ತೋಳದ ಜೀವ ಉಳಿಸಿ ಮಾನವೀಯತೆ ಮೆರೆದ ಯುವಕರು..!

7
ರಸ್ತೆ ಅಪಘಾತದಲ್ಲಿ ಕಾಡು ಪ್ರಾಣಿಗೆ ತೀವ್ರ ಗಾಯ; ಬಿಂಕದಕಟ್ಟಿ ಮೃಗಾಲಯಲ್ಲಿ ಚಿಕಿತ್ಸೆ

ತೋಳದ ಜೀವ ಉಳಿಸಿ ಮಾನವೀಯತೆ ಮೆರೆದ ಯುವಕರು..!

Published:
Updated:
Deccan Herald

ಮುಂಡರಗಿ: ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೆರವಾಗುವ ಬದಲು ಅನೇಕರು ವಿಡಿಯೊ ತೆಗೆಯುವುದರಲ್ಲಿ, ಫೋಟೊ ಕ್ಲಿಕ್ಕಿಸುವುದರಲ್ಲಿ ನಿರತರಾಗಿರುತ್ತಾರೆ. ಇಂತಹ ಸುದ್ದಿಗಳನ್ನು ಆಗಾಗ್ಗ ಕೇಳುತ್ತಲೇ ಇರುತ್ತೇವೆ. ಆದರೆ, ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ನಡೆದ ಘಟನೆ ಇದಕ್ಕೆ ತದ್ವಿರುದ್ಧವಾಗಿದೆ.ಯುವಕರ ತಂಡವೊಂದು ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ತೋಳವೊಂದಕ್ಕೆ ಸಕಾಲದಲ್ಲಿ ಚಿಕಿತ್ಸೆಗೆ ನೆರವಾಗಿ ಅದರ ಜೀವ ಉಳಿಸಿ, ಮಾನವೀಯತೆ ಮೆರೆದಿದ್ದಾರೆ.

ಮುಂಡರಗಿ–ಶಿರಹಟ್ಟಿ ರಸ್ತೆಯ ಕಣವಿ ದುರುಗಮ್ಮನ ಗುಡಿಯ ಸಮೀಪ ಶುಕ್ರವಾರ ರಾತ್ರಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಎರಡು ವರ್ಷ ಪ್ರಾಯದ ತೋಳವೊಂದು ತೀವ್ರವಾಗಿ ಗಾಯಗೊಂಡಿತ್ತು. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ತೋಳದ ಬೆನ್ನುಮೂಳೆ ಮುರಿದಿತ್ತು. ಮುಂಗಾಲಿನ ಬೆರಳುಗಳು ತುಂಡಾಗಿದ್ದವು. ನಡೆಯಲು ಸಾಧ್ಯವಾಗದ ತೋಳ ರಸ್ತೆ ಬದಿಯಲ್ಲಿ ಬಿದ್ದು, ನರಳುತ್ತಿತ್ತು.

ರಾತ್ರಿ ಮುಂಡರಗಿಯಿಂದ ಡೋಣಿ ತಾಂಡಾಕ್ಕೆ ಹೋಗುತ್ತಿದ್ದ ಮುರುಡಿ ತಾಂಡಾದ ರಾಜು ಡಾವಣಗೇರಿ ಮತ್ತು ಕೆಲವು ಯುವಕರು ಗಾಯಗೊಂಡಿದ್ದ ಈ ತೋಳವನ್ನು ಗಮನಿಸಿ ತಕ್ಷಣ ಅದರ ನೆರವಿಗೆ ಬಂದರು. ಅರಣ್ಯ ಇಲಾಖೆಗೆ ಸಿಬ್ಬಂದಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.

ಯುವಕರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿ ಆರ್.ಜೆ.ಲಮಾಣಿ ಸ್ಥಳಕ್ಕೆ ಬಂದು, ಗಾಯಗೊಂಡಿದ್ದ ತೋಳವನ್ನು ವಾಹನದಲ್ಲಿ ಮುಂಡರಗಿ ಪಶು ಚಿಕಿತ್ಸಾಲಯಕ್ಕೆ ತೆಗೆದುಕೊಂಡು ಹೋದರು. ಅಲ್ಲಿ ವೈದ್ಯಾಧಿಕಾರಿ ಡಾ.ಪಿ.ಬಿ.ಮುದ್ನಾಳ ಅವರು ತೋಳಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗದುಗಿನ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಕಳಹಿಸಿದರು.

ತೋಳಕ್ಕೆ ಸಕಾಲದಲ್ಲಿ ಚಿಕಿತ್ಸೆಗೆ ನೆರವಾದ ಮುರುಡಿ ತಾಂಡಾದ ಉಮೇಶ ಚನ್ನಪ್ಪ ಲಮಾಣಿ. ಲಾಲು ಠಾಕ್ರೆ ಪೂಜಾರ, ಉಮೇಶ ಪಾಂಡಪ್ಪ ಪೂಜಾರ, ಆನಂದ ಪವಾರ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಯುವಕರ ಮಾನವೀಯತೆ ಒಂದು ಪ್ರಾಣಿಯ ಆಯಸ್ಸನ್ನು ಹೆಚ್ಚಿಸಿದೆ. ಗಂಭೀರ ಗಾಯಗಳೊಂದಿಗೆ ನರಳುತ್ತಿರುವ ತೋಳದ ಜೀವ ಉಳಿಸಲು ಮೃಗಾಲಯದ ವೈದ್ಯರು ಶ್ರಮಿಸುತ್ತಿದ್ದಾರೆ
- ಮಹಾಂತೇಶ ಪೆಟ್ಲೂರ, ಆರ್‌ಎಫ್‌ಒ, ಬಿಂಕದಕಟ್ಟಿ ಮೃಗಾಲಯ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !