ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ಜನರು ಜಾನುವಾರು ಅಲ್ಲ: ಎಚ್‌ಕೆ‌ ಪಾಟೀಲ ಕಿಡಿ

ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಾಸಿಗೆ ಸೌಲಭ್ಯ ಕಲ್ಪಿಸಲು ಸರ್ಕಾರ ಗಂಭೀರ ಪ್ರಯತ್ನ ಮಾಡುತ್ತಿಲ್ಲ
Last Updated 28 ಜೂನ್ 2020, 16:59 IST
ಅಕ್ಷರ ಗಾತ್ರ

ಗದಗ: ‘ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರ ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡದೆ, ಕ್ರೀಡಾಂಗಣ, ಬಯಲು ಪ್ರದೇಶ ಹುಡುಕುತ್ತಿದೆ. ಜನರು ಜಾನುವಾರು ಅಲ್ಲ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು’ ಎಂದು ಶಾಸಕ ಎಚ್‌.ಕೆ ಪಾಟೀಲ ಕಿಡಿಕಾರಿದರು.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸರ್ಕಾರಿ ಆಸ್ಪತ್ರೆಗಳು ಭರ್ತಿಯಾಗುತ್ತಿವೆ. ಆದರೂ, ಸೋಂಕಿತರ ಚಿಕಿತ್ಸೆಗೆ ಹೆಚ್ಚುವರಿಯಾಗಿ ಹಾಸಿಗೆ ಸೌಲಭ್ಯ ಕಲ್ಪಿಸುವ ಬಗ್ಗೆ ಸರ್ಕಾರ ಗಂಭೀರ ಪ್ರಯತ್ನ ಮಾಡುತ್ತಿಲ್ಲ’ ಎಂದು ದೂರಿದರು.

‘ಸೋಂಕು ಹೆಚ್ಚಾಗುತ್ತಿರುವ ನಗರಗಳಲ್ಲಿ ಐಷಾರಾಮಿ ಹೋಟೆಲ್‌ಗಳನ್ನು ವಶಕ್ಕೆ ಪಡೆದು, ಅವುಗಳನ್ನು ಕೋವಿಡ್ ಕಾಳಜಿ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು, ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುವಂತಾಗಲು ಸಿಬ್ಬಂದಿ ಕೊರತೆ ನೀಗಿಸಲು ಕೋವಿಡ್-19 ವಿಶೇಷ ನೇಮಕಾತಿ ನಡೆಸಬೇಕು’ ಎಂದು ಆಗ್ರಹಿಸಿದರು.

‘ಬೆಂಗಳೂರಿನಲ್ಲಿ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಜಾಗ ಹುಡುಕುತ್ತಿರುವುದಾಗಿ ಸರ್ಕಾರದ ವಕ್ತಾರರು ನೀಡಿದ ಹೇಳಿಕೆ ನಾಚಿಕೆಗೇಡಿತನದ್ದು’ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಅಮೆರಿಕ, ಇಟಲಿಯಲ್ಲಿ ಇದೇ ರೀತಿ ನಿರ್ಲಕ್ಷ್ಯ ಮಾಡಿದ್ದರಿಂದ ಅಲ್ಲಿನ ಜನರು ಎದುರಿಸಿದ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಬೇಕು. ಕರ್ನಾಟಕವನ್ನು ನ್ಯೂಯಾರ್ಕ್, ಇಟಲಿ ಮಾಡಲು ಬಿಡಬಾರದು’ ಎಂದರು.

‘ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಸರ್ಕಾರ ನಿಗದಿಪಡಿಸಿದ ದರ ಕುರಿತು ಸಂಘರ್ಷ ಮಾಡುವ ಬದಲು ಖಾಸಗಿ ವೈದ್ಯರ ಜತೆ ಹೊಂದಾಣಿಕೆಗೆ ಮಾತುಕತೆ ನಡೆಸಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಿಪಿಇ ಕಿಟ್‌ ಗುಣಮಟ್ಟ ಪರಿಶೀಲನೆಯಾಗಲಿ: ಕೋವಿಡ್-19 ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಸೋಂಕು ಬಂದಿದ್ದು ಹೇಗೆ, ಅವರು ಬಳಸುವ ಪಿಪಿಇ ಕಿಟ್ ಕಳಪೆ ಮಟ್ಟದ್ದಾ ಎನ್ನುವುದು ಪರಿಶೀಲನೆ ಆಗಲಿ, ಗುಣಮಟ್ಟದ ಸುರಕ್ಷಾ ಕಿಟ್ ಕೊರತೆಯಿಂದ ವೈದ್ಯಕೀಯ ಸಿಬ್ಬಂದಿ ಭಯಭೀತರಾಗಿದ್ದಾರೆ. ಕೂಡಲೇ ಪಿಪಿಇ ಸೇರಿ ಅಗತ್ಯ ಸುರಕ್ಷಾ ಕಿಟ್ ನೀಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT