ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ: ಅರಣ್ಯ ಕೃಷಿಯಲ್ಲಿ ಖುಷಿ ಕಂಡ ರೈತ

ಕೃಷಿಗೂ ಸೈ, ಬಸ್ ಚಾಲನೆಗೂ ಸೈ ಎನ್ನುವ ಕೃಷಿಕ ಶೇಖಪ್ಪ
Published 4 ಆಗಸ್ಟ್ 2023, 6:23 IST
Last Updated 4 ಆಗಸ್ಟ್ 2023, 6:23 IST
ಅಕ್ಷರ ಗಾತ್ರ

ಮುಂಡರಗಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ಥಳೀಯ ಘಟಕದಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿರುವ ತಾಲ್ಲೂಕಿನ ಜಾಲವಾಡಗಿ ಗ್ರಾಮದ ಶೇಖಪ್ಪ ಲಿಂಗಶೆಟ್ಟರ ಅವರು ತಮ್ಮ ವೃತ್ತಿಯ ಜೊತೆಗೆ ಬಿಡುವಿನ ಸಮಯದಲ್ಲಿ ತಮ್ಮ ಸ್ವಂತ ಮಾಲೀಕತ್ವದ 4 ಎಕರೆ ಜಮೀನಿನಲ್ಲಿ ಕೃಷಿ ಕಾಯಕ ಮಾಡುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಕೃಷಿಯಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎನ್ನುವ ಛಲದೊಂದಿಗೆ ತಮ್ಮ ತೋಟದಲ್ಲಿ ಅರಣ್ಯ ಕೃಷಿಯೊಂದಿಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಆ ಮೂಲಕ ನಿರಂತರ ಆದಾಯ ಪಡೆದುಕೊಳ್ಳುತ್ತಿದ್ದಾರೆ.

ಶೇಖಪ್ಪ ಅವರು ಕಳೆದ 17 ವರ್ಷಗಳಿಂದ ಬಸ್ ಚಾಲಕ ಹುದ್ದೆಯ ಜೊತೆಗೆ ಕೃಷಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಿಡುವಿನ ಸಮಯದಲ್ಲಿ ನಿರಂತರವಾಗಿ ಜಮೀನಿನಲ್ಲಿ ಇದ್ದುಕೊಂಡು ಮಾದರಿ ಬೇಸಾಯ ಪದ್ಧತಿ ಮಾಡುತ್ತಿದ್ದಾರೆ. ಶೇಖಪ್ಪ ಅವರ ಕೃಷಿ ಕೆಲಸಕ್ಕೆ ಅವರ ಇಡೀ ಕುಟುಂಬದವರು ಕೈಜೋಡಿಸಿದ್ದಾರೆ.


ಪರಿಸರ ಕುರಿತು ಅಪಾರ ಕಾಳಜಿ ಹೊಂದಿರುವ ಶೇಖಪ್ಪ ಅವರು ಅರಣ್ಯವನ್ನು ಉಳಿಸಿ ಬೆಳೆಸುವ ಗುರಿಯನ್ನು ಹೊಂದಿದ್ದಾರೆ. ಈ ಕಾರಣದಿಂದಾಗಿ ನಿರಂತರವಾಗಿ ಉತ್ತಮ ಆದಾಯ ಪಡೆದುಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಕೃಷಿ ಆರಂಭಿಸಿದ್ದಾರೆ. ಜಮೀನಿನಲ್ಲಿ 1,200 ಹೆಬ್ಬೇವು, 400 ಶ್ರೀಗಂಧ, 200 ರಕ್ತಚಂದನ, 50 ಗೊಡಂಬಿ ಗಿಡಗಳನ್ನು ಬೆಳೆದಿದ್ದಾರೆ.

ಹೆಬ್ಬೇವು ಗಿಡಗಳು 7 ವರ್ಷದಾಗಿದ್ದು, ಕಟಾವಿಗೆ ಬಂದಿವೆ. ಪ್ರತಿಟನ್ ಹೆಬ್ಬೇವಿಗೆ ಸಧ್ಯ ಮಾರುಕಟ್ಟೆಯಲ್ಲಿ ₹7,500 ಬೆಲೆ ಇದೆ. ಅವರ ಜಮೀನಿನಲ್ಲಿ ಸುಮಾರು 100 ಟನ್ ಹೆಬ್ಬೇವು ದೊರೆಯುವ ಸಾಧ್ಯತೆ ಇದ್ದು, ಅದರಿಂದ ಅಂದಾಜು ₹7.50 ಲಕ್ಷ ನಿರೀಕ್ಷೆ ಹೋಂದಿದ್ದಾರೆ.

ಶ್ರೀಗಂಧ, ಗೊಡಂಬಿ ಮತ್ತು ರಕ್ತಚಂದನ ಗಿಡಗಳು 5 ವರ್ಷಕ್ಕೆ ಫಲ ನೀಡುವ ಬೆಳೆಯಾಗಿವೆ. ತೋಟದಲ್ಲಿ ವರ್ಷಕೊಮ್ಮೆ ಬೆಳೆ ಬದಲಾವಣೆ ಮಾಡಿಕೊಳ್ಳುತ್ತಿದ್ದು, ಪಪ್ಪಾಯಿ, ದಾಳಿಂಬೆ, ಬಾಳೆ, ಹೂವು ಹೀಗೆ ನಿರಂತರ ಆದಾಯ ನೀಡುವ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಒಂದು ಬೆಳೆಯಾದ ನಂತರ ಮತ್ತೊಂದು ಬೆಳೆ ಬದಲಾವಣೆ ಮಾಡುವುದರಿಂದ ಉತ್ತಮ ಬೆಳೆ ಹಾಗೂ ಉತ್ತಮ ಆದಾಯ ಪಡೆದುಕೊಳ್ಳುತ್ತಿದ್ದಾರೆ.

ಶ್ರೀಗಂಧ, ರಕ್ತಚಂದನ ಗಿಡಗಳ ಮಧ್ಯದ ಜಾಗದಲ್ಲಿ ಸದ್ಯ 1 ಸಾವಿರ ಏಲಕ್ಕಿ ಬಾಳೆ ಗಿಡಗಳನ್ನು ಬೆಳೆದಿದ್ದು, ಕೆಜಿಗೆ ₹25 ರಂತೆ ₹80 ಸಾವಿರದಿಂದ ರಿಂದ ₹1 ಲಕ್ಷ ಬಾಳೆ ಮಾರಾಟ ಮಾಡಿದ್ದಾರೆ. ಗಿಡಗಳಲ್ಲಿ ಇನ್ನೂ ಗೊನೆ ಇದ್ದು 10 ಕ್ವಿಂಟಾಲ್ ಬಾಳೆ ಬರುವ ನಿರೀಕ್ಷೆಯಿದೆ. ಬಾಳೆಗಿಡ ಹಚ್ಚುವುದು, ಕೂಲಿ ಸೇರಿ ₹25– 30 ಸಾವಿರ ಖರ್ಚು ಮಾಡಿದ್ದಾರೆ.

ತೋಟದಲ್ಲಿ ಒಂದು ಇಂಚು ನೀರಿನ 2 ಕೊಳವೆ ಬಾವಿಗಳಿದ್ದು, ತೋಟಗಾರಿಕೆ ಇಲಾಖೆ ಸಹಾಯಧನ ಪಡೆದು ಹನಿ ನೀರಾವರಿ ಪದ್ಧತಿ ಅಳವಡಿಸಿ ಬೆಳೆಗೆ ನೀರು ಪೂರೈಕೆ ಮಾಡುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಎರೆಹುಳು ಗೊಬ್ಬರ ತೊಟ್ಟಿ ನಿರ್ಮಿಸಿಕೊಂಡು. ತೋಟದಲ್ಲಿನ ತ್ಯಾಜ್ಯ ವಸ್ತುಗಳನ್ನು ಬಳಸಿ ಗೊಬ್ಬರ ತಯಾರಿಸುತ್ತಾರೆ. ಶೇಖಪ್ಪ ಅವರ ಸಮಗ್ರ ಕೃಷಿ ಬೇಸಾಯ ಪದ್ಧತಿ ಗುರುತಿಸಿ ಕೃಷಿ ಇಲಾಖೆಯು ಅವರಿಗೆ 2019-20ನೇ ಸಾಲಿನಲ್ಲಿ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT