ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ ಬೆಟಗೇರಿ ನಗರಸಭೆ ಬಿಜೆಪಿ ಕೈ ವಶ

ಉಷಾ ದಾಸರ ಅಧ್ಯಕ್ಷೆ, ಸುನಂದಾ ಬಾಕಳೆ ಉಪಾಧ್ಯಕ್ಷೆಯಾಗಿ ಆಯ್ಕೆ, ಕಾರ್ಯಕರ್ತರಿಂದ ಸಂಭ್ರಮಾಚರಣೆ
Last Updated 25 ಜನವರಿ 2022, 5:13 IST
ಅಕ್ಷರ ಗಾತ್ರ

ಗದಗ: ನಿರೀಕ್ಷೆಯಂತೆ ಗದಗ ಬೆಟಗೇರಿ ನಗರಸಭೆಯ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಉಷಾ ದಾಸರ ಹಾಗೂ ಸುನಂದಾ ಬಾಕಳೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದರು. ಇದರಿಂದಾಗಿ ಕಮಲ ಪಾಳೆಯದಲ್ಲಿ ದಶಕದ ಬಳಿಕ ಗದ್ದುಗೆ ಏರಿದ ಸಂಭ್ರಮ ಮನೆಮಾಡಿತ್ತು.

ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸೋಮವಾರ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಡಿ.30ರಂದು ಪ್ರಕಟಗೊಂಡ ಫಲಿತಾಂಶದಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಜಯಗಳಿಸಿ, ಸರಳ ಬಹುಮತ ಪಡೆದುಕೊಂಡಿತ್ತು. ಮೀಸಲಾತಿ ಅನುಸಾರ ಬಿಜೆಪಿಯಲ್ಲಿ ಉಷಾ ದಾಸರ ಅವರೊಬ್ಬರೇ ಇದ್ದುದರಿಂದ ಅಧ್ಯಕ್ಷರಾಗಿ ಅವರ ಆಯ್ಕೆ ಖಚಿತವಾಗಿತ್ತು. ಆದರೆ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಭಾರಿ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿ ಮುಖಂಡರು ಸಾಕಷ್ಟು ಕಸರತ್ತು ನಡೆಸಿ ಸುನಂದಾ ಬಾಕಳೆ ಅವರ ಹೆಸರನ್ನು ಅಂತಿಮಗೊಳಿಸಿ ನಾಮಪತ್ರ ಸಲ್ಲಿಸಿದ್ದರು.

ಇತ್ತ, ಇಬ್ಬರು ಪಕ್ಷೇತರರ ಬೆಂಬಲ ಪಡೆದು 17 ಸ್ಥಾನಕ್ಕೆ ತನ್ನ ಬಲ ಹೆಚ್ಚಿಸಿಕೊಂಡಿದ್ದ ಕಾಂಗ್ರೆಸ್‌ ಕೂಡ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿತ್ತು. ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ ಚಂದಾವರಿ, ಉಪಾಧ್ಯಕ್ಷ ಸ್ಥಾನಕ್ಕೆ ಶಕುಂತಲಾ ಅಕ್ಕಿ ನಾಮಪತ್ರ ಸಲ್ಲಿಸಿದ್ದರು. ಸೋಮವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ನಾಮಪತ್ರ ಸಲ್ಲಿಸಲು ಸಮಯ ನಿಗದಿಗೊಳಿಸಲಾಗಿತ್ತು.

ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ರಾಯಪ್ಪ ಹುಣಸಗಿ ಅವರು ಮಧ್ಯಾಹ್ನ 2.30ಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿದರು.ಅಧ್ಯಕ್ಷರ ಚುನಾವಣೆಯಲ್ಲಿ ಸಂಸದ ಶಿವಕುಮಾರ ಉದಾಸಿ ಅವರ ಮತವೂ ಸೇರಿದಂತೆ ಉಷಾ ದಾಸರ ಅವರಿಗೆ ಒಟ್ಟು 19 ಮತಗಳು ಲಭಿಸಿದವು. ಅದೇರೀತಿ, ಸುನಂದಾ ಬಾಕಳೆ ಅವರಿಗೂ 19 ಮತಗಳು ಲಭಿಸಿದವು. ಸದಸ್ಯರು ಕೈ ಎತ್ತುವ ಮೂಲಕ ಹಾಗೂ ಸಹಿ ಹಾಕುವ ಮೂಲಕ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಾಡಿದರು. ಬಳಿಕ, ಚುನಾವಣಾಧಿಕಾರಿ ರಾಯಪ್ಪ ಹುಣಸಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.

ಮುಗಿಲು ಮುಟ್ಟಿದ ಸಂಭ್ರಮ
ಸೋಮವಾರ ಗದಗ ಬೆಟಗೇರಿ ಮುಂದೆ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ದಂಡೇ ಜಮಾಯಿಸಿತ್ತು. ನಾಮಪತ್ರ ಸಲ್ಲಿಕೆ ಪೂರ್ಣಗೊಂಡು ಚುನಾವಣೆ ಪ್ರಕ್ರಿಯೆ ನಡೆಸುವ ವೇಳೆಗೆ ಎಲ್ಲರೂ ಕುತೂಹಲದ ತುತ್ತತುದಿ ತಲುಪಿದ್ದರು.

‌ನಗರಸಭೆ ಗೇಟಿನ ಮುಂಭಾಗದಲ್ಲಿ ನೆರೆದಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಎಚ್‌.ಕೆ.ಪಾಟೀಲ, ಡಿ.ಆರ್‌.ಪಾಟೀಲರ ಪರ ಜಯಘೋಷ ಮೊಳಗಿಸಿದರು. ಇತ್ತು ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿ, ಸಚಿವ ಸಿ.ಸಿ.ಪಾಟೀಲ ಪರ ಘೋಷಣೆ ಕೂಗಿದರು.

ಮೊದಲು ಸೌಮ್ಯವಾಗಿದ್ದ ಗುಂಪಿನ ಘೋಷಣೆಗಳು ಬಳಿಕ ವೈಯಕ್ತಿಕ ಟೀಕೆ, ನಿಂದನೆಗಳಾಗಿ ಬದಲಾದವರು. ಕಾಂಗ್ರೆಸ್‌ನವರು ಬಿಜೆಪಿ ನಾಯಕರನ್ನು ಕಳ್ಳ, ಸುಳ್ಳ, ಮಳ್ಳ ಅಂತೆಲ್ಲಾ ಕೂಗಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯವರೂ ಕಾಂಗ್ರೆಸ್‌ ಘೋಷಣೆಗಳನ್ನೇ ಕೂಗಿ, ಕೇಕೆ ಹಾಕಿ ನಕ್ಕರು.

ಫಲಿತಾಂಶ ಪ್ರಕಟಗೊಂಡ ನಂತರ, ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ, ಬಣ್ಣ ಎರಚಿ ಕುಣಿದಾಡಿದರು.

ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ
ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಮಾಧ್ಯಮದವರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇದರಿಂದ ಕೆರಳಿದ ಮಾಧ್ಯಮ ಪ್ರತಿನಿಧಿಗಳು ನಗರಸಭೆ ಹಾಲ್‌ನ ಮುಂಭಾಗದಲ್ಲಿ ಕುಳಿತು ಮೌನ ಪ್ರತಿಭಟನೆ ನಡೆಸಿದರು.

ಚುನಾವಣೆ ಪ್ರಕ್ರಿಯೆಯಲ್ಲಿ ಮಾಧ್ಯಮದರನ್ನು ಹೊರಗಿಟ್ಟಿದ್ದನ್ನು ಚುನಾವಣಾಧಿಕಾರಿ ರಾಯಪ್ಪ ಹುಣಸಗಿ ಸಮರ್ಥಿಸಿಕೊಂಡರು. ನಿಯಮಾನುಸಾರ ಚುನಾವಣೆ ನಡೆಸಿಕೊಟ್ಟಿರುವುದಾಗಿ ಹೇಳಿದರು. ‘ಯಾವ ನಿಯಮದಂತೆ ಮಾಧ್ಯಮದವರನ್ನು ನಿರ್ಬಂಧಿಸಲಾಗಿದೆ’ ಎಂಬ ಪ್ರಶ್ನೆಗೆ ಅವರು ಬಳಿಕ ಉತ್ತರಿಸುವುದಾಗಿ ತಿಳಿಸಿ, ಹೊರ ನಡೆದರು.

‘ಮರು ಚುನಾವಣೆ ನಡೆಸಿ’
‘ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಲವು ಗೊಂದಲಗಳಿಂದ ನಡೆದಿದ್ದು, ಚುನಾವಣಾ ಅಧಿಕಾರಿ ಮರು ಚುನಾವಣೆ ನಡೆಸಬೇಕು. ಇಲ್ಲವಾದಲ್ಲಿ ಕಾನೂನಾತ್ಮಕವಾಗಿ ಹೋರಾಟ ಮಾಡಲಾಗುವುದು’ ಎಂದು ಶಾಸಕ ಎಚ್‌.ಕೆ.ಪಾಟೀಲ ಎಚ್ಚರಿಸಿದರು. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ ಸಹಿ ಮಾಡಿದವರ ಸಂಖ್ಯೆಯನ್ನು ಲೆಕ್ಕ ಹಾಕಲಾಗಿ, ಕಾಂಗ್ರೆಸ್‌ ಅಭ್ಯರ್ಥಿ ಚಂದಾವರಿ ಅವರಿಗೆ 19 ಮತಗಳು ಬಂದಿದ್ದವು. ಆದ್ದರಿಂದ ಅವರನ್ನು ಅಧ್ಯಕ್ಷರಾಗಿ ಘೋಷಣೆ ಮಾಡಬೇಕು ಎಂದು ಚುನಾವಣಾಧಿಕಾರಿಗೆ ಮನವಿ ಮಾಡಲಾಯಿತು. ಆದರೆ, ಚುನಾವಣಾಧಿಕಾರಿ ಇದಕ್ಕೆ ಅವಕಾಶ ಕೊಡಲಿಲ್ಲ’ ಎಂದು ಆರೋಪ ಮಾಡಿದರು. ‘ಪಾರದರ್ಶಕ ಚುನಾವಣೆ ಮಾಡುವ ಉದ್ದೇಶ ಅವರಿಗೆ ಇಲ್ಲ’ ಎಂದು ಸಿಟ್ಟಿನಿಂದ ಹೊರನಡೆದರು.

*

ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಪಾರದರ್ಶಕವಾಗಿ ನಡೆಸಲಾಗಿದೆ. ಎಲ್ಲವನ್ನೂ ವಿಡಿಯೊ ರೆಕಾರ್ಡಿಂಗ್‌ ಮಾಡಲಾಗಿದ್ದು, ಅನುಮಾನ ಇದ್ದವರು ಅದನ್ನು ನೋಡಬಹುದು
-ರಾಯಪ್ಪ ಹುಣಸಗಿ, ಚುನಾವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT