ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ನಿರೀಕ್ಷೆಯಂತೆ ಎಚ್‌ಕೆಪಿ, ಜಿಎಸ್‌ಪಿಗೆ ಟಿಕೆಟ್‌

ಗದಗ, ರೋಣ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಗಳ ಪ್ರಕಟ
Last Updated 26 ಮಾರ್ಚ್ 2023, 7:56 IST
ಅಕ್ಷರ ಗಾತ್ರ

ಗದಗ: ನಿರೀಕ್ಷೆಯಂತೆ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ ಹೈಕಮಾಂಡ್‌ ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಇನ್ನುಳಿದ ಎರಡು ಕ್ಷೇತ್ರಗಳಿಗೆ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದರಿಂದ ಹಾಗೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲ ಇರುವುದರಿಂದ ಅವುಗಳನ್ನು ಬಾಕಿ ಉಳಿಸಿದೆ.

ಗದಗ ವಿಧಾನಸಭಾ ಕ್ಷೇತ್ರದಿಂದ ಶಾಸಕ ಎಚ್‌.ಕೆ.ಪಾಟೀಲ ಹಾಗೂ ರೋಣ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ಜಿ.ಎಸ್‌.ಪಾಟೀಲ ಅವರ ಹೆಸರು ಘೋಷಣೆಯಾಗಿದೆ. ಉಳಿದಂತೆ, ಶಿರಹಟ್ಟಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಬರೋಬ್ಬರಿ 14 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅದೇರೀತಿ, ನರಗುಂದ ಮತಕ್ಷೇತ್ರದಲ್ಲೂ ಕಾಂಗ್ರೆಸ್‌ನಿಂದ ಸ್ಪರ್ಧೆ ಬಯಸಿ ಐದು ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.

ಶಿರಹಟ್ಟಿ ಮತ್ತು ನರಗುಂದ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದರಿಂದ ಮೊದಲ ಪಟ್ಟಿಯಲ್ಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿದರೆ ಅಸಮಾಧಾನ ಭುಗಿಲೇಳಬಹುದು ಎಂಬ ಕಾರಣಕ್ಕೆ ಈ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಎರಡನೇ ಪಟ್ಟಿಯಲ್ಲಿ ಪ್ರಕಟಿಸುವ ತಂತ್ರವನ್ನು ಹೈಕಮಾಂಡ್‌ ಅನುಸರಿಸಿದೆ.

‘ಕಾಂಗ್ರೆಸ್‌ನ ಮೊದಲ ಪಟ್ಟಿ ಬಿಡುಗಡೆಯಾಗಿದ್ದು ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ ದಾಪುಗಾಲು ಇಟ್ಟಿದೆ’ ಎಂದು ಶಾಸಕ ಎಚ್‌.ಕೆ.ಪಾಟೀಲ ಶನಿವಾರ ಪ್ರತಿಕ್ರಿಯಿಸಿದ್ದಾರೆ.

‘ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದೆ. ಎರಡನೇ ಪಟ್ಟಿ ಬಿಡುಗಡೆ ವಿಷಯವಾಗಿ ಮಾರ್ಚ್‌ 26, 27ರಂದು ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಉಳಿದ 100 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಿ ಚುನಾವಣೆ ಘೋಷಣೆಗೂ ಮುಂಚೆ ಅಥವಾ ಒಂದು ದಿನ ನಂತರ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ. ಶಿರಹಟ್ಟಿ, ನರಗುಂದ ವಿಧಾನಸಭಾ ಕ್ಷೇತ್ರಗಳ ಟಿಕೆಟ್ ವಿಷಯ ಕೂಡ ಸಿಇಸಿ ಸಭೆಯಲ್ಲಿ ನಿರ್ಧರಿಸಲಾಗುತ್ತದೆ’ ಎಂದು ಹೇಳಿದರು.

‘ಗದಗ ಮತಕ್ಷೇತ್ರದಿಂದ ಹೈಕಮಾಂಡ್ ನನ್ನ ಹೆಸರು ಘೋಷಿಸಿದೆ. ಬಿಜೆಪಿ ನನ್ನ ವಿರುದ್ಧದ ಪಾರ್ಟಿ. ಅವರು ನನ್ನ ವಿರುದ್ಧ ಯಾರನ್ನು ಕಣಕ್ಕೆ ಇಳಿಸುತ್ತಾರೆ ಎಂಬ ಬಗ್ಗೆ ಯೋಚಿಸುವುದಿಲ್ಲ. ಕಾರ್ಯಕರ್ತರು ನನ್ನ ಬೆಂಬಲಕ್ಕಾಗಿ ದುಡಿಯುತ್ತಿದ್ದಾರೆ. ಪಕ್ಷದ ಕಾರ್ಯಕರ್ತನಾಗಿ ಚುನಾವಣೆ ಕಣದಲ್ಲಿ ಗೆಲುವಿಗಾಗಿ ಹೋರಾಟ ಮಾಡುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೊಡ್ಡಮನಿ ವರ್ಸಸ್‌ ದೊಡ್ಡಮನಿ ಫೈಟ್‌

ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ 14 ಮಂದಿ ಆಕಾಂಕ್ಷಿಗಳಿದ್ದು, ಅವರಲ್ಲಿ ಮೂವರು ಮಾತ್ರ ಕ್ಷೇತ್ರದಾದ್ಯಂತ ಸಂಚಾರ ನಡೆಸುತ್ತಿದ್ದಾರೆ. ಉಳಿದವರು ಅರ್ಜಿ ಸಲ್ಲಿಸಿ ಸುಮ್ಮನಿದ್ದಾರೆ.

ಶಿರಹಟ್ಟಿ ಮೀಸಲು ಕ್ಷೇತ್ರದ ಪ್ರಬಲ ಆಕಾಂಕ್ಷಿಗಳಾದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಇಬ್ಬರೂ ರಾಜ್ಯ ನಾಯಕರ ಜತೆಗೆ ಉತ್ತಮ ಸಂಪರ್ಕ ಹೊಂದಿದ್ದು, ಟಿಕೆಟ್‌ಗಾಗಿ ಇವರಿಬ್ಬರ ನಡುವೆ ಪೈಪೋಟಿ ನಡೆದಿದೆ.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಕ್ಷೇತ್ರದ ಜನರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಶಾಸಕರಾಗಿದ್ದ ಸಂದರ್ಭದಲ್ಲಿ ಅತಿಹೆಚ್ಚು ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ ಹಿರಿಮೆಯೂ ಇವರಿಗೆ ಇದೆ. ಆರಂಭದಿಂದಲೂ ಕ್ಷೇತ್ರದಾದ್ಯಂತ ಓಡಾಡುತ್ತಿದ್ದು, ಟಿಕೆಟ್‌ ಸಿಗುವ ಭರವಸೆಯನ್ನೂ ಹೊಂದಿದ್ದಾರೆ.

ಸುಜಾತಾ ದೊಡ್ಡಮನಿ ಈ ಬಾರಿ ಟಿಕೆಟ್‌ ಪಡೆದೇ ತೀರಬೇಕು ಎಂಬ ಹಟಕ್ಕೆ ಬಿದ್ದಿದ್ದಾರೆ. ರಾಜ್ಯ ನಾಯಕರೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಸುಜಾತಾ ದೊಡ್ಡಮನಿ ಅವರಿಗೆ ಕ್ಷೇತ್ರದಲ್ಲಿ ಜನಸಂಪರ್ಕ ತುಂಬ ಕಡಿಮೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸುಜಾತಾ ದೊಡ್ಡಮನಿ ಅವರಿಗೆ ಟಿಕೆಟ್‌ ಸಿಕ್ಕರೂ ಇನ್ನುಳಿದ ಆಕಾಂಕ್ಷಿಗಳ ಅಸಮಾಧಾನದ ಕಿಡಿಯನ್ನು ಪಕ್ಷ ಎದುರಿಸಬೇಕಾಗುತ್ತದೆ. ಇದು ಬಿಜೆಪಿಗೆ ಲಾಭ ಮಾಡಿಕೊಟ್ಟಂತೆ ಎಂದು ವಿಶ್ಲೇಷಿಸಲಾಗಿದೆ.

ಆದರೆ, ಮಾದಿಗ ಸಮಾಜದ ಮುಖಂಡರು ಸುಜಾತಾ ದೊಡ್ಡಮನಿ ಅವರಿಗೆ ಟಿಕೆಟ್‌ ನೀಡದಿದ್ದರೆ ಚಿತ್ರಣ ಬದಲಾಗಲಿದೆ ಎಂದು ರಾಜ್ಯ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಭರತ್‌ ನಾಯಕ್‌ ಕೂಡ ಟಿಕೆಟ್‌ ಆಕಾಂಕ್ಷಿಯಾಗಿದ್ದು ಲಕ್ಷ್ಮೇಶ್ವರ, ಸೂರಣಗಿ ಭಾಗದಲ್ಲಿ ಹೆಚ್ಚು ಉತ್ಸಾಹದಿಂದ ಓಡಾಡುತ್ತಿದ್ದಾರೆ.

ಸಿದ್ದು, ಡಿಕೆಶಿ ಆಪ್ತರಲ್ಲಿ ಯಾರಿಗೆ ಟಿಕೆಟ್‌?

ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಬಿ.ಆರ್‌.ಯಾವಗಲ್‌, ಡಾ, ಸಂಗಮೇಶ್‌ ಕೊಳ್ಳಿ, ಪ್ರಕಾಶ್‌ ಕರಿ, ದಶರಥ ಗಾಣಿಗೇರ, ಸಿದ್ದು ಪಾಟೀಲ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಬಿ.ಆರ್‌.ಯಾವಗಲ್‌ ಹಾಗೂ ಡಾ. ಸಂಗಮೇಶ ಕೊಳ್ಳಿ ಕ್ಷೇತ್ರದಾದ್ಯಂತ ಸಂಚಾರ ನಡೆಸಿ, ಜನಬೆಂಬಲ ಗಳಿಸಿದ್ದಾರೆ. ಪ್ರಕಾಶ್‌ ಕರಿ ಅವರು ಕೂಡ ಆಗೊಮ್ಮೆ ಈಗೊಮ್ಮೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಶರಥ ಗಾಣಿಗೇರ ಮತ್ತು ಸಿದ್ದು ಪಾಟೀಲ ಅವರ ಓಡಾಟ ಕ್ಷೇತ್ರದಲ್ಲಿ ತುಂಬಾ ಕಡಿಮೆ.

ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಪ್ರಬಲ ಆಕಾಂಕ್ಷಿಗಳು ಇರುವುದರಿಂದ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿ ಹೆಸರು ಪ್ರಕಟವಾಗಿಲ್ಲ. ಮಾಜಿ ಸಚಿವ ಬಿ.ಆರ್‌.ಯಾವಗಲ್‌ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಯಾಯಿ. ಡಾ. ಪ್ರಕಾಶ್‌ ಕೊಳ್ಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಹೆಚ್ಚು ಗುರುತಿಸಿಕೊಂಡಿದ್ದಾರೆ. ಪ್ರಕಾಶ್‌ ಕರಿ ಕುರುಬ ಸಮುದಾಯಕ್ಕೆ ಸೇರಿದ್ದರೂ ಸಿದ್ದರಾಮಯ್ಯ ಅವರಿಗೆ ಯಾವಗಲ್‌ ಅವರ ಮೇಲೆ ಒಲವು ಜಾಸ್ತಿ ಎನ್ನಲಾಗಿದೆ.

ನರಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬಿ.ಆರ್.ಯಾವಗಲ್‌ ಅಥವಾ ಡಾ. ಪ್ರಕಾಶ್‌ ಕೊಳ್ಳಿ ಅವರಿಗೆ ಟಿಕೆಟ್‌ ಸಿಗುವುದು ಗ್ಯಾರಂಟಿ. ಬದಲಾದ ಸನ್ನಿವೇಶದಲ್ಲಿ ಪ್ರಕಾಶ್‌ ಕರಿಗೆ ಟಿಕೆಟ್‌ ಸಿಕ್ಕರೂ ಅಚ್ಚರಿ ಪಡುವಂತಿಲ್ಲ ಎಂಬುದು ಕಾಂಗ್ರೆಸ್‌ ಕಾರ್ಯಕರ್ತರ ಮಾತು.

ಸರ್ವಾನುಮತದಿಂದ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿದೆ. ಪಟ್ಟಿ ಕುರಿತು ಒಬ್ಬರಿಂದಲೂ ಅಪಸ್ವರ ಎದ್ದಿಲ್ಲ. ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಚ್‌.ಕೆ.ಪಾಟೀಲ, ಶಾಸಕ

ಪಕ್ಷದ ಕಾರ್ಯಕರ್ತರು, ನಾಯಕರ ಅಭಿಮಾನದಿಂದ ಕಾಂಗ್ರೆಸ್ ಹೈಕಮಾಂಡ್‌ ನನ್ನನ್ನು ರೋಣ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿದೆ. ಕ್ಷೇತ್ರದ ಮತದಾರರು ಚುನಾವಣೆಯಲ್ಲಿ ನನ್ನನ್ನು ಆಶೀರ್ವದಿಸಬೇಕು ಜಿ.ಎಸ್‌.ಪಾಟೀಲ, ರೋಣ ಕ್ಷೇತ್ರದ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT