ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಎಣಿಕೆ ಶಾಂತಿಯುತ; ಬಿಜೆಪಿ ತೆಕ್ಕೆಗೆ ಗದಗ ನಗರಸಭೆ, ಪಕ್ಷೇತರರ ಪ್ರಬಲ ಪೈಪೋಟಿ

ಪ್ರಬಲ ಪೈಪೋಟಿ ನೀಡಿದ ಪಕ್ಷೇತರರು
Last Updated 31 ಡಿಸೆಂಬರ್ 2021, 8:42 IST
ಅಕ್ಷರ ಗಾತ್ರ

ಗದಗ: ಅವಳಿ ನಗರ ಗದಗ ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತ ಪಡೆಯುವ ಮೂಲಕ ಅಧಿಕಾರ ಹಿಡಿಯಲು ಸಜ್ಜಾಗಿದೆ.

ನಗರದ ಶ್ರೀ ಗುರುಬಸವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಮತ ಎಣಿಕೆ ಕಾರ್ಯ ನಡೆಯಿತು. ಮತ ಎಣಿಕೆ ಆರಂಭಗೊಳ್ಳುತ್ತಿದ್ದಂತೆ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರ ಮುಖದಲ್ಲಿ ಆತಂಕದ ಭಾವ ಮನೆ ಮಾಡಿತ್ತು. ಅಧಿಕಾರಿಗಳು ಗೆದ್ದ ಅಭ್ಯರ್ಥಿ ಹೆಸರು ಘೋಷಣೆ ಮಾಡುತ್ತಿದ್ದಂತೆ ಹೊರಭಾಗದಲ್ಲಿ ಕಾಯುತ್ತಿದ್ದ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಗೆಲುವು ಪಡೆದ ಅಭ್ಯರ್ಥಿಗೆ ಹಾರ ಹಾಕಿ, ಹೆಗಲ ಮೇಲೆ ಕೂರಿಸಿಕೊಂಡು, ಜಯಘೋಷದೊಂದಿಗೆ ಪಕ್ಷದ ಕಚೇರಿಯತ್ತ ಕರೆದೊಯ್ಯುತ್ತಿದ್ದ ದೃಶ್ಯ ಕಂಡುಬಂದವು.

ಮತ ಎಣಿಕೆ ಸಂದರ್ಭದಲ್ಲಿ ಆರಂಭದಿಂದಲೂ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ಕಂಡು ಬಂತು. ಒಂದು ಹಂತದಲ್ಲಿ ಕಾಂಗ್ರೆಸ್‌ನ 15 ಅಭ್ಯರ್ಥಿಗಳ ಗೆಲುವಿನ ಘೋಷಣೆಯಾಗಿತ್ತು. ಕಾಂಗ್ರೆಸ್‌ನಿಂದ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳು ಕೂಡ ಗೆದ್ದಿದ್ದರು. ಈ ನಡುವೆ ಬಿಜೆಪಿಯ 17 ಅಭ್ಯರ್ಥಿಗಳ ಗೆಲುವಿನ ಘೋಷಣೆಯಾಗಿತ್ತು. ಕೊನೆಯದಾಗಿ ಉಳಿದಿದ್ದ 35ನೇ ವಾರ್ಡ್‌ನ ಫಲಿತಾಂಶ ಗದಗ ಬೆಟಗೇರಿ ನಗರಸಭೆ ಯಾರ ತೆಕ್ಕೆಗೆ ಬೀಳಲಿದೆ ಎಂಬುದನ್ನು ನಿರ್ಧರಿಸಲಿತ್ತು. ಈ ಸಂದರ್ಭ ಎಲ್ಲರೂ ಉಸಿರು ಬಿಗಿ ಹಿಡಿದು ಕಾಯುವಂತೆ ಮಾಡಿತ್ತು.

ಈ ವಾರ್ಡ್‌ನಲ್ಲಿ ಕಾಂಗ್ರೆಸ್‌ ಜಯ ಸಾಧಿಸಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಏಕೆಂದರೆ ಇಲ್ಲಿ ಕಾಂಗ್ರೆಸ್‌ನ ಪ್ರಾಬಲ್ಯವಿತ್ತು. ಆದರೆ, ಬಿಜೆಪಿ ಅಭ್ಯರ್ಥಿ ಉಷಾ ದಾಸರ ಅವರು 212 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಗದಗ ಬೆಟಗೇರಿ ನಗರಸಭೆಯಲ್ಲಿ ಬಿಜೆಪಿ ಚುಕ್ಕಾಣಿ ಹಿಡಿಯಲು ‘ಬಹುಮತ’ದ ಗೆಲುವು ತಂದುಕೊಟ್ಟರು. 35ನೇ ವಾರ್ಡ್‌ನ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿಗೆ ಸರಳ ಬಹುಮತ ಲಭಿಸಿತು. ಅವಳಿ ನಗರದ ನಗರಸಭೆ ಬಿಜೆಪಿ ಕೈವಶವಾಯಿತು.

ಬೆಳಿಗ್ಗೆ 8ಕ್ಕೆ ಆರಂಭಗೊಂಡ ಮತ ಎಣಿಕೆ ಕಾರ್ಯ ಮಧ್ಯಾಹ್ನ 12ರ ವೇಳೆಗೆ ಮುಕ್ತಾಯಗೊಂಡಿತು. ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಗೊಂದಲ, ಅಡೆತಡೆಗಳು ನಡೆಯಲಿಲ್ಲ. ಎಣಿಕೆ ಕಾರ್ಯ ಸುಗಮವಾಗಿ ನಡೆಯಿತು.

ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಎಐಎಂಐಎಂ ಒಂದು ವಾರ್ಡ್‍ನಿಂದ ಸ್ಪರ್ಧಿಸಿತ್ತು. ಆದರೆ, ಪೈಪೋಟಿ ನೀಡಲಿಲ್ಲ. ಮತ್ತೊಂದೆಡೆ ಕೆಆರ್‍ಎಸ್, ಆಮ್‌ ಆದ್ಮಿ ಪಾರ್ಟಿ ತಲಾ ಒಂದು ವಾರ್ಡ್‍ನಲ್ಲಿ ಸ್ಪರ್ಧಿಸಿದ್ದವು. ಈ ಮಧ್ಯೆ ಶ್ರೀರಾಮ ಸೇನೆ ಬೆಂಬಲಿತ ಸದಸ್ಯರಿಗೂ ಮತದಾರ ಮಣೆ ಹಾಕಿಲ್ಲ.

ಅಚ್ಚರಿ ಮೂಡಿಸಿದ ಪಕ್ಷೇತರರ ಪೈಪೋಟಿ

ಗದಗ ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಖಾತೆ ತೆರೆಯುವಲ್ಲಿ ವಿಫಲವಾಯಿತು. ಆದರೆ, 35 ವಾರ್ಡ್‌ಗಳಿಂದ ಸ್ಪರ್ಧಿಸಿದ್ದ ಒಟ್ಟು 51 ಮಂದಿ ಪಕ್ಷೇತರರ ಅಭ್ಯರ್ಥಿಗಳು ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿ ನೀಡಿ ಅಚ್ಚರಿ ಮೂಡಿಸಿದರು.

ಅದರಲ್ಲೂ 2, 10, 11, 16, 20, 23ನೇ ವಾರ್ಡ್‌ನಲ್ಲಿ ಪ್ರಬಲ ಪೈಪೋಟಿ ನೀಡಿ ಎರಡನೇ ಸ್ಥಾನಕ್ಕೆ ಬಂದಿದ್ದರು. 17 ವಾರ್ಡ್‌ನಿಂದ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಆಸ್ಮಾ ಮುನ್ನಾಸಾಬ ರೇಶ್ಮಿ (1112 ಮತ) ಮತ್ತು 21ನೇ ವಾರ್ಡ್‌ನ ಚುಮ್ಮಿ ಡಿ.ನದಾಫ್‌ (555) ರಾಷ್ಟ್ರೀಯ ಪಕ್ಷಗಳಿಗೆ ಸೋಲಿನ ರುಚಿ ತೋರಿಸಿದರು.

16ನೇ ವಾರ್ಡ್‍ನಲ್ಲಿ 2ನೇ ಸ್ಥಾನದಿಂದ ಕ್ರಮವಾಗಿ 5ನೇ ಸ್ಥಾನದವರೆಗೆ ಪಕ್ಷೇತರರಿದ್ದು, ಇಲ್ಲಿ ಬಿಜೆಪಿ ಆರನೇ ಸ್ಥಾನಕ್ಕೆ ಕುಸಿದಿದೆ.

ದಾಖಲೆಯ ಗೆಲುವು– ಸೋಲು

1ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಸಿದ್ದಮನಹಳ್ಳಿ ಬಿಜೆಪಿಯ ಸೈನಾಜಬಿ ನರಗುಂದ ಅವರ ವಿರುದ್ಧ 1,816 ಮತಗಳ ಅಂತರದ ದಾಖಲೆಯ ಗೆಲುವು ಸಾಧಿಸಿದ್ದಾರೆ.

7ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಯಳವತ್ತಿ ಕಾಂಗ್ರೆಸ್‍ನ ನಾಗಲಿಂಗಪ್ಪ ಐಲಿ ಅವರ ವಿರುದ್ಧ 1,323 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

29ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಚಂದಾವರಿ ಸತತ ಆರನೇ ಬಾರಿಗೆ ಆಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಸಂಸದ ಶಿವಕುಮಾರ ಉದಾಸಿ ಅವರ ಆಪ್ತ ಸಹಾಯಕ ಚಂದ್ರು ತಡಸದ 15ನೇ ವಾರ್ಡ್‌ನಿಂದ ಗೆಲುವು ಸಾಧಿಸಿದ್ದಾರೆ.

ಅವಳಿ ನಗರದ 10ನೇ ವಾರ್ಡ್‌ನಿಂದ 10 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪರಮೇಶ ಕಾಳೆ ಕೇವಲ 1 ಮತವನ್ನಷ್ಟೇ ಪಡೆದು ಹೀನಾಯವಾಗಿ ಸೋತಿದ್ದಾರೆ.

ಸ್ನೇಹಿತರ ಸವಾಲ್, ತಾಯಿ, ಮಗನಿಗೆ ಸೋಲು

2013ರಲ್ಲಿ ನಡೆದಿದ್ದ ನಗರಸಭೆ ಚುನಾವಣೆಯಲ್ಲಿ ಬಿಎಸ್ಸಾರ್ ಕಾಂಗ್ರೆಸ್‍ನಿಂದ ಪ್ರತ್ಯೇಕ ವಾರ್ಡ್‌ಗಳಲ್ಲಿ ಗೆದ್ದಿದ್ದ ರಾಘವೇಂದ್ರ ಯಳವತ್ತಿ ಹಾಗೂ ನಾಗಲಿಂಗ ಐಲಿ ಈ ಬಾರಿಯ ಚುನಾವಣೆಯಲ್ಲಿ ಏಳನೇ ವಾರ್ಡ್‍ನಲ್ಲಿ ಎದುರಾಳಿಗಳಾಗಿದ್ದರು.

ಬಿಜೆಪಿಯಿಂದ ಸ್ಪರ್ಧಿಸಿದ್ದ ರಾಘವೇಂದ್ರ ಯಳವತ್ತಿ ಕಾಂಗ್ರೆಸ್‍ನನ ನಾಗಲಿಂಗ ಐಲಿ ಅವರನ್ನು ಮಣಿಸಿ, ಗೆಲುವಿನ ನಗು ತುಳುಕಿಸಿದರು.

2013ರ ಚುನಾವಣೆಯಲ್ಲಿ ಬಿಎಸ್ಸಾರ್ ಕಾಂಗ್ರೆಸ್‌ನಿಂದ 3 ಹಾಗೂ 4 ನೇ ವಾರ್ಡ್‌ನಿಂದ ಗೆದ್ದಿದ್ದ ಚಿನ್ನವ್ವ ಹೇಮಣ್ಣ ಹಾಗೂ ಅವರ ಪುತ್ರ ಮಂಜುನಾಥ ಮುಳಗುಂದ ಈ ಬಾರಿ ಪಕ್ಷೇತರರಾಗಿ ಕ್ರಮವಾಗಿ ಆರು ಮತ್ತು ಮೂರನೇ ವಾರ್ಡ್‍ನಿಂದ ಸ್ಪರ್ಧಿಸಿ, ಪರಾಭವ ಗೊಂಡಿದ್ದಾರೆ.

ಶ್ವೇತಾ ದಂಡಿನ ಅತಿ ಕಿರಿಯ ಸದಸ್ಯೆ

ಗದಗ-ಬೆಟಗೇರಿ ನಗರಸಭೆಗೆ 11ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಶ್ವೇತಾ ರವಿ ದಂಡಿನ ಚುನಾವಣೆಯಲ್ಲಿ ಜಯಗಳಿಸಿದ್ದು, ಇವರು ನಗರಸಭೆಗೆ ಆಯ್ಕೆಯಾಗಿರುವ ಅತಿ ಕಿರಿಯ ಸದಸ್ಯೆಯಾಗಿದ್ದಾರೆ.

21 ವರ್ಷ ವಯಸ್ಸಿನ ಶೇತಾ ದಂಡಿನ ಮೊದಲ ಬಾರಿಗೆ ಸ್ಪರ್ಧಿಸಿ, ಗೆಲುವಿನ ನಗು ತುಳುಕಿಸಿದ್ದಾರೆ. ಇವರು ಬಿಜೆಪಿ ನಾಯಕ ಡಾ. ಪುನೀತಕುಮಾರ ಬೆನಕನವಾರಿ ಅವರ ಪತ್ನಿ.

ಚುನಾವಣೆ ಅಖಾಡದಲ್ಲಿ ಸೋಲುಂಡ ಯುವ ನೇತಾರರು

ಗದಗ: ಗದಗ-ಬೆಟಗೇರಿ ನಗರಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಅಖಾಡದಲ್ಲಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಯೂತ್‌ ವಿಂಗ್‌ನ ಅಧ್ಯಕ್ಷರು ಸೋಲುಂಡಿದ್ದಾರೆ.

ವಾರ್ಡ್‌ ನಂಬರ್‌ 25ರಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಅಶೋಕ್ ಮಂದಾಲಿ ಬಿಜೆಪಿಯ ವಿನಾಯಕ್ ಮಾನ್ವಿ ವಿರುದ್ಧ ಸೋಲುಂಡಿದ್ದಾರೆ.

ಅದೇರೀತಿ, ವಾರ್ಡ್ ನಂಬರ್ 9ರಿಂದ ಕಣಕ್ಕೆ ಇಳಿದಿದ್ದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಿವರಾಜಗೌಡ ಹಿರೇಮನಿ ಪಾಟೀಲ ಅವರಿಗೂ ಸೋಲಾಗಿದ್ದು, ಇಲ್ಲಿ ಕಾಂಗ್ರೆಸ್‌ನ ಚಂದ್ರಶೇಖರಗೌಡ ಕರಿಸೋಮನಗೌಡರ್ ಗೆಲುವು ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT