ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರಿಗೆ ಶೇ 46ರಷ್ಟು ಮಳೆ ಕೊರತೆ

ಕೇಂದ್ರದ ತಂಡಕ್ಕೆ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಮಾಹಿತಿ ನೀಡಿದ ಡಿ.ಸಿ.
Last Updated 18 ನವೆಂಬರ್ 2018, 16:16 IST
ಅಕ್ಷರ ಗಾತ್ರ

ಗದಗ: ‘ಪ್ರಸಕ್ತ ಸಾಲಿನ ಸೆಪ್ಟಂಬರ್‌ ತಿಂಗಳ ಅಂತ್ಯದವರೆಗೆ 382 ವಾಡಿಕೆ ಮಳೆ, ಪೈಕಿ ಕೇವಲ 206 ಮಿ.ಮೀ. ಮಳೆಯಾಗಿ ಮುಂಗಾರು ಹಂಗಾಮಿಗೆ ಶೇ 46ರಷ್ಟು ಕೊರತೆಯಾಗಿದೆ’ ಎಂದು ‌ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

ಜಿಲ್ಲೆಯ 2018ರ ಮುಂಗಾರು ಬರ, ಬೆಳೆ ಹಾನಿ ಅಧ್ಯಯನಕ್ಕಾಗಿ ಬಂದಿದ್ದ ಕೇಂದ್ರ ಕುಕ್ಕುಟ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ ನಿರ್ದೇಶಕ ಡಾ.ಮಹೇಶ್ ನೇತೃತ್ವದ ಸಿಡಬ್ಲೂಸಿಯ ನಿರ್ದೇಶಕ ಡಾ.ಒ.ಆರ್.ಟಿ. ರೆಡ್ಡಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ನೀತಾ ತೆಹಲ್ಲ್ಯಾನಿ ತಂಡಕ್ಕೆ ಗಜೇಂದ್ರಗಡದ ಪರಿವೀಕ್ಷಣಾ ಮಂದಿರದಲ್ಲಿ ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 2011ರಿಂದ ನಿರಂತರವಾಗಿ ಸರಾಸರಿ (641.6 ಮಿ.ಮೀ) ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗುತ್ತಿದೆ. 2011ರಲ್ಲಿ 475.3 ಮಿ.ಮೀ, 2012ರಲ್ಲಿ 398.5 ಮಿ.ಮೀ, 2013ರಲ್ಲಿ 518.2 ಮಿ.ಮೀ, 2014ರಲ್ಲಿ ಮೇ, ಆಗಸ್ಟ್‌ನಲ್ಲಿ 703.6 ಮಿ.ಮೀ. ಅಕಾಲಿಕ ಮಳೆಯಾಗಿತ್ತು. 2015ರಲ್ಲಿ 396.7 ಮಿ.ಮೀ, 2016 ರಲ್ಲಿ 370.2 ಮಿ.ಮೀ, 2017ರಲ್ಲಿ 549.1 ಮಿ.ಮೀ. ಮಳೆಯಾಗಿದೆ’ ಎಂದು ತಿಳಿಸಿದರು.

‘ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳ 2.40 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಪೈಕಿ 2.11 ಲಕ್ಷ ಹೆಕ್ಟೇರ್ ಬಿತ್ತನೆ ಮಾಡಲಾಗಿತ್ತು. ಸರಿಯಾಗಿ ಮಳೆಯಾಗದ ಕಾರಣ 1.73 ಲಕ್ಷ ಹೆಕ್ಟೇರ್ ಬೆಳೆ, ತೋಟಗಾರಿಕೆಯಲ್ಲಿ 39 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ.
ಕೃಷಿಯಲ್ಲಿ 95,592 ಹೆಕ್ಟೇರ್‌ ಹೆಸರು, 33,119 ಹೆಕ್ಟೇರ್‌ ಗೋವಿನಜೋಳ, 32,421 ಹೆಕ್ಟೇರ್‌ ಶೇಂಗಾ, 14,415 ಹೆಕ್ಟೇರ್‌ ಹತ್ತಿ, 4,506 ಹೆಕ್ಟೇರ್‌ ಸೂರ್ಯಕಾಂತಿ, 1,973 ಹೆಕ್ಟೇರ್‌ ಜೋಳ, 1,743 ಹೆಕ್ಟೇರ್‌ ತೊಗರಿ ಹಾಗೂ 1,826 ಹೆಕ್ಟೇರ್‌ ವಿವಿಧ ಬೆಳೆಗಳು ಮಳೆ ಕೊರತೆಯಿಂದ ಹಾನಿಯಾಗಿವೆ. ಎನ್.ಡಿ.ಆರ್.ಎಫ್. ನಿಯಮಗಳ ಅನ್ವಯ ಕೃಷಿಯಲ್ಲಿ 1.73 ಲಕ್ಷ ಹೆಕ್ಟೇರ್ ಬೆಳೆ ಹಾನಿ ಕುರಿತು ಗದಗ ಜಿಲ್ಲೆಯಿಂದ ₨118.60 ಕೋಟಿ ಇನ್‌ಪುಟ್ ಸಬ್ಸಿಡಿಗಾಗಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.

‘ತೋಟಗಾರಿಕೆಯಲ್ಲಿ ಜಿಲ್ಲೆಯಲ್ಲಿ 25,186 ಹೆಕ್ಟೇರ್ ಉಳ್ಳಗಡ್ಡಿ, 13,817 ಹೆಕ್ಟೇರ್‌ ಮೆಣಸಿನಕಾಯಿ ಸೇರಿದಂತೆ ಒಟ್ಟು 39,003 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ನಿಯಮಾವಳಿ ಅನ್ವಯ ₨28.53 ಕೋಟಿ ಇನ್‌ಪುಟ್ ಸಬ್ಸಿಡಿಗಾಗಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಆಕಳು, ಎತ್ತು, ಎಮ್ಮೆಗಳ ಸಂಖ್ಯೆ 2.03 ಲಕ್ಷ ಇದೆ. 3.6 ಲಕ್ಷ ಆಡು, ಕುರಿಗಳು ಸೇರಿದಂತೆ ಒಟ್ಟು 5.92 ಲಕ್ಷ ಜಾನುವಾರು ಇವೆ. 35,630 ಮೆಟ್ರಿಕ್ ಟನ್ ಮೇವು ಲಭ್ಯವಿದೆ. 11 ಗೋಶಾಲೆ ತೆರೆಯಲು ₨3.63 ಕೋಟಿ, 22 ಮೇವು ಬ್ಯಾಂಕ್‌ ಸ್ಥಾಪನೆಗೆ ₨4.40 ಕೋಟಿ, ಔಷಧಿ, ಪೌಷ್ಟಿಕ ಮೇವು ಮತ್ತು ಮೇವಿನ ಕಿಟ್‌ಗಳ ಪೂರೈಕೆಗಾಗಿ ತಲಾ ₨1.25 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಂಸದ ಶಿವಕುಮಾರ ಉದಾಸಿ, ಶಾಸಕ ಕಳಕಪ್ಪ ಬಂಡಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಜಿಲ್ಲಾಧಿಕಾರಿಗಳ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ, ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಬಿ.ಆರ್. ಪಾಟೀಲ, ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ. ಬಾಲರೆಡ್ಡಿ, ತೋಟಗಾರಿಕೆ ಇಲಾಖೆಯ ಉಪನಿರ್ದೆಶಕ ಪ್ರದೀಪ, ರೋಣ ತಹಶೀಲ್ದಾರ್‌ ಅಜಿತ ಎಂ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT