ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೃಗಾಲಯ ಅಭಿವೃದ್ಧಿಗೆ ಇಚ್ಛಾಶಕ್ತಿ ಪ್ರದರ್ಶಿಸಿ’

ಗದಗ ಮೃಗಾಲಯಕ್ಕೆ ಸುವರ್ಣ ಸಂಭ್ರಮ: ಅಂಚೆ ಲಕೋಟೆ ಬಿಡುಗಡೆ, ನಾಟಕ ಪ್ರದರ್ಶನ
Last Updated 6 ಜನವರಿ 2023, 8:46 IST
ಅಕ್ಷರ ಗಾತ್ರ

ಗದಗ: ‘ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಬಿಂಕದಕಟ್ಟಿ ಕಿರು ಮೃಗಾಲಯಕ್ಕೆ ಮೈಸೂರು ಮೃಗಾಲಯದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಇದಕ್ಕೆ ಹಣದ ಅವಶ್ಯಕತೆಗಿಂತ ಸರ್ಕಾರ ಹಾಗೂ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಇಚ್ಛಾಶಕ್ತಿಯ ಅವಶ್ಯಕತೆ ಹೆಚ್ಚಾಗಿ ಬೇಕಿದೆ’ ಎಂದು ಶಾಸಕ ಎಚ್‌.ಕೆ.ಪಾಟೀಲ ತಿಳಿಸಿದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರದಿಂದ ಗದಗ ಮೃಗಾಲಯ ಆವರಣದಲ್ಲಿ ಗುರುವಾರ ನಡೆದ ಸುವರ್ಣ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗದಗ ಮೃಗಾಲಯವು ನಿರಂತರ 50 ವರ್ಷಗಳನ್ನು ಪೂರ್ಣಗೊಳಿಸುವ ಮೂಲಕ ಅಭಿವೃದ್ಧಿಯೆಡೆಗೆ ನಡೆದಿರುವುದೇ ಖುಷಿಯ ಸಂಗತಿ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. 2021–22ನೇ ಸಾಲಿನಲ್ಲಿ 1.15 ಲಕ್ಷ ಜನ ಭೇಟಿ ನೀಡಿದ್ದರು. 2022–23ನೇ ಸಾಲು ಪೂರ್ಣಗೊಳ್ಳಲು ಇನ್ನೂ 100 ದಿನಗಳು ಬಾಕಿಯಿದ್ದು, ಈ ನಡುವೆಯೇ ಗದಗ ಮೃಗಾಲಯಕ್ಕೆ 1.54 ಲಕ್ಷ ಜನ ಭೇಟಿ ನೀಡಿದ್ದಾರೆ. ಇದೊಂದು ಉತ್ತಮ ಬೆಳವಣಿಗೆಯಾದ್ದು, ಈ ಮೃಗಾಲಯದಲ್ಲಿ ಇನ್ನೂ ಹೆಚ್ಚಿನ ಕಾರ್ಯ ಚಟುವಟಿಕೆಗಳು ‍ಪ್ರಾರಂಭಗೊಳ್ಳಬೇಕು’ ಎಂದು ಹೇಳಿದರು.

‘ಮೃಗಾಲಯಗಳು ಪ್ರಾಣಿಗಳ ರಕ್ಷಣೆಗಷ್ಟೇ ಸೀಮಿತವಾಗಿರುವುದಿಲ್ಲ. ಮಕ್ಕಳ ಜ್ಞಾನವೃದ್ಧಿಗೂ ನೆರವಾಗುತ್ತವೆ. ಮೃಗಾಲಯಗಳ ಮೂಲಕ ಮಕ್ಕಳಿಗೆ ವಿಜ್ಞಾನ ಮತ್ತು ಪರಿಸರದ ಬಗ್ಗೆ ತಿಳಿಸಿಕೊಡಲು ಸಾಧ್ಯವಿದೆ. ಗದಗ ಜಿಲ್ಲೆಯ ನೈಸರ್ಗಿಕ ಸಂಪತ್ತನ್ನು ಬಳಸಿಕೊಳ್ಳುತ್ತಿರುವ ಪವನ್‌ ವಿದ್ಯುತ್‌ ಕಂಪನಿಯವರು ಇಲ್ಲಿನ ಪ್ರಾಣಿಗಳನ್ನು ದತ್ತು ಪಡೆಯುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಒತ್ತಾಯಿಸಬೇಕು. ಜತೆಗೆ ಮೃಗಾಲಯ ಅಭಿವೃದ್ಧಿ
ಪ್ರಾಧಿಕಾರದವರು ಬೆಂಗಳೂರು, ಮೈಸೂರಿನಲ್ಲಿರುವ ಕಂಪನಿಗಳವರು ಇಲ್ಲಿನ ಪ್ರಾಣಿಗಳನ್ನು ದತ್ತು ಪಡೆಯಲು ನೆರವಾಗಬೇಕು’ ಎಂದು ಸಲಹೆ ನೀಡಿದರು.

‘ಭೀಷ್ಮಕೆರೆಯಿಂದ ಗದಗ ಮೃಗಾಲಯಕ್ಕೆ ಪುಟಾಣಿ ರೈಲಿನ ವ್ಯವಸ್ಥೆ ಮಾಡುವ ಯೋಜನೆ ಕಾರಣಾಂತರಗಳಿಂದ ನಿಂತು ಹೋಯಿತು. ಒಂದೊಮ್ಮೆ ಪುಟಾಣಿ ರೈಲಿನ ವ್ಯವಸ್ಥೆ ಆದರೆ, ಪ್ರವಾಸಿಗರ ಸಂಖ್ಯೆ ದ್ವಿಗುಣಗೊಳ್ಳುವುದರಲ್ಲಿ ಸಂಶಯವಿಲ್ಲ’ ಎಂದು ಹೇಳಿದರು.

ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ.ರವಿ ಮಾತನಾಡಿ, ‘ಗದಗ ಮೃಗಾಲಯ ಅಭಿವೃದ್ಧಿಗೆ ಸಾಕಷ್ಟು ಮಂದಿ ಕೈಜೋಡಿಸಿದ್ದಾರೆ. ನಿರ್ಮಾಣಕ್ಕೆ ಅನೇಕರು ಸಹಕರಿಸಿದ್ದಾರೆ. ಸಾರ್ವಜನಿಕರ ಭೇಟಿಯಿಂದ ಪಡೆಯಲಾಗುವ ಪ್ರವೇಶ ದರದಿಂದ ₹1 ಕೋಟಿಯಷ್ಟು ಹಣ ಸಿಗುತ್ತಿದೆ. ಆದರೆ, ವಾರ್ಷಿಕ ನಿರ್ವಹಣೆಗೆ ₹2 ಕೋಟಿ ವೆಚ್ಚವಾಗಲಿದ್ದು ಸರ್ಕಾರದ ಸಹಾಯಧನ ಹಾಗೂ ಸಾರ್ವಜನಿಕರ ದೇಣಿಗೆಯಿಂದ ನಿರ್ವಹಿಸಲಾಗುತ್ತಿದೆ’ ಎಂದರು.

ಇದೇ ಸಂದರ್ಭದಲ್ಲಿ ಗದಗ ಮೃಗಾಲಯದ ವಿಶೇಷ ಅಂಚೆ ಲಕೋಟೆ ಹಾಗೂ ಮೃಗಾಲಯದ ವಾರ್ಷಿಕ ಟೇಬಲ್ ಕ್ಯಾಲೆಂಡರ್ ಅನಾವರಣಗೊಳಿಸಲಾಯಿತು.

ಮೃಗಾಲಯದಲ್ಲಿ ಕಾರ್ಯನಿರ್ವಹಿಸಿದ ಉನ್ನತ ಅಧಿಕಾರಿಗಳು, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಸುವರ್ಣ ಮಹೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನವರಂಗ ಸಂಸ್ಥೆಯಿಂದ ವನ್ಯಜೀವಿ ಸಂರಕ್ಷಣೆ ಕುರಿತ ನಾಟಕ ಪ್ರದರ್ಶನಗೊಂಡಿತು.

ಮಾಜಿ ಸಚಿವ ಎಸ್.ಎಸ್.ಪಾಟೀಲ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ಧು ಪಲ್ಲೇದ, ಮೃಗಾಲಯ ಪ್ರಾಧಿಕಾರದ ಸದಸ್ಯ ಇ.ಜ್ಯೋತಿ ರೇಚಣ್ಣ, ಪೋಸ್ಟ್ ಮಾಸ್ಟರ್ ಜನರಲ್ ಡಾ. ಎನ್.ವಿನೋದಕುಮಾರ್, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಸಿಇಒ ಸುಶೀಲಾ ಬಿ., ಬೆಳಗಾವಿ ವೃತ್ತದ ಸಿಸಿಎಫ್‌ ಮಂಜುನಾಥ ಚವ್ಹಾಣ, ಧಾರವಾಡ ವೃತ್ತದ ಸಿಸಿಎಫ್‌ ಡಿ. ಯತೀಶ್‌ ಕುಮಾರ್, ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಯಶ್‌ಪಾಲ್ ಕ್ಷೀರಸಾಗರ, ಧಾರವಾಡ ಡಿಸಿಎಫ್‌ ಸೋನಲ್ ವೃಷ್ಟಿ, ಎಸಿಎಫ್‌ ಅಶೋಕ ಎ.ಎಚ್., ಆರ್‌ಎಫ್‌ಒ ರಾಮಪ್ಪ ಪೂಜಾರ ಇದ್ದರು.

ಪಂಚಾಕ್ಷರಿ ಗವಾಯಿ ಸಂಗೀತ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಗೂ ಪ್ರಾರ್ಥನಾ ಗೀತೆ ಪ್ರಸ್ತುತಪಡಿಸಿದರು.

ಮೃಗಾಲಯವು 50 ವರ್ಷಗಳ ಇತಿಹಾಸ ಸೃಷ್ಟಿಸಿದೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಮೃಗಾಲಯದಲ್ಲಿ ಮಕ್ಕಳ ರೈಲು ನಿರ್ಮಿಸಲು ಆಸಕ್ತಿ ಹೊಂದಿದ್ದು ಇದಕ್ಕೆ ಮೃಗಾಲಯದಿಂದ ಸಹಕಾರ ನೀಡಲಾಗುವುದು

ಎಂ.ಶಿವಕುಮಾರ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ

ಗದಗ ಮೃಗಾಲಯವು 1972ರಲ್ಲಿ ಕೇವಲ 4 ಪ್ರಾಣಿಮನೆಗಳಿಂದ ಪ್ರಾರಂಭವಾಗಿ, ಇಂದು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆ ಜತೆಗೆ ವಿಸ್ತೀರ್ಣ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ

ದೀಪಿಕಾ ಬಾಜಪೇಯಿ, ಡಿಸಿಎಫ್‌ ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT