ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಕ್ರಾಂತಿ; ಉನ್ನತ ಶಿಕ್ಷಣಕ್ಕೆ ಆದ್ಯತೆ

ಗದುಗಿನ ಮುಕುಟಮಣಿಯಂತಿರುವ ಗ್ರಾಮೀಣಾಭಿವೃದ್ಧಿ ವಿವಿ ಹಾಗೂ ಜಿಮ್ಸ್‌
Last Updated 9 ಆಗಸ್ಟ್ 2022, 3:55 IST
ಅಕ್ಷರ ಗಾತ್ರ

ಗದಗ: ರಸ್ತೆ, ಕೈಗಾರಿಕೆ, ನೀರಾವರಿ, ಪ್ರವಾಸೋದ್ಯಮ ಅಭಿವೃದ್ದಿಯಲ್ಲಿ ಹಿಂದುಳಿದಿದ್ದರೂ ಗದಗ ಜಿಲ್ಲೆ ಶೈಕ್ಷಣಿಕವಾಗಿ ಮುನ್ನಡೆ ಸಾಧಿಸಿರುವುದು ವಿಶೇಷ. ಇಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯ ವಿಶ್ವದರ್ಜೆಯದ್ದಾಗಿದ್ದು, ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಪಸರಿಸಿದೆ. ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಲವು ದಾಖಲೆಗಳೊಂದಿಗೆ ಜಿಲ್ಲೆಯಲ್ಲಿ ವೈದ್ಯಕೀಯ ಕ್ರಾಂತಿ ಮಾಡಿದೆ.

ಜಿಲ್ಲೆಯಲ್ಲಿರುವ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಪ್ರತಿವರ್ಷ ಉತ್ತಮ ಫಲಿತಾಂಶ ದಾಖಲಾಗುತ್ತಿದ್ದು, ಶಾಲಾ ಕಾಲೇಜುಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಆದರೆ, ಇನ್ನಷ್ಟು ಸುಧಾರಣೆ ಆಗಬೇಕು ಎಂಬುದು ಜಿಲ್ಲೆಯ ಜನರ ಆಶಯವಾಗಿದೆ.

ಜಿಲ್ಲೆಯಾಗಿ ರಚನೆಗೊಂಡ ನಂತರ ಗದಗ ಶೈಕ್ಷಣಿಕವಾಗಿ ಉತ್ತಮ ಪ್ರಗತಿ ದಾಖಲಿಸುತ್ತಾ ಬಂದಿದೆ. ಶಾಲೆಗಳ ಭೌತಿಕ ಸೌಲಭ್ಯಗಳು ಉತ್ತಮಗೊಂಡಿವೆ. ಶಿಕ್ಷಣದ ಗುಣಮಟ್ಟ ಹಾಗೂ ಶಿಕ್ಷಕರ ನೇಮಕಾತಿ ಹೆಚ್ಚಾಗಿದೆ. ಕೊರತೆ ಇರುವ ಕಡೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಪಠ್ಯ ಬೋಧನೆಯನ್ನು ಸರಿದೂಗಿಸಲಾಗುತ್ತಿದೆ.

‘ಗದಗ ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಮತ್ತು ವಸತಿ ಶಾಲೆಗಳು ಸೇರಿದಂತೆ ಒಟ್ಟು 1,111 ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗದಗ ಜಿಲ್ಲೆ ಪ್ರತಿವರ್ಷ ಕೊನೆಯಿಂದ ಮೂರು ನಾಲ್ಕನೇ ಸ್ಥಾನದಲ್ಲಿ ಇರುತ್ತಿತ್ತು. ಈ ಬಾರಿ ಬೆಳಗಾವಿ ವಿಭಾಗದ ಒಂಬತ್ತು ಜಿಲ್ಲೆಗಳ ಪೈಕಿ ಮೊದಲ ಸ್ಥಾನ ಪಡೆದಿದ್ದು, ಶೇ 89.13 ಫಲಿತಾಂಶ ದಾಖಲಿಸಿದೆ’ ಎನ್ನುತ್ತಾರೆ ಗದಗ ಡಿಡಿಪಿಐ ಬಸವಲಿಂಗಪ್ಪ ಜಿ.ಎಂ.

ಗದಗ ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಸೇರಿದಂತೆ ಒಟ್ಟು 105 ಪದವಿಪೂರ್ವ ಕಾಲೇಜುಗಳಿವೆ. ಪಿಯುಸಿ ಶಿಕ್ಷಣದಲ್ಲೂ ಗದಗ ಜಿಲ್ಲೆ ಛಾಪು ಮೂಡಿಸುತ್ತಿದ್ದು, 2021– 22ನೇ ಸಾಲಿನ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದೆ. ಕೂಲಿ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಜಿಲ್ಲೆಯ ವಿದ್ಯಾರ್ಥಿಯೊಬ್ಬ ಕಲಾ ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್‌ ಪಡೆದು ಗದುಗಿನ ಶೈಕ್ಷಣಿಕ ಗರಿಮೆ ಹೆಚ್ಚಿಸಿದ್ದಾನೆ. ಜಿಲ್ಲೆಯಲ್ಲಿನ ಕೆಲವು ಸರ್ಕಾರಿ ಪಿಯು ಕಾಲೇಜುಗಳಿಗೆ ಕಟ್ಟಡಗಳ ಅವಶ್ಯಕತೆ ಇದೆ. ಕೆಲವೆಡೆ ಉಪನ್ಯಾಸಕರ ಕೊರತೆ ತೀವ್ರವಾಗಿದೆ. ಅಲ್ಲೆಲ್ಲಾ ಅತಿಥಿ ಉಪನ್ಯಾಸಕರೇ ಆಸರೆಯಾಗಿದ್ದಾರೆ.

ಜಿಲ್ಲೆಯಲ್ಲಿ ಪಶುವೈದ್ಯಕೀಯ, ಎಂಜಿನಿಯರಿಂಗ್, ಆಯುರ್ವೇದ, ಪಾಲಿಟೆಕ್ನಿಕ್, ಐಟಿಐ ಹಾಗೂ ಪದವಿ ಕಾಲೇಜುಗಳು ಸ್ಥಾಪನೆಯಾಗಿವೆ. ಇವೆಲ್ಲವೂ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿದ್ದು ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿವೆ.

ಹಲವು ಪ್ರಥಮಗಳ ಜಿಮ್ಸ್‌

2014ರಲ್ಲಿ ಪ್ರಾರಂಭಗೊಂಡ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಇಂದು ಹಲವು ದಾಖಲೆಗಳನ್ನು ಬರೆದಿದೆ. ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಎಲ್ಲ ವಿಭಾಗಗಳ ಸ್ನಾತಕೋತ್ತರ ಪದವಿ ಕೋರ್ಸ್‌ ಆರಂಭಿಸಿದ ಕೀರ್ತಿ ಜಿಮ್ಸ್‌ಗೆ ಇದೆ. ಎಂಬಿಬಿಎಸ್‌, ಪ್ಯಾರಾ ಮೆಡಿಕಲ್‌, ನರ್ಸಿಂಗ್‌ ಸೇರಿದಂತೆ ಒಟ್ಟು 2000ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

‘ವೈದ್ಯರ ಪರಿಶ್ರಮ, ಶಾಸಕರು– ಸಚಿವರ ಸಹಕಾರದಿಂದಾಗಿ ಜಿಮ್ಸ್‌ ಇಂದು ಗದಗ ಜಿಲ್ಲೆಯಲ್ಲಿ ವೈದ್ಯಕೀಯ ಕ್ರಾಂತಿ ಮಾಡಿದೆ. ಸಿಟಿ ಸ್ಕ್ಯಾನ್‌, ಎಂಆರ್‌ಐ ಸ್ಕ್ಯಾನ್‌ಗಳನ್ನು ಉಚಿತವಾಗಿ ಮಾಡಲಾಗುತ್ತಿದೆ. ಜಿಲ್ಲೆ ಆದ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ 10 ಮಂದಿ ವೈದ್ಯರಿದ್ದರು. ಇಂದು 200 ಮಂದಿ ತಜ್ಞ ವೈದ್ಯರಿದ್ದಾರೆ. 1,000 ಹಾಸಿಗೆಗಳ ಬೃಹತ್‌ ಸೌಲಭ್ಯವಿದೆ. 120 ವೆಂಟಿಲೆಟರ್ಸ್‌ಗಳಿವೆ. ಕೋವಿಡ್‌–19 ಸಂದರ್ಭದಲ್ಲಿ ಹೊರ ಜಿಲ್ಲೆಯ ರೋಗಿಗಳಿಗೂ ಉತ್ತಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳಿಗೆ ಹೋಗಬೇಕಿದ್ದ ಪ್ರಮೇಯ ಈಗ ತಪ್ಪಿದೆ’ ಎನ್ನುತ್ತಾರೆ ಜಿಮ್ಸ್‌ ನಿರ್ದೇಶಕ ಡಾ. ಪಿ.ಎಸ್‌.ಬೂಸರೆಡ್ಡಿ.

ಗುಣಮಟ್ಟದ ಶಿಕ್ಷಣ, ಕಣ್ಣುಕುಕ್ಕುವ ವಾಸ್ತುಶಿಲ್ಪ

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯ ಗದುಗಿನ ಕೀರ್ತಿಯನ್ನು ರಾಷ್ಟ್ರ ಮಟ್ಟಕ್ಕೆ ಏರಿಸಿದೆ. ಶಾಸಕ ಎಚ್‌.ಕೆ.ಪಾಟೀಲ ಅವರ ಕನಸಿನ ಕೂಸಿದು. ಗಾಂಧಿ ಕನಸಿನ ಭಾರತಕ್ಕೆ ಪೂರಕವಾಗಿ ವಿವಿ ಕಾರ್ಯನಿರ್ವಹಿಸುತ್ತಿದ್ದು, ಸುಸ್ಥಿರ ಗ್ರಾಮೀಣಾಭಿವೃದ್ಧಿ ಹಾಗೂ ಗ್ರಾಮೀಣ ಜನತೆಯ ಜೀವನ ಗುಣಮಟ್ಟವನ್ನು ಸುಧಾರಿಸುವ ಗುರಿ ಹೊಂದಿದೆ.

ವಿಶೇಷ ವಿಶ್ವವಿದ್ಯಾಲಯವಾದರೂ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚುತ್ತಿರುವುದ ವಿಶೇಷ. ಸ್ಥಳೀಯರಿಗಿಂತಲೂ ಅನ್ಯ ರಾಜ್ಯಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ನಗರದ ಹೊರವಲಯದಲ್ಲಿ ಬೃಹತ್‌ ಕ್ಯಾಂಪಸ್‌ ಇದೆ. ವಿಶ್ವದರ್ಜೆಯ ಭೌತಿಕ ಸೌಲಭ್ಯಗಳಿವೆ. ಕಟ್ಟಡದ ವಿನ್ಯಾಸವಂತೂ ಕಣ್ಣುಕುಕ್ಕುತ್ತದೆ. ಗುಣಮಟ್ಟದ ಶಿಕ್ಷಣ, ಪ್ರಾಯೋಗಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ವಿವಿಯ ಜನಪ್ರಿಯತೆ ಹೆಚ್ಚಲು ಪ್ರಮುಖ ಕಾರಣವಾಗಿದೆ.

ಪ್ರಸ್ತುತ ಕುಲಪತಿ ಆಗಿರುವ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ ಅವರು ತಮ್ಮ ದೂರದೃಷ್ಟಿತ್ವದ ಮೂಲಕ ವಿವಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT