತ್ತು ತರಬೇತಿ ) ಎಂಬ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಇದಕ್ಕೆ ಗ್ರಾಮೀಣ ವಿವಿಯೂ ಇದಕ್ಕೆ ಕೈ ಜೋಡಿಸಿದೆ.

‘ಪ್ರಗತಿ’ ಯೋಜನೆಯಡಿ ಆಯ್ದ 1,500 ಗ್ರಾಮ ಪಂಚಾಯ್ತಿಗಳಿಗೆ ತರಬೇತಿ ಹೊಂದಿದ ಸಂಪನ್ಮೂಲ ವ್ಯಕ್ತಿಗಳು ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಗೆ ಸರ್ಕಾರದ ಯೋಜನೆಗಳು, ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಕುರಿತು ಮಾಹಿತಿ ನೀಡಲಿದ್ದಾರೆ.

ನಂತರ ಈ ಪಂಚಾಯ್ತಿ ವ್ಯಾಪ್ತಿಯ ಆಯ್ದ ಗ್ರಾಮಗಳು ‘ಸ್ಮಾರ್ಟ್‌ ವಿಲೇಜ್‌’ ಸ್ಪರ್ಧೆಯಲ್ಲಿ ಭಾಗವಹಿಸಲಿವೆ.

‘ಅ.2ರಂದು ಈ ಸ್ಪರ್ಧೆಯಲ್ಲಿ ಜಯಶಾಲಿಯಾದ ಗ್ರಾಮಗಳನ್ನು ‘ಸ್ಮಾರ್ಟ್‌ ವಿಲೇಜ್‌’ಗಳಾಗಿ ಘೋಷಿಸಿ, ಪ್ರಶಸ್ತಿ ಹಾಗೂ ಪ್ರೋತ್ಸಾಹ ಧನ ನೀಡಲಾಗುವುದು. ಇದರಿಂದ ಇತರ ಗ್ರಾಮಗಳು ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಕೊಳ್ಳಲು ಪ್ರೇರಣೆ ಲಭಿಸುತ್ತವೆ’ ಎಂದು ಡಾ. ವೆಂಕಟೇಶ್ ತುಪ್ಪಿಲ್ ಹೇಳಿದರು.

‘ನಗರಾಭಿವೃದ್ಧಿಗಿಂತಲೂ ಗ್ರಾಮಾಭಿವೃದ್ಧಿ ಸುಲಭ, ಗ್ರಾಮಗಳನ್ನು ಅಭಿವೃದ್ಧಿಪಡಿಸುವದಕ್ಕೆ ಬೇಕಾದ ಬದ್ಧತೆ, ಕೌಶಲ ಹೊಂದಿದ ಮಾನವ ಸಂಪನ್ಮೂಲದ ಅವಶ್ಯಕತೆಯಿದ್ದು, ಅದನ್ನು ನಿರ್ಮಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯವು ಸಕ್ರಿಯವಾಗಿ ತೊಡಗಿಸಿಕೊಂಡಿದೆ’ ಎಂದು ಈ ತಂಡದ ಸದಸ್ಯರು ಅಭಿಪ್ರಾಯಪಟ್ಟರು.

ಈ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ, ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಕ್ರಮಗಳು, ಮೌಲ್ಯಮಾಪನ ಪಟ್ಟಿಯಲ್ಲಿ ಸೇರಿಸಬೇಕಾದ ಸೂಚ್ಯಂಕಗಳು ಹಾಗೂ ಇದರ ಪರಿಣಾಮಗಳ ಕುರಿತು ಅವರು ಚರ್ಚೆ ನಡೆಸಿದರು.

ಕುಲಪತಿ ಪ್ರೊ. ತಿಮ್ಮೇಗೌಡ, ಕುಲಸಚಿವ ಡಾ.ಸುರೇಶ ನಾಡಗೌಡರ, ಮೌಲ್ಯಮಾಪನ ಕೇಂದ್ರದ ನಿರ್ದೇಶಕ ಡಾ. ಶಿವಣ್ಣ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಪ್ರಾಣೇಶ್ ರಾವ್ ಇದ್ದರು.

ದತ್ತು ಗ್ರಾಮಗಳಿಗೆ ಭೇಟಿ
ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯವು ದತ್ತು ಪಡೆದುಕೊಂಡಿರುವ ತಾಲ್ಲೂಕಿನ ಹುಲಕೋಟಿ, ನಾಗಾವಿ ಹಾಗೂ ಬಿಂಕದಕಟ್ಟಿ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿದರು.

ಈ ಗ್ರಾಮಗಳಲ್ಲಿ ಗ್ರಾಮ ಪಂಚಾಯ್ತಿ ಸಿಬ್ಬಂದಿ ಹಾಗೂ ಗ್ರಾಮಸ್ಥರೊಡನೆ ಚರ್ಚೆ ನಡೆಸಿದರು. ಹುಲಕೋಟಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರಕ್ಕೂ ಭೇಟಿ ನೀಡಿದ ತಂಡವು ಅಲ್ಲಿನ ಸಿಬ್ಬಂದಿ ಜತೆಗೆ ಚರ್ಚೆ ನಡೆಸಿತು.

ಗ್ರಾಮ ಪಂಚಾಯ್ತಿಗಳ ಕಾರ್ಯಕ್ಷಮತೆ ಹೆಚ್ಚಿಸಿ, ಗ್ರಾಮಗಳಲ್ಲಿ ಮೂಲಸೌಕರ್ಯ ಒದಗಿಸಿ, ಗ್ರಾಮಗಳಿಂದ ವಲಸೆ ಹೋದವರನ್ನು ಮರಳಿ ಗ್ರಾಮಗಳಿಗೆ ಬರುವಂತೆ ಮಾಡುವುದು ‘ಪ್ರಗತಿ’ ಯೋಜನೆಯ ಮುಖ್ಯ ಉದ್ದೇಶ.

*
ಗ್ರಾಮೀಣಾಭಿವೃದ್ಧಿಯ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ‘ಪ್ರಗತಿ’ ಯೋಜನೆ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ವಿಶ್ವವಿದ್ಯಾಲಯವೂ ಇದಕ್ಕೆ ಕೈಜೋಡಿಸಿದೆ.
-ಪ್ರೊ. ತಿಮ್ಮೇಗೌಡ, ಕುಲಪತಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !