ನೊಂದ ಮಹಿಳೆಯರಿಗೆ ಸೌಲಭ್ಯ ಒದಗಿಸುವಂತೆ ಸಲಹೆ

7
ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಾನಂದ ಕರಾಳೆ ಅಧಿಕಾರಿಗಳಿಗೆ ಸೂಚನೆ

ನೊಂದ ಮಹಿಳೆಯರಿಗೆ ಸೌಲಭ್ಯ ಒದಗಿಸುವಂತೆ ಸಲಹೆ

Published:
Updated:
Deccan Herald

ಗದಗ: ‘ನೊಂದ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಸಕಾಲಕ್ಕೆ ಸೌಲಭ್ಯಗಳನ್ನು ಒದಗಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ನಗರ, ಗ್ರಾಮೀಣ ಮಟ್ಟದಲ್ಲಿ ಮಾಹಿತಿ ನೀಡುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಹೇಳಿದರು.

ಇಲ್ಲಿನ ನಡೆದ ದುರ್ಬಲ ಮತ್ತು ಸಂಕಷ್ಟಕ್ಕೆ ಈಡಾಗುವ ಮಹಿಳೆ, ಮಕ್ಕಳ ಸಂರಕ್ಷಣೆ, ಕಲ್ಯಾಣಕ್ಕಾಗಿ ಜಾರಿಯಾಗುತ್ತಿರುವ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ, ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಟ ತಡೆ ಕಾಯ್ದೆ ಜಾರಿ, ಸಾಂತ್ವನ, ಸ್ವಾಧಾರ, ಗೆಳತಿ ವಿಶೇಷ ಚಿಕಿತ್ಸಾ ಘಟಕ, ಬಾಲ್ಯ ವಿವಾಹ ತಡೆ ಹಾಗೂ ಸ್ಥೈರ್ಯ ಯೋಜನೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಿದ ಕುರಿತು ಸಂಸ್ಥೆಗಳು ಕಾರ್ಯಪಾಲನಾ ವರದಿಗಳನ್ನು ಆಧಾರ ಸಹಿತವಾಗಿ ಮಾಹಿತಿ ಒದಗಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಕಾನೂನು ನೆರವು ಸಮಿತಿ ಸದಸ್ಯೆ ರೇಣುಕಾ ಕುಲಕರ್ಣಿ ಅವರು, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯ ಕುರಿತು ಮಾತನಾಡಿದರು. ‘ಜಿಲ್ಲೆಯಲ್ಲಿ ಈ ಕಾಯ್ದೆಯನ್ನು ಪರಿಣಾಮಕಾರಿ ಜಾರಿಗೊಳಿಸಲು ವಿಧವಾ ಕೋಶ ಪ್ರಾರಂಭಿಸಲಾಗಿದೆ. ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಜಿಲ್ಲಾ ಸಮಿತಿಗೆ 7 ಜನ ಸದಸ್ಯರಿದ್ದಾರೆ. ವಿಧವೆಯರಿಗೆ ನೀಡುವ ಸರ್ಕಾರಿ ಸೌಲಭ್ಯಗಳನ್ನು ದೊರಕಿಸಿಕೊಡಲು ಈ ಸಮಿತಿ ನಿಗಾವಹಿಸುತ್ತದೆ. ಜತೆಗೆ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಕಾನೂನು ನೆರವು, ಅರಿವು ಮೂಡಿಸಲು ಮಹಿಳಾ ವಕೀಲರು ಸ್ವಾಧಾರ ಗೃಹಕ್ಕೆ ಭೇಟಿ ನೀಡುತ್ತಾರೆ. ಮಹಿಳೆಯರ ಸ್ವಾವಲಂಬಿ, ಸ್ವಾಭಿಮಾನಿ ಜೀವನಕ್ಕೆ ಸರ್ಕಾರಗಳು ವಿವಿಧ ಇಲಾಖೆಗಳಿಂದ ನೀಡುತ್ತಿರುವ ಸೌಲಭ್ಯ ಮತ್ತು ಕಾನೂನು ನೆರವು ಕುರಿತು ಗ್ರಾಮ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು, ಜನಪ್ರತಿನಿಧಿ, ಶಿಕ್ಷಕರು, ಗ್ರಾಮ ಪಂಚಾಯ್ತಿ ಅಧಿಕಾರಿಗಳು ಅರಿವು ಮೂಡಿಸಬೇಕು’ ಎಂದರು.

‘ಜಿಲ್ಲೆಯಲ್ಲಿರುವ ಮಹಿಳೆ ಮತ್ತು ಮಕ್ಕಳ ಕುರಿತ ದೂರುಗಳು ಮಹಿಳಾ ಆಯೋಗಕ್ಕೆ ಹೋಗದಂತೆ ಇಲ್ಲಿಯೇ ಅವುಗಳ ನಿವಾರಣೆ ಮಾಡಲು ಸರ್ವರೂ ಕಾರ್ಯನಿರ್ವಹಿಸಬೇಕು. ಪೊಲೀಸ್ ಠಾಣೆಗಳಲ್ಲಿ ಸಂಬಂಧಿತ ವಿಷಯಗಳ ಕುರಿತು ದೂರು ದಾಖಲಿಸಲು ಹಿಂಜರಿಕೆ, ವಿಳಂಬವಾಗುತ್ತಿರುವ ಪ್ರಕರಣಗಳಿದ್ದು, ಇವುಗಳಿಗೆ ಆಸ್ಪದ ನೀಡದೇ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಅವರು ಹೇಳಿದರು.

‘ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಟ ತಡೆ ಕಾಯ್ದೆ ಜಾರಿ ಕುರಿತಂತೆ ಜಿಲ್ಲೆಯಲ್ಲಿ 2018ರ ಎಪ್ರಿಲ್‌ಯಿಂದ ಆಗಸ್ಟ್ ತಿಂಗಳಲ್ಲಿ ಒಟ್ಟು 15 ಬಾಲ್ಯ ವಿವಾಹ ತಡೆಗಟ್ಟಲಾಗಿದೆ. ಈಗಾಗಲೇ ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾವಲು ಸಮಿತಿಗಳು ಬಾಲ್ಯ ವಿವಾಹದ ಪ್ರಕರಣಗಳು ನಡೆಯದಂತೆ ಸಾರ್ವಜನಿಕವಾಗಿ ಜಾಗೃತಿ ಮೂಡಿಸಬೇಕು. ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಜಾಗೃತಿ ಸಭೆ ನಡೆಸಿ ವರದಿ ನೀಡಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹೇಳಿದರು.

‘ಜಿಲ್ಲೆಯ ಸಾಂತ್ವನ ಕೇಂದ್ರಗಳಲ್ಲಿ ಒಟ್ಟು 490 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 338 ಇತ್ಯರ್ಥಗೊಂಡಿವೆ. ಕೌಟುಂಬಿಕ ಹಿಂಸೆ ಮಹಿಳಾ ಸಂರಕ್ಷಣೆ ಕಾಯ್ದೆಯಡಿ 35 ಪ್ರಕರಣ ದಾಖಲಾಗಿದ್ದು, 23 ಇತ್ಯರ್ಥಗೊಂಡಿವೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ತುರ್ತು ವೈದ್ಯಕೀಯ ಚಿಕಿತ್ಸೆ, ಪೊಲೀಸ್, ಕಾನೂನು ನೆರವು ಹಾಗೂ ಸಮಾಲೋಚನಾ ಸೌಲಭ್ಯ ಕಲ್ಪಿಸುವ ಸಮಗ್ರ ಸೌಲಭ್ಯಕ್ಕಾಗಿ ಗದಗ ಜಿಲ್ಲಾಸ್ಪತ್ರೆಯಲ್ಲಿ 2014ರ ನ.1ರಿಂದ ಕಾರ್ಯರಾಂಭಿಸಿರುವ ಗೆಳತಿ ವಿಶೇಷ ಚಿಕಿತ್ಸಾ ಘಟಕದಲ್ಲಿ 16 ಪ್ರಕರಣಗಳು ದಾಖಲಾಗಿವೆ. ದೌರ್ಜನ್ಯ, ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಆರ್ಥಿಕ ಪರಿಹಾರ ನೀಡುವ ಸ್ಥೈರ್ಯ ಯೋಜನೆಯಡಿ ಒಂದು ಪ್ರಕರಣಕ್ಕೆ ಪರಿಹಾರ ನೀಡಲಾಗಿದೆ. ಸಾಮಾಜಿಕ ರಕ್ಷಣೆ, ಬಹಿಷ್ಕಾರ, ಮನೆಯಿಂದ ಹೊರಬಂದ ಪಾಲಕರಿಲ್ಲದ ಹಾಗೂ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಆಶ್ರಯ ನೀಡಿ, ಅವರ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ರಕ್ಷಣೆ ಒದಗಿಸುವುದು, ಅವರಿಗೆ ಪುನರ್ವಸತಿ ಕಲ್ಪಿಸಲು ಸ್ವಾಧಾರ ಗೃಹ ಸ್ಥಾಪಿಸಲಾಗಿದೆ. 2018ರ ಏಪ್ರಿಲ್‌ನಿಂದ ಆಗಸ್ಟ್‌ ಅವಧಿಯಲ್ಲಿ 27 ಮಹಿಳೆಯರು, 9 ಮಕ್ಕಳು ಆಶ್ರಯ ಪಡೆದಿದ್ದಾರೆ’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಂ.ಹೊನಕೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ಪಡಗಣ್ಣವರ, ನಿರೂಪಣಾಧಿಕಾರಿ ಅಕ್ಕಮಹಾದೇವಿ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !