ಗುರುವಾರ , ನವೆಂಬರ್ 21, 2019
23 °C
ಹಳ್ಳದಲ್ಲಿ ಕೊಚ್ಚಿಹೋದ ಸವಾರರನ್ನು ರಕ್ಷಿಸಿದ ಗ್ರಾಮಸ್ಥರು

ಚಿತ್ತಾ ಮಳೆಗೆ ತತ್ತರಿಸಿದ ಜಿಲ್ಲೆ

Published:
Updated:
Prajavani

ಗದಗ: ಸೋಮವಾರ ಇಡೀ ರಾತ್ರಿ ಮತ್ತು ಮಂಗಳವಾರ ಮಧ್ಯಾಹ್ನ ಅಬ್ಬರಿಸಿದ ಮಹಾಮಳೆಗೆ ಗದಗ–ಬೆಟಗೇರಿ ಅವಳಿ ನಗರವೂ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಜಿಲ್ಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ ಒಟ್ಟು 194 ಮಿ.ಮೀಯಷ್ಟು ಮಳೆಯಾಗಿದೆ. ಕಳೆದೊಂದು ದಶಕದಲ್ಲಿ 24 ಗಂಟೆಗಳ ಅವಧಿಯಲ್ಲಿ ಸುರಿದಿರುವ ಗರಿಷ್ಠ ಪ್ರಮಾಣದ ಮಳೆ ಇದಾಗಿದೆ.

ಅಕ್ಟೋಬರ್‌ ತಿಂಗಳಲ್ಲಿ ಜಿಲ್ಲೆಯ ವಾಡಿಕೆ ಮಳೆ ಪ್ರಮಾಣ 121 ಮಿ.ಮೀ. ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಈ ಪ್ರಮಾಣಕ್ಕಿಂತಲೂ ಹೆಚ್ಚಿನ ಮಳೆಯಾಗಿದೆ. ರೋಣ, ನರಗುಂದ, ಲಕ್ಷ್ಮೇಶ್ವರ ತಾಲ್ಲೂಕಿನ ಹಲವೆಡೆ ಹಳ್ಳಗಳು ತುಂಬಿ ಹರಿಯುತ್ತಿವೆ. ಚೆಕ್‌ಡ್ಯಾಂಗಳು ಭರ್ತಿಯಾಗಿವೆ. ಹಲವೆಡೆ ಎದೆಮಟ್ಟಕ್ಕೆ ಬೆಳೆದು ಇನ್ನೇನು ಕಟಾವಿಗೆ ಬಂದಿದ್ದ ಸೂರ್ಯಕಾಂತಿ ಬೆಳೆ ಮಳೆಯಿಂದ ಹಾನಿಗೀಡಾಗಿವೆ. ಜಮೀನಿನಲ್ಲಿ ಮೊಣಕಾಲು ಮಟ್ಟದಲ್ಲಿ ನೀರು ನಿಂತಿದೆ. ಈರುಳ್ಳಿ, ಮೆಣಸಿನಕಾಯಿ, ತರಕಾರಿ ಜಮೀನಿನಲ್ಲೇ ಕೊಳೆಯಲು ಆರಂಭಿಸಿದೆ.

ಕೋಡಿ ಬಿದ್ದ ಕೆರೆಗಳು: ಜಿಲ್ಲೆಯ ಐತಿಹಾಸಿಕ ಡಂಬಳದ ವಿಕ್ಟೋರಿಯಾ ಕೆರೆ, ಹಿರೇವಡ್ಡಟ್ಟಿ ಕರೆ, ಗಜೇಂದ್ರಗಡ ನಾಗೇಂದ್ರಗಡ ಕೆರೆ, ಶಿರಹಟ್ಟಿಯ ಮಾಗಡಿ ಕರೆ, ಲಕ್ಕುಂಡಿಯ ಕೆರೆ, ಲಕ್ಷ್ಮೇಶ್ವರದ ಶೆಟ್ಟಿಕೇರಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿವೆ. ಮುಂಡರಗಿ ತಾಲ್ಲೂಕಿನ ಹಮ್ಮಿಗೆ ಬಳಿ ಇರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರಗೆ ಹರಿಸಲಾಗುತ್ತಿದೆ.

ಸವಾರರ ರಕ್ಷಣೆ: ಲಕ್ಷ್ಮೇಶ್ವರ ಸಮೀಪದ ದೊಡ್ಡೂರು ಹಳ್ಳ ತುಂಬಿ ಹರಿಯುತ್ತಿದ್ದು, ಸೋಮವಾರ ಈ ಹಳ್ಳ ದಾಟಲು ಪ್ರಯತ್ನಿಸುವಾಗ ದ್ವಿಚಕ್ರ ವಾಹನ ಸವಾರರಿಬ್ಬರು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ತಕ್ಷಣ ಧಾವಿಸಿದ ಗ್ರಾಮಸ್ಥರು ಮೊಯುದ್ದೀನ್ ಶೇಖ್ ಹಾಗೂ ದಿಂಡವಾಡ ಎಂಬುವರನ್ನು ರಕ್ಷಿಸಿದ್ದಾರೆ.

ಡಂಬಳದಲ್ಲಿ ಧಾರಾಕಾರ ಮಳೆಯಿಂದ ದೊಡ್ಡ ಬಸವೇಶ್ವರ ದೇವಸ್ಥಾನದ ಹತ್ತಿರದ ಹಳ್ಳ ತು೦ಬಿ ಹರಿಯುತ್ತಿದ್ದು, ಮಂಗಳವಾರ ನಸುಕಿನಲ್ಲಿ ಹಳ್ಳ ದಾಟುವ ವೇಳೆ ಗ್ರಾಮದ ದ್ವಿಚಕ್ರ ವಾಹನ ಸವಾರ ಶಿವಾನಂದ ಚಲವಾದಿ ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿದ್ದಾರೆ. ಈಜು ಬಾರದ ಅವರು ಹಳ್ಳದ ನಡುವೆ ಇದ್ದ ಜಾಲಿಪೊದೆಯೊಂದನ್ನು ಗಟ್ಟಿಯಾಗಿ ಹಿಡಿದುಕೊಂಡು ಜೀವ ಉಳಿಸಿಕೊಂಡಿದ್ದಾರೆ. ಒಂದು ಗಂಟೆ ನಂತರ ಗ್ರಾಮಸ್ಥರು ಗಮನಿಸಿ, ಹಗ್ಗ ಎಸೆದು ಅವರನ್ನು ದಡಕ್ಕೆ ಎಳೆದುಕೊಂಡು ರಕ್ಷಿಸಿದ್ದಾರೆ.

ಮನೆಗಳಿಗೆ ನುಗ್ಗಿದ ನೀರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಗದಗ–ಬೆಟಗೇರಿ ಅವಳಿ ನಗರದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮಳೆಯ ಆರ್ಭಟಕ್ಕೆ ಗಂಗಿಮಡಿ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಪಂಚಾಕ್ಷರಿ ನಗರ, ಎಸ್.ಎಂ ಕೃಷ್ಣ ನಗರ ಹಾಗೂ ವಿವಿಧ ಪ್ರದೇಶಗಳಲ್ಲಿ ಚರಂಡಿ ನೀರು ರಸ್ತೆಗೆ ಉಕ್ಕಿ ಹರಿದಿದ್ದು, ಸಾರ್ವಜನಿಕರು, ಸವಾರರು ತೀವ್ರ ತೊಂದರೆ ಅನುಭವಿಸಿದರು. ನಗರದ ವಿವಿಧ ಕಡೆಗಳಲ್ಲಿ ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಕೆಗಾಗಿ ರಸ್ತೆ ಅಗೆದು ಹಾಕಿದ್ದು, ಮಳೆಯಾಗಿದ್ದರಿಂದ ರಸ್ತೆಯು ಕೆಸರು ಗದ್ದೆಯಂತಾಗಿದೆ.

ವಾಡಿಕೆಗಿಂತಲೂ ಹೆಚ್ಚಿನ ಮಳೆ: ಗದಗ ತಾಲ್ಲೂಕು ವ್ಯಾಪ್ತಿಯಲ್ಲಿ ಮಂಗಳವಾರ 67 ಮಿ.ಮೀ ಮಳೆಯಾಗಿದೆ. ಮುಂಡರಗಿಯಲ್ಲಿ 32 ಮಿ.ಮೀ, ನರಗುಂದದಲ್ಲಿ 37 ಮಿ.ಮೀ ಮಳೆ ಸುರಿದಿದೆ. ಶಿರಹಟ್ಟಿಯಲ್ಲಿ 56 ಮಿ.ಮೀ ಮಳೆಯಾಗಿದೆ.

ಪ್ರತಿಕ್ರಿಯಿಸಿ (+)