ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗೆ ಸ್ಪರ್ಧಾತ್ಮಕ ದರ ಒದಗಿಸಲು ಕ್ರಮ

ಬೆಲೆ ವ್ಯತ್ಯಾಸ ಕೊರತೆ ಪಾವತಿ ಯೋಜನೆ ಕುರಿತ ಸಭೆಯಲ್ಲಿ ಪ್ರಕಾಶ್ ಕಮ್ಮರಡಿ ಮಾಹಿತಿ
Last Updated 23 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಗದಗ: ‘ರೈತರ ಬೆಳೆಗಳಿಗೆ ಸ್ಪರ್ಧಾತ್ಮಕ ಮಾರುಕಟ್ಟೆ ದೊರಕಿಸಲು ಈರುಳ್ಳಿ ಖರೀದಿ ಬೆಲೆಯಲ್ಲಿ ವ್ಯತ್ಯಾಸ ಕೊರತೆ ಪಾವತಿ ಭಾವಾಂತರ ವಿಧಾನವು ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯಗತವಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಇದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲಿದೆ’ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಈರುಳ್ಳಿ ಖರೀದಿಗೆ ನೂತನವಾಗಿ ಜಾರಿಗೆ ತಂದಿರುವ ಬೆಲೆ ವ್ಯತ್ಯಾಸ ಕೊರತೆ ಪಾವತಿ ಯೋಜನೆ ಕುರಿತ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಬೆಲೆ ವ್ಯತ್ಯಾಸ ಕೊರತೆ ಪಾವತಿ ವ್ಯವಸ್ಥೆ ಬಗ್ಗೆ 2015ರಲ್ಲೇ ಆಯೋಗ ಪ್ರಸ್ತಾಪಿಸಿತ್ತು. ಈ ಯೋಜನೆ ಹರಿಯಾಣದಲ್ಲಿ ಯಶಸ್ವಿ ಕಂಡಿದೆ. ಕಳೆದ ಬಾರಿ ರಾಜ್ಯ ಸರ್ಕಾರ ₹ 200 ಕೋಟಿ ವೆಚ್ಚದಲ್ಲಿ ಈರುಳ್ಳಿ ಖರೀದಿಸಿ, ಕೈ ಸುಟ್ಟುಕೊಳ್ಳುವಂತಾಗಿತ್ತು. ಈ ಬಾರಿ ನೂತನ ವ್ಯವಸ್ಥೆಗೆ ₹ 50 ಕೋಟಿ ಒದಗಿಸಲಾಗಿದೆ. ಖರೀದಿ, ಉತ್ಪನ್ನ ಶೇಖರಣೆ, ಕಾಯ್ದಿಡುವ, ಮರಳಿ ಮಾರಾಟ ಮಾಡುವ ಯಾವುದೇ ಸಮಸ್ಯೆಗಳು ಈ ವ್ಯವಸ್ಥೆಯಲ್ಲಿ ಇರುವುದಿಲ್ಲ. ರೈತರಿಂದ ಕ್ವಿಂಟಲ್ ಈರುಳ್ಳಿಗೆ ಕನಿಷ್ಠ ₹ 500ರಿಂದ ₹ 700ರವರೆಗೆ ಬೆಲೆ ದೊರೆಯುವ ಭರವಸೆ ಇದೆ. ಇದರಿಂದ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರ ರೈತರಿಗೆ ಸಿಗುತ್ತಿರುವುದು ಆಶಾದಾಯಕ ಬೆಳವಣಿಗೆ’ ಎಂದರು.

‘ಕೃಷಿ ಬೆಲೆ ಆಯೋಗ ರೈತರ ಬೆಳೆಗಳಿಗೆ ಉತ್ತಮ ಧಾರಣೆ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಬೆಲೆ ವ್ಯತ್ಯಾಸ ಪದ್ಧತಿಯಿಂದ ರೈತರಿಗೆ ಅಷ್ಟೇ ಅಲ್ಲದೇ ಸ್ಥಳೀಯ ಎಪಿಎಂಸಿಗಳ ವ್ಯವಹಾರ ಹೆಚ್ಚುತ್ತದೆ. ಬೆಂಬಲ ಬೆಲೆಯ ನೀಡಲು ಸರ್ಕಾರವೇ ಖರೀದಿಗೆ ಇಳಿಯಬೇಕು ಎನ್ನುವ ಧೋರಣೆ ಬದಲಾಗಬೇಕು. ಸ್ಥಳೀಯ ಎಪಿಎಂಸಿಗಳು, ಅವುಗಳ ವ್ಯಾಪ್ತಿಯ ವರ್ತಕರು, ರೈತರ ಸಹಕಾರ ಸಂಘಗಳು ಇದರಲ್ಲಿ ಭಾಗವಹಿಸಬೇಕು. ರೈತರಿಗಾಗಿ ಇರುವ ಕೃಷಿ ಮಾರುಕಟ್ಟೆಯಲ್ಲಿ ರೈತರ ಬೆಳೆಗಳಿಗೆ ನ್ಯಾಯಯುತ, ಲಾಭದಾಯಕ ದರ ಸಿಗದೇ ಇರುವುದು ವಿಪರ್ಯಾಸ. ಇದನ್ನು ಸರಿಪಡಿಸಲು ಕನಿಷ್ಠ ಬೆಲೆ ನೀಡದೇ ವರ್ತಕರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಹಾಗೂ ಬೆಂಬಲ ಬೆಲೆ ಖರೀದಿಯಲ್ಲಿ ವರ್ತಕರಿಗೆ ಪ್ರೋತ್ಸಾಹಧನ ನೀಡುವ ಕುರಿತು ಆಯೋಗ ಪರಿಶೀಲನೆ ನಡೆಸುತ್ತಿದೆ’ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ‘ಗದಗ ಜಿಲ್ಲೆಯ ರೈತರು ಬೇರೆ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಈರುಳ್ಳಿ ಮಾರಾಟ ಮಾಡಿದ ಪ್ರಕರಣಗಳಲ್ಲಿ ವ್ಯತ್ಯಾಸ ದರ ಪಾವತಿಗೆ ಆಗ್ರಹಿಸುತ್ತಿರುವುದನ್ನು ಅಧ್ಯಕ್ಷರ ಗಮನಕ್ಕೆ ತಂದರು. ‘ಬೆಂಬಲ ಬೆಲೆಯಲ್ಲಿ ಒಟ್ಟು ₹ 37 ಕೋಟಿ ವೆಚ್ಚದಲ್ಲಿ 53 ಸಾವಿರ ಕ್ವಿಂಟಲ್‌ ಹೆಸರು ಖರೀದಿ ಮಾಡಲಾಗಿದೆ. ಈ ಪೈಕಿ ₹ 20 ಕೋಟಿ ಈಗಾಗಲೇ ಫಲಾನುಭವಿ ರೈತರ ಖಾತೆಗಳಿಗೆ ಜಮಾ ಆಗಿದ್ದು, ಬಾಕಿ ಉಳಿದ ₹ 17 ಕೋಟಿ ಹಣ ವಿತರಣೆ ಶೀಘ್ರವೇ ಪೂರ್ಣಗೊಳ್ಳಲಿದೆ’ ಎಂದರು.

‘ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 1.13 ಲಕ್ಷ ಹಾಗೂ ಹಿಂಗಾರಿನಲ್ಲಿ ಈವರೆಗೆ 79 ಸಾವಿರ ರೈತರು ಬೆಳೆವಿಮೆ ಮಾಡಿಸಿದ್ದಾರೆ. ವಿಮೆ ಪರಿಗಣಿಸುವ ಘಟಕವನ್ನು ಈಗಿರುವ ಹೋಬಳಿ ಬದಲಾಗಿ ಗ್ರಾಮ ಮಟ್ಟಕ್ಕೆ ಹಾಗೂ ಬೆಳೆ ಕಟಾವು ಪರೀಕ್ಷೆಯನ್ನು ವಿಮೆ ಮಾಡಿಸಿದ ರೈತರ ಜಮೀನುಗಳಲ್ಲಿ ನಡೆಸುವ ಪದ್ಧತಿ ಅಳವಡಿಸಲು ಹಾಗೂ ಬಿತ್ತನೆ ಹಂಗಾಮಿನ ಪೂರ್ವದಲ್ಲಿ ಬೆಳೆ ಸರಾಸರಿ ಇಳುವರಿ ಘೋಷಿಸಲು ರೈತರು ಒತ್ತಾಯಿಸುತ್ತಿದ್ದಾರೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ. ಬಾಲರೆಡ್ಡಿ ತಿಳಿಸಿದರು.

ಬೆಳೆ ವಿಮೆ ಕುರಿತ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಂಬಂಧಿತ ಇಲಾಖೆಗಳ, ಜಿಲ್ಲಾ ಲೀಡ್‌ ಬ್ಯಾಂಕ್, ನಬಾರ್ಡ್, ವಿಮಾ ಕಂಪನಿಗಳ ಪ್ರತಿನಿಧಿಗಳ ಸಮಿತಿ ಸಭೆಯನ್ನು ನಿಯಮಿತವಾಗಿ ನಡೆಲು ಆಯೋಗದ ಅಧ್ಯಕ್ಷರು ಸೂಚಿಸಿದರು.

ಮಾಜಿ ಶಾಸಕ ಡಿ.ಆರ್.ಪಾಟೀಲ, ಎಪಿಎಂಸಿ ಉಪಾಧ್ಯಕ್ಷ ಎನ್.ಎಸ್.ಹಿರೇಮನಿಪಾಟೀಲ, ಉಪವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ, ತೋಟಗಾರಿಕೆ ಉಪನಿರ್ದೇಶಕ ಪ್ರದೀಪ್, ಆಹಾರ ಇಲಾಖೆ ಉಪನಿರ್ದೇಶಕ ಅಶೋಕ ಕಲಘಟಗಿ ಮತ್ತು ಎಂ.ಆರ್.ನದಾಫ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT