ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದುಗಿನಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಸಿದ್ಧತೆ: ‘ಶಿವನಬುಟ್ಟಿ’ ಖರೀದಿ ಬಲು ಜೋರು

Last Updated 4 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಗದಗ: ಬೆಳಕಿನ ಹಬ್ಬ ದೀಪಾವಳಿಗೆ ಒಂದು ವಾರದಿಂದಲೇ ನಗರದಲ್ಲಿ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಬೆಲೆ ಏರಿಕೆ ಮಧ್ಯೆಯೇ ಬಡವರು, ಮಧ್ಯಮ ವರ್ಗದವರು ಹಬ್ಬದ ಆಚರಣೆಗೆ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಸ್ಥಳೀಯ ಮಾರುಕಟ್ಟೆಗಳಿಗೆ ಈಗಾಗಲೇ ದೀಪಾವಳಿ ಅಲಂಕಾರಕ್ಕೆ ಬೇಕಾದ ಅಲಂಕಾರಿಕ ವಸ್ತುಗಳು ಬಂದಿವೆ. ಬಣ್ಣ ಬಣ್ಣದ ಆಕಾಶ ಬುಟ್ಟಿಗಳು, ಮಣ್ಣಿನ ಹಾಗೂ ಪಿಂಗಾಣಿ ಹಣತೆಗಳು, ರಂಗೋಲಿ ಖರೀದಿ ಜೋರಾಗಿದೆ. ಇಲ್ಲಿನ ಸ್ಟೇಷನ್‌ ರಸ್ತೆ, ಮಹೇಂದ್ರಕರ್‌ ವೃತ್ತ, ಟಾಂಗಾಕೂಟ, ಜನತಾ ಬಜಾರ, ಮಾಬೂಸ್ಬಾನಿ ಕಟ್ಟಿ ಹಾಗೂ ಕೆ.ಸಿ.ರಾಣಿ ರಸ್ತೆ, ಬೆಟಗೇರಿ ಮಾರುಕಟ್ಟೆಗಳಲ್ಲಿ ಸಂಜೆಯ ವೇಳೆಗೆ ಜನರ ಖರೀದಿ ಭರಾಟೆ ಜೋರಾಗಿರುತ್ತದೆ.

ಇಲ್ಲಿನ ಅಂಗಡಿಗಳಲ್ಲಿ ವೈವಿಧ್ಯಮಯ ಆಕಾಶ ಬುಟ್ಟಿಗಳು ರಸ್ತೆಯಲ್ಲಿ ಸಂಚರಿಸುವವರನ್ನು ಕೈಬೀಸಿ ಕರೆಯುತ್ತಿವೆ. ಮನೆ ಮುಂದೆ ಆಕಾಶಬುಟ್ಟಿ ತೂಗು ಹಾಕಿ ಬೆಳಕಿನ ಸಂಭ್ರಮ ಇಮ್ಮಡಿಗೊಳಿಸಲು ವಿವಿಧ ಪ್ರಕಾರದ ಆಕಾಶ ಬುಟ್ಟಿಗಳನ್ನು ಖರೀದಿಸಲು ಜನರು ಮುಂದಾಗಿದ್ದಾರೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮನೆ, ಅಂಗಡಿ ಹಾಗೂ ಕಚೇರಿಗಳನ್ನು ಶುಚಿಗೊಳಿಸಿ ಸುಣ್ಣ, ಬಣ್ಣ ಬಳಿಯುವ ಕೆಲಸ ಚುರುಕುಗೊಂಡಿದೆ. ‘ಶಿವನಬುಟ್ಟಿ’ ಎಂದು ಕರೆಯಲಾಗುವ ಆಕರ್ಷಕ ಆಕಾಶ ಬುಟ್ಟಿಯನ್ನು ಮನೆಗಳಿಗೆ ತೂಗು ಹಾಕಲು ಸಿದ್ಧತೆಯಲ್ಲಿ ತೊಡಗಿದ್ದಾರೆ. ಮನೆಯ ಮುಂದೆ ಸಾಲು ದೀಪಗಳನ್ನು ಬೆಳಗಿಸಲು ಹಣತೆ ಖರೀದಿಯೂ ಜೋರಾಗಿದೆ. ಧನ್ವಂತರಿ ಪೂಜೆಯ ಮೂಲಕ ದೀಪಾವಳಿ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಹೊಸದಾಗಿ ವ್ಯಾಪಾರ, ವಹಿವಾಟು ಮಾಡುವವರು ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಹಬ್ಬದ ಮೊದಲ ದಿನವೇ ವ್ಯವಹಾರ ಪ್ರಾರಂಭಿಸುತ್ತಾರೆ.

ಹಬ್ಬಕ್ಕಾಗಿ ಹೊಸ ಬಟ್ಟೆ ಖರೀದಿಸಲು, ಗೃಹ ಉಪಯೋಗಿ, ಅಲಂಕಾರಿಕ ವಿದ್ಯುತ್ ದೀಪ­ಗಳು, ಪ್ಲಾಸ್ಟಿಕ್‌ ತೋರಣಗಳು, ದಿನಸಿ ಸಾಮಗ್ರಿ ಖರೀದಿಸಲು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಮಾರುಕಟ್ಟೆಗೆ ಬರುವ ಜನರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಗ್ರಾಹಕರನ್ನು ಸೆಳೆಯಲು ಬಟ್ಟೆ ಅಂಗಡಿಗಳು, ಗೃಹ­ಬಳಕೆ ಹಾಗೂ ಎಲೆಕ್ಟ್ರಾನಿಕ್ಸ್ ಮಳಿಗೆಗಳು ರಿಯಾಯಿತಿ ವಸ್ತುಗಳನ್ನು ಮಾರಾಟ ಮಾಡುತ್ತಿವೆ.
‘ಭಾರತದಲ್ಲಿ ಚೀನಾ ದೇಶದ ವಸ್ತುಗಳನ್ನು ನಿಷೇಧಿಸಿರುವುದು ಒಳ್ಳೆಯದು. ಈ ಬಾರಿ ಮುಂಬೈನಿಂದ ತರಲಾಗಿದ್ದ ಅಲಂಕಾರಿಕ ವಸ್ತುಗಳ ಬಿಡಿಭಾಗಗಳಿಂದ ಆಕಾಶ ಬುಟ್ಟಿ ತಯಾರಿಸಿದ್ದೇವೆ. ಆಕಾಶ ಬುಟ್ಟಿಗಳನ್ನು ಸಿದ್ಧಪಡಿಸುವ ಕಾರ್ಯ ತಿಂಗಳಿಂದ ನಡೆಯುತ್ತಿದೆ’ ಎನ್ನುತ್ತಾರೆ ಶಂಕರ ಸ್ಟೋರ್‌ನ ಬಸವರಾಜ.

ಆಕಾಶ ಬುಟ್ಟಿಗೆ ಶೇ.18 ರಷ್ಟು ಜಿಎಸ್‌ಟಿ: ‘ಗಾತ್ರಕ್ಕೆ ತಕ್ಕಂತೆ ಆಕಾಶ ಬುಟ್ಟಿಯ ಬೆಲೆ ಇದೆ. ₨50ರಿಂದ 1,600 ರವರೆಗೆ ಮಾರಾಟ ಮಾಡುತ್ತಿದ್ದೇವೆ. ಸದ್ಯ ಆಕಾಶ ಬುಟ್ಟಿಗೆ ಆಕಾಶ ಬುಟ್ಟಿಗೆ ಶೇ 18 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ವಾರದಿಂದ ಜನರು ಆಕಾಶ ಬುಟ್ಟಿ­ ಖರೀದಿಯಲ್ಲಿ ತೊಡಗಿದ್ದಾರೆ. ಪ್ರತಿನಿತ್ಯ 150ರಿಂದ 200 ಆಕಾಶ ಬುಟ್ಟಿಗಳನ್ನು ಮಾರಾಟ ಮಾಡುತ್ತಿದ್ದೇವೆ. ಹಬ್ಬಕ್ಕೆ ಎರಡು ದಿನ ಬಾಕಿಯಿರುವಾಗ ವ್ಯಾಪಾರ ಜೋರಾಗಿ ನಡೆಯುತ್ತದೆ’ ಎನ್ನುತ್ತಾರೆ ಕೆ.ಸಿ.ರಾಣಿ ರಸ್ತೆಯಲ್ಲಿರುವ ಅಂಗಡಿಯೊಂದರ ವ್ಯಾಪಾರಿ ಸೋಮಶೇಖರ ಸೂಡಿ ತಿಳಿಸಿದರು.

‘ಹಬ್ಬದ ಹಿನ್ನೆಲೆಯಲ್ಲಿ ಬಟ್ಟೆ, ದಿನಸಿ ಸಾಮಗ್ರಿ, ಹೂವು ಮತ್ತು ಹಣ್ಣುಗಳ ಬೆಲೆಯಲ್ಲಿ ಏರಿಕೆ ಕಂಡಿದೆ. ಬೆಲೆ ಏರಿಕೆ ನಡುವೆಯೇ ದೀಪಾವಳಿ ಆಚರಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ನಗರದ ನಿವಾಸಿಗಳಾದ ಗಿರೀಶ ಕಾಳಗಿ, ಶಾಂತಾ ಹಿರೇಮಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT