‘ಜನಸಾಮಾನ್ಯರ ಸ್ವಾತಂತ್ರ್ಯದ ಕನಸಿಗೆ ಬಲ ತುಂಬಿದ ಗಾಂಧೀಜಿ’

7
ಗಾಂಧಿ ರಾಮಮನೋಹರ ಲೋಹಿಯಾ ಕಂಡಂತೆ ಪುಸ್ತಕ ಬಿಡುಗಡೆ; ತೋಂಟದ ಶ್ರೀ ಸ್ಮರಣೆ

‘ಜನಸಾಮಾನ್ಯರ ಸ್ವಾತಂತ್ರ್ಯದ ಕನಸಿಗೆ ಬಲ ತುಂಬಿದ ಗಾಂಧೀಜಿ’

Published:
Updated:
Deccan Herald

ಗದಗ: ‘ಸತ್ಯ, ಅಹಿಂಸೆ ಮತ್ತು ಶಾಂತಿಯ ಸಂದೇಶದೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ, ಅಹಿಂಸಾತ್ಮಕ ಅಸಹಕಾರ ಚಳವಳಿ ಮೂಲಕ ಜನರ ಸ್ವಾತಂತ್ರ್ಯದ ಕನಸಿಗೆ ಗಾಂಧೀಜಿ ಅವರು ಬಲ ತುಂಬಿದರು’ ಎಂದು ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದಿಂದ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ‘ಮಹಾತ್ಮ ಗಾಂಧಿ- ರಾಮಮನೋಹರ ಲೋಹಿಯಾ ಅವರು ಕಂಡಂತೆ’  ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಗಾಂಧೀಜಿ ಸ್ವಾತಂತ್ರ್ಯ ಚಳುವಳಿಯ ಜತೆಗೆ ಸಾಮಾಜಿಕ ತಾರತಮ್ಯ ನಿವಾರಣೆಗೆ, ಸ್ತ್ರೀ ಸಮಾನತೆಗೆ ಆದ್ಯತೆ ನೀಡಿದರು. ತಮ್ಮ ಮಾತು, ಬರಹಗಳ ಮೂಲಕ ಜನಜಾಗೃತಿ ಮೂಡಿಸಿದರು’ ಎಂದರು.

‘ರಾಮಮನೋಹರ ಲೋಹಿಯಾ ಅವರು ಸಮಾಜವಾದ ಸಿದ್ಧಾಂತದ ಮೂಲಕ ಗಮನಸೆಳೆದರು. ಬಾಲ್ಯದಿಂದಲೂ ಗಾಂಧಿ ಅವರ ಸಂಪರ್ಕದಲ್ಲಿ ಬೆಳೆದ ಲೋಹಿಯಾ ಅವರು ಗಾಂಧೀಜಿ ಅವರನ್ನು ಸನಿಹದಿಂದ ಕಂಡು ಅವರ ವ್ಯಕ್ತಿತ್ವವನ್ನು ಈ ಪುಸ್ತಕದಲ್ಲಿ ಪರಿಚಯಿಸಿದ್ದಾರೆ. ಲೋಹಿಯಾ ಅವರ ಮಾತುಗಳಲ್ಲೇ ಇರುವ ಬೌದ್ಧಿಕ ಆಲೋಚನೆಗಳನ್ನು ಇಂದಿನ ಯುವ ಪೀಳಿಗೆ ಅರಿತುಕೊಳ್ಳಬೇಕು’ ಎಂದರು.

‘ತಿಲಕರ ನಂತರ ಗಾಂಧಿಯವರು ಸ್ವಾತಂತ್ರ್ಯ ಚಳುವಳಿಯ ಪ್ರಭಾವಿ ನೇತಾರರಾದರು. ಅಹಿಂಸಾತ್ಮಕ ಹೋರಾಟದ ಮೂಲಕ ಬ್ರಿಟೀಷರನ್ನು ಎಚ್ಚರಿಸುವ ಕಾರ್ಯ ಮಾಡಿದರು. ನಡೆ ನುಡಿ, ಆಚಾರ ವಿಚಾರಗಳ ಮೂಲಕ ಲೋಹಿಯಾ ಅವರು ಗಮನಸೆಳೆದು, ಗಾಂಧಿ ಅವರ ಬದುಕಿನ ಅನೇಕ ಸಂಗತಿಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದು ಉಪನ್ಯಾಸಕ ಐ.ಬಿ. ಬೆನಕೊಪ್ಪ ತಿಳಿಸಿದರು.

ಪ್ರೊ.ಎಸ್.ಎಸ್. ಹರ್ಲಾಪೂರ ಅವರು ‘ಮಠದ ಶಿವಾನುಭವಗಳು ಮತ್ತು ಬದಲಾವಣೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ‘ಕಳೆದ 46 ವರ್ಷಗಳಿಂದ ನಿರಂತರವಾಗಿ ಪ್ರತಿವಾರ ನಡೆದುಕೊಂಡು ಬಂದಿರುವ ಶಿವಾನುಭವಗಳು ಆಧ್ಯಾತ್ಮದ ಜತೆಗೆ ಸಾಹಿತ್ಯ, ಸಂಗೀತ, ರಂಗಕಲೆ, ಎಲ್ಲ ಧರ್ಮಗಳ ಉತ್ತಮ ವಿಚಾರಗಳ ಮಂಡನಾ ವೇದಿಕೆಯಾಗಿದೆ’ ಎಂದರು.

‘ಶ್ರೇಷ್ಠ ಉದ್ಯಮಿ ಪ್ರಶಸ್ತಿ’ ಪಡೆದ ಶಿವಣ್ಣ ಮುಳಗುಂದ ಹಾಗೂ ಮಕಾವೋದಲ್ಲಿ ನಡೆದ 35ನೇ ಏಷಿಯನ್ ಅಂತರರಾಷ್ಟ್ರೀಯ ಅಂಚೆ ಚೀಟಿ ಪ್ರದರ್ಶನದಲ್ಲಿ ಬೆಳ್ಳಿ ಪದಕ ಪಡೆದ ಸಯಾಮ್ ಸಂಜಯ ಬಾಗಮಾರ ಅವರನ್ನು ಸನ್ಮಾನಿಸಲಾಯಿತು. ಇಂದಿರಾ ಬಾಗಮಾರ ಮಾತನಾಡಿದರು. ಧರ್ಮಗ್ರಂಥ ಪಠಣ ಸಾವಿತ್ರಿ ಸಾಲಿಮಠ ಅವರಿಂದ ಹಾಗೂ ಅಂಬವ್ವ ಮೋಹನ ಸಾಕಾನವರ ಅವರು ವಚನ ಚಿಂತನೆ ನೀಡಿದರು. ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ಹಾಗೂ ಮಂಜುಳಾ ಹಾಸಲಕರ ಅವರು ಗಾಂಧೀಜಿ ಕುರಿತ ಗೀತೆಗಳನ್ನು ಹಾಡಿದರು.

ನಾಗರತ್ನಾ ಮುಳಗುಂದ, ಈಶ್ವರಪ್ಪ ಅಂಗಡಿ, ಎಸ್.ಯು. ಸಜ್ಜನಶೆಟ್ಟರ, ಶೇಖಣ್ಣ ಕವಳಿಕಾಯಿ, ಶಿವಾನುಭವ ಸಮಿತಿಯ ವಿವೇಕಾನಂದಗೌಡ ಪಾಟೀಲ, ಜಿ.ಪಿ. ಕಟ್ಟಿಮನಿ, ಅನ್ನಪೂರ್ಣಕ್ಕ ಬಡಿಗಣ್ಣವರ, ಶಿವಕುಮಾರ ರಾಮನಕೊಪ್ಪ, ಮಂಜುನಾಥ ಅಸುಂಡಿ, ವಿಜಯಕುಮಾರ ಹಿರೇಮಠ, ಶರಣಬಸಪ್ಪ ಅಂಗಡಿ, ಶಿವನಗೌಡ ಗೌಡರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !