ಗದಗ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ

7
ರ್‍ಯಾಗಿಂಗ್‌ ಅಲ್ಲಗಳೆದ ಜಿಮ್ಸ್‌ ನಿರ್ದೇಶಕ; ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಗದಗ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ

Published:
Updated:
Deccan Herald

ಗದಗ: ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಮ್ಸ್‌) ಆವರಣದಲ್ಲಿರುವ ಎಂಬಿಬಿಎಸ್‌ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಶನಿವಾರ ರಾತ್ರಿ, ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳಿಬ್ಬರ ನಡುವೆ ವಾಗ್ವಾದ ನಡೆದು, ನಂತರ ನಡೆದ ಹೊಡೆದಾಟದಲ್ಲಿ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಎಂಬಿಬಿಎಸ್‌ ಮೂರನೆಯ ವರ್ಷದ  ಅನೂಪ್‌ ಕೆ.ಎಂ ಮತ್ತು ಎರಡನೆಯ ವರ್ಷದ ರೂತೇಶ್‌ ಎಂ.ಪವಾರ ಎಂಬ ವಿದ್ಯಾರ್ಥಿಗಳಿಬ್ಬರ ನಡುವೆ ಜಗಳ ನಡೆದಿದೆ. ನಂತರ ರೂತೇಶ್‌, ತಂದೆ ಹಾಗೂ ಸ್ನೇಹಿತರನ್ನು ಕರೆದುಕೊಂಡು, ವಸತಿ ನಿಲಯಕ್ಕೆ ನುಗ್ಗಿ, ಅನೂಪ್ ಮತ್ತು ಆತನ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾನೆ.

ಘಟನೆಯಲ್ಲಿ ಅನೂಪ್‌, ಮಹಮದ್‌ ತಲೀಲ್‌, ಸ್ಕಂದ ಎನ್‌.ವಿ, ಉಲ್ಲಾಸ್‌ ಜಿ.ಇ ಎಂಬ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ರೂತೇಶ್‌, ಮೋಹನ್‌ ಪವಾರ, ರವಿ ಸೋಮಪ್ಪ, ಲಾಲ ವಿ. ಮಾಳಿಗಿಮನಿ ಎಂಬುವರ ವಿರುದ್ಧ ಗದಗ ಗ್ರಾಮೀಣ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಶನಿವಾರ ರಾತ್ರಿ 8:30ರ ಸುಮಾರಿಗೆ ವೈದ್ಯಕೀಯ ಕಾಲೇಜು ಆವರಣದಲ್ಲಿರುವ ಗ್ರಂಥಾಲಯದಿಂದ ವಸತಿ ನಿಲಯಕ್ಕೆ ಹೊರಟಿದ್ದ ಅನೂಪ್‌ ಮತ್ತು ಸ್ನೇಹಿತರು ಗ್ರಂಥಾಲಯದ ಹೊರಗಡೆ ಕುಳಿತಿದ್ದ ಕಿರಿಯ ವಿದ್ಯಾರ್ಥಿ ರೂತೇಶ್‌ಗೆ ಇಲ್ಲಿ ಯಾಕೆ ಕುಳಿತಿದ್ದೀಯಾ ಎಂದು ಪ್ರಶ್ನಿಸಿ ನಕ್ಕಿದ್ದಾರೆ. ಹಿರಿಯ ವಿದ್ಯಾರ್ಥಿಗಳು ತನ್ನನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಆಕ್ರೋಶಗೊಂಡ ರೂತೇಶ್‌, ನಂತರ ತನ್ನ ಸ್ವಗ್ರಾಮ ತಾಲ್ಲೂಕಿನ ನಾಗಾವಿ ತಾಂಡಾದಿಂದ ತಂದೆ, ಸ್ನೇಹಿತರನ್ನು ಕರೆಯಿಸಿಕೊಂಡು, ಹಿರಿಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾನೆ.

‘ಇದು ರ್‍ಯಾಗಿಂಗ್‌ ಅಲ್ಲ. ರೂತೇಶ್‌ ಖಿನ್ನತೆಯಿಂದ ಬಳಲುತ್ತಿದ್ದ.ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದ.ಹಿರಿಯ ವಿದ್ಯಾರ್ಥಿಗಳು ಆತನನ್ನು ನೋಡಿ ನಕ್ಕಿದ್ದಕ್ಕೆ ಆಕ್ರೋಶಗೊಂಡು ಈ ರೀತಿ ವರ್ತಿಸಿದ್ದಾನೆ. ಆದರೆ, ಆತ ಕಾಲೇಜಿನ ಮುಖ್ಯಸ್ಥರ ಗಮನಕ್ಕೆ ಈ ವಿಷಯ ತರದೆ, ತಂದೆ, ಸ್ನೇಹಿತರೊಂದಿಗೆ ವಸತಿ ನಿಲಯಕ್ಕೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದು ತಪ್ಪು. ಈ ಕುರಿತು ಪೊಲೀಸ್‌ ಪ್ರಕರಣ ದಾಖಲಾಗಿದೆ. ಆಂತರಿಕ ವಿಚಾರಣೆ ನಡೆಸಲು ಕಾಲೇಜಿನಲ್ಲಿ ಸಮಿತಿಯನ್ನೂ ರಚಿಸಿದ್ದೇವೆ’ ಎಂದು ‘ಜಿಮ್ಸ್‌’ ನಿರ್ದೇಶಕ ಪಿ.ಎಸ್‌.ಬೂಸರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !