ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹರಕ್ಷಕರ ಕಳಕಳಿ ಎಲ್ಲರಿಗೂ ಮಾದರಿ

40 ಗೃಹರಕ್ಷಕರಿಂದ ರಕ್ತದಾನ– ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಮೆಚ್ಚುಗೆ
Last Updated 16 ಡಿಸೆಂಬರ್ 2020, 2:14 IST
ಅಕ್ಷರ ಗಾತ್ರ

ಗದಗ: ‘ಗೃಹರಕ್ಷಕರು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತಿದ್ದು, ಇದೀಗ ರಕ್ತದಾನ ಮಾಡುವ ಮೂಲಕ ಸಂಕಷ್ಟದಲ್ಲಿ ಇರುವವರ ಬದುಕಿಗೆ ನೆರವಾಗುತ್ತಿರುವುದು ಶ್ಲಾಘನೀಯ’ ಎಂದು ಎಸ್‌ಪಿ ಯತೀಶ್ ಎನ್. ಅಭಿಪ್ರಾಯಪಟ್ಟರು.

ನಗರದ ರೋಟರಿ ಐಕೇರ್ ಸೆಂಟರ್‌ನಲ್ಲಿ ಮಂಗಳವಾರ ನಡೆದ ಗೃಹರಕ್ಷಕ ದಳದ ಗದಗ ಜಿಲ್ಲಾ ಘಟಕ ಹಾಗೂ ಗದಗ-ಬೆಟಗೇರಿ ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಅಖಿಲ ಭಾರತ ಗೃಹರಕ್ಷಕ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಗೃಹರಕ್ಷಕರು ಪೊಲೀಸರಷ್ಟೇ ಶ್ರಮದಿಂದ ಕೆಲಸ ಮಾಡುತ್ತಾರೆ. ಕಾನೂನು ಸುವ್ಯವಸ್ಥೆಯೊಂದಿಗೆ, ಶಿಸ್ತು ಕಾಯ್ದುಕೊಳ್ಳುವ ಇವರು ಸಂಕಷ್ಟದಲ್ಲಿರುವವರಿಗೆ ಉಪಯೋಗವಾಗಲೆಂದು ರಕ್ತದಾನ ಮಾಡುತ್ತಿದ್ದಾರೆ. ಇವರ ಸಾಮಾಜಿಕ ಕಳಕಳಿ ಇತರರಿಗೆ ಮಾದರಿ. ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳು ಗೃಹರಕ್ಷಕರಿಗೆ ದೊರೆಯುವಂತಾಗಲಿ’ ಎಂದರು.

ಐಎಂಎ ರಕ್ತನಿಧಿ ಮುಖ್ಯಸ್ಥ ಡಾ.ರಾಜಶೇಖರ ಪವಾಡಶೆಟ್ಟರ ಮಾತನಾಡಿ, ‘ರಕ್ತವನ್ನು ಕೃತಕವಾಗಿ ತಯಾರಿಸಲಾಗದು. ರಕ್ತ ಉತ್ಪಾದನೆಗೆ ಮಾನವ ಶರೀರವೇ ಸಂಪನ್ಮೂಲ. ಹಾಗಾಗಿ, ಆರೋಗ್ಯವಂತರು ವರ್ಷದಲ್ಲಿ ಕನಿಷ್ಠ ಎರಡು ಸಲವಾದರೂ ರಕ್ತದಾನ ಮಾಡಿ, ಆರೋಗ್ಯದ ಸಮತೋಲನ ಕಾಯ್ದುಕೊಳ್ಳಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ವಿಶ್ವನಾಥ ಯಳಮಲಿ ಮಾತನಾಡಿ, ‘ಗೃಹರಕ್ಷಕ ದಳದ ಜಿಲ್ಲಾ ಘಟಕವು ಪ್ರತಿ ವರ್ಷ ರಕ್ತದಾನ ಶಿಬಿರ ಆಯೋಜಿಸಿಕೊಂಡು ಬಂದಿದೆ. ಮುಂದಿನ ದಿನಗಳಲ್ಲೂ ಈ ಪರಂಪರೆ ಮುಂದುವರಿಸಿಕೊಂಡು ಹೋಗಲಾಗುವುದು’ ಎಂದು ಹೇಳಿದರು.

ಗದಗ ಜಿಲ್ಲಾ ಗೃಹರಕ್ಷಕ ದಳದ ಕೆ.ಸಿ.ವಕ್ಕಳದ, ಡಾ.ರಾಜಶೇಖರ ಬಳ್ಳಾರಿ, ವಿ.ಕೆ.ಗುರುಮಠ, ಮಹಾಂತೇಶ ಬಾತಾಖಾನಿ, ಶಿವಾಚಾರ್ಯ ಹೊಸಳ್ಳಿಮಠ, ಡಾ.ಉಪ್ಪಿನ, ಡಾ.ಉಗಲಾಟ,ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ ಧರ್ಮಾಯತ ಇದ್ದರು.

ರಕ್ತದಾನ ಶಿಬಿರದಲ್ಲಿ 40ಕ್ಕೂ ಹೆಚ್ಚು ಗೃಹರಕ್ಷಕರು ರಕ್ತದಾನ ಮಾಡಿದರು.

‘ಪೂರೈಕೆ ಅರ್ಧದಷ್ಟು ಮಾತ್ರ’

‘ಗದಗ ಜಿಲ್ಲೆಗೆ ವರ್ಷಕ್ಕೆ ಕನಿಷ್ಠ 10 ಸಾವಿರ ಯುನಿಟ್ ರಕ್ತದ ಅವಶ್ಯಕತೆ ಇದೆ. ಆದರೆ, ರಕ್ತ ಪೂರೈಕೆಯು ಇದರ ಅರ್ಧದಷ್ಟಿದೆ’ ಎಂದು ಡಾ.ರಾಜಶೇಖರ ಪವಾಡಶೆಟ್ಟರ ಹೇಳಿದರು.


‘ಸಂದಿಗ್ಧ ಪರಿಸ್ಥಿತಿಯಲ್ಲಿ ರಕ್ತಕ್ಕಾಗಿ ಪರಿತಪಿಸುವ ಬದಲು ಸಂಘ ಸಂಸ್ಥೆಗಳು, ವಿವಿಧ ಸಂಘಟನೆಗಳು ಬೃಹತ್ ರಕ್ತದಾನ ಶಿಬಿರಗಳನ್ನು ಏರ್ಪಡಿಸಬೇಕು. ಜನ್ಮದಿನ, ಮದುವೆ ವಾರ್ಷಿಕೋತ್ಸವ, ಜಾತ್ರಾ ಮಹೋತ್ಸವ ಸಂದರ್ಭದಲ್ಲಿ, ಎನ್.ಎಸ್.ಎಸ್, ಎನ್.ಸಿ.ಸಿ ಘಟಕಗಳು, ವಿದ್ಯಾರ್ಥಿ ಸಂಘಟನೆಗಳು ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ಈ ಗುರಿ ಮುಟ್ಟಲು ಸಹಕರಿಸಬೇಕು’ ಎಂದು ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT