ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತಾಳ ಕಂಡಿದ್ದ ಅಂತರ್ಜಲ ಮತ್ತೆ ಏರಿಕೆ

ಮುಂಗಾರು ಹಂಗಾಮು– ಭರ್ತಿಯಾಗಿರುವ ಕೆರೆಗಳು, ಸಮೃದ್ಧ ನೀರು
Last Updated 23 ನವೆಂಬರ್ 2020, 3:51 IST
ಅಕ್ಷರ ಗಾತ್ರ

ಗದಗ: ಈ ವರ್ಷ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು ಪ್ರಮುಖ ಕೆರೆ– ಕಟ್ಟೆಗಳು ತುಂಬಿವೆ. ನರೇಗಾ ಯೋಜನೆ ಅಡಿ ನಿರ್ಮಾಣಗೊಂಡಿರುವ ಕೃಷಿ ಹೊಂಡ ಹಾಗೂ ಚೆಕ್‌ ಡ್ಯಾಂಗಳಲ್ಲಿ ಕೂಡ ನೀರು ಸಂಗ್ರಹಗೊಂಡಿದ್ದು ಅಂತರ್ಜಲ ಮಟ್ಟ ವೃದ್ಧಿಸಿದೆ. ಗದಗ ನಗರದಲ್ಲಿರುವ ಭೀಷ್ಮ ಕೆರೆ ತುಂಬಿರುವುದರಿಂದ ಇಲ್ಲಿನ ಬಹುತೇಕ ಕೊಳವೆಬಾವಿಗಳು ಮರುಪೂರಣಗೊಂಡಿವೆ. ಕೃಷಿ ಚಟುವಟಿಕೆಗಳಿಗೆ ಜೀವಕಳೆ ಬಂದಿದ್ದರೆ; ಕುಡಿಯುವ ನೀರಿನ ಸಮಸ್ಯೆ ಪರಿಹಾರಗೊಂಡಿದೆ.

ಮುಂಗಾರು ಸಂದರ್ಭದಲ್ಲಿ ಜಿಲ್ಲೆಯ ನರಗುಂದ ತಾಲ್ಲೂಕಿನಲ್ಲಿ ಪ್ರವಾಹ ಉಂಟಾಗಿತ್ತು. ಇದರಿಂದಾಗಿ ಜನರು ಸಾಕಷ್ಟು ನೋವು ಅನುಭವಿಸಿದರು. ಬೆಳೆಹಾನಿ ಆಗಿದ್ದರಿಂದಾಗಿ ನಷ್ಟ ಅನುಭವಿಸಿದರು. ನರಗುಂದ ತಾಲ್ಲೂಕಿನ ಕೊಣ್ಣೂರು, ವಾಸನ, ಲಖಮಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಈಗಲೂ ನೀರು ಎಂದರೆ ಬೆಚ್ಚಿ ಬೀಳುತ್ತಾರೆ. ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಿದ್ದು, ಮಲಪ್ರಭೆ ಅವರಲ್ಲಿ ಇಂದಿಗೂ ಭೀತಿ ಮೂಡಿಸುತ್ತಲೇ ಇದ್ದಾಳೆ.

‘ಪಟ್ಟಣದಲ್ಲಿ ಕೆರೆಗಳ ನಿರ್ವಹಣೆ ಮಾಡಲಾಗುತ್ತಿದೆ. ಮೂರು ಕೆರೆ ಭರ್ತಿಯಾಗಿವೆ, ಅವುಗಳ ನೀರು ಬಳಕೆ ಮಾಡಲಾಗುತ್ತಿದೆ. ಅಂತರ್ಜಲದ ಪ್ರಮಾಣವೂ ಹೆಚ್ಚಾಗಿದೆ. ಇದು ಕೆಲವೆಡೆ ಭೂಕುಸಿತಕ್ಕೆ ಕಾರಣವಾಗಿದೆ. ಇದರಿಂದ ಕೆಂಪಗೆರೆ ನೀರನ್ನು ಖಾಲಿ ಮಾಡಲಾಗಿದೆ. ಕೆರೆಗಳ ನಿರ್ವಹಣೆಗೆ ಎಲ್ಲ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ’ ಎನ್ನುತ್ತಾರೆ ನರಗುಂದ ಪುರಸಭೆ ಮುಖ್ಯಾಧಿಕಾರಿ ಎಸ್.ಎಸ್.ಬ್ಯಾಳಿ.

‘ಗದಗ ನಗರದಲ್ಲಿರುವ ಭೀಷ್ಮ ಕೆರೆಯನ್ನು ನಗರಸಭೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದೆ. ಈ ಕೆರೆ ನಿರ್ವಹಣೆಗೆಂದೇ ₹1 ಕೋಟಿ ಹಣ ಮೀಸಲಿಡಲಾಗಿದೆ. ಆದರೆ, ಕೆರೆ ಅತಿಕ್ರಮ ಣಕ್ಕೆ ಸಂಬಂಧಿಸಿದ ವ್ಯಾಜ್ಯ ಕೋರ್ಟ್‌ನಲ್ಲಿರುವುದರಿಂದ ಈಚಿನ ದಿನಗಳಲ್ಲಿ ಕೆರೆ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳು ನಡೆದಿಲ್ಲ. ಕೆಲವು ವರ್ಷಗಳ ಹಿಂದಷ್ಟೇ
ಹೂಳು ತೆಗೆಸಿದ್ದರಿಂದಾಗಿಹೆಚ್ಚಿನ ಸಮಸ್ಯೆ ಇಲ್ಲ’ ಎನ್ನುತ್ತಾರೆ ನಗರಸಭೆ ಪೌರಾಯುಕ್ತ ರಮೇಶ್‌ ಜಾಧವ.

‘ಭೀಷ್ಮ ಕೆರೆಯಿಂದಾಗಿ ಈ ಭಾಗದಲ್ಲಿನ ಅಂತರ್ಜಲ ಮಟ್ಟ ಗಣನೀಯ ಏರಿಕೆ ಕಂಡಿದೆ. ಬತ್ತಿ ಹೋಗಿದ್ದ ಕೊಳವೆಬಾವಿಗಳಲ್ಲಿ ನೀರಿನ ಸೆಲೆ ಬಂದಿದೆ.ನಗರಸಭೆಗೆ ಸೇರಿರುವ ಕೊಳವೆಬಾವಿಗಳೂ ಉತ್ತಮವಾಗಿ ನೀರು ಕೊಡುತ್ತಿವೆ. ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆಇಲ್ಲ. ಅಂತೆಯೇ, ಸುತ್ತಮುತ್ತಲಿನಜಮೀನುಗಳಲ್ಲಿ ಇರುವ ಕೊಳವೆಬಾವಿಗಳು ಕೂಡ ಮರುಪೂರಣಗೊಂಡು ಕೃಷಿ ಚಟುವಟಿಕೆಗಳಿಗೆ ಬಲ ನೀಡಿವೆ’ ಎಂದು ಹೇಳಿದರು.

ಕೆರೆಗಳು ಭರ್ತಿ, ಭೀತಿಯಲ್ಲಿ ಜನತೆ:

ನರಗುಂದ ಪಟ್ಟಣದಲ್ಲಿ 7 ಪ್ರಮುಖ ಕೆರೆಗಳು ಇದ್ದು ಅವುಗಳಲ್ಲಿ ಮೂರು ಕೆರೆಗಳು ಭರ್ತಿಯಾಗಿವೆ. ಅತಿಯಾದ ಮಳೆ ಹಾಗೂ ಕೆರೆಗಳ ಭರ್ತಿಯಿಂದಾಗಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಕೊಳವೆಬಾವಿಗಳು ರಭಸದಿಂದ ನೀರು ಚಿಮ್ಮಿಸುತ್ತಿವೆ. ಆದರೆ, ಈ ಮಟ್ಟಿಗಿನ ಅಂತರ್ಜಲ ಮಟ್ಟ ಜನರಲ್ಲಿ ಭೀತಿ ಮೂಡಿಸಿದೆ.

ಅಂತರ್ಜಲ ಹೆಚ್ಚಿದಂತೆ ಭೂಕುಸಿತ ಹೆಚ್ಚಾಗುವ ಪರಿಣಾಮ ಮಳೆ ಎಂದರೆ ಇಲ್ಲಿನ ಜನರು ಭಯ ಬೀಳುತ್ತಾರೆ. ಇಡೀ ಪಟ್ಟಣಕ್ಕೆ ನೀರು ಪೂರೈಸುತ್ತಿದ್ದ ಕೆಂಪಗೆರೆ ಭರ್ತಿಯಾಗಿತ್ತು. ಇದರಿಂದ ಅಂತರ್ಜಲ ಹೆಚ್ಚುತ್ತದೆ ಎಂದೇ ನೀರನ್ನು ಈಗ ಸಂಪೂರ್ಣ ಖಾಲಿ ಮಾಡಲಾಗಿದೆ. ಇಲ್ಲಿ ನೀರು ಇದ್ದರೆ ಸುತ್ತಲಿನ ಕೊಳವೆಬಾವಿಗಳು ಮರುಪೂರಣಗೊಳ್ಳುತ್ತಿದ್ದವು. ಆದರೆ, ಈಗ ಕೆರೆಗಳು ಇದ್ದು ಇಲ್ಲದಂತಾಗಿದೆ. ಕೆಲವು ಕೆರೆ ದಂಡೆಗಳು ವಸತಿ ಪ್ರದೇಶಗಳಾಗಿವೆ.

ಪಡುವಗೊಂಡನ ಕೆರೆ, ಸೋಮಾಪೂರ, ತುರಂಗಬಾವಿ ಕೆರೆ ಭರ್ತಿಯಾಗಿವೆ. ಇಲ್ಲಿಗೆ ಸುತ್ತಮುತ್ತಲಿನ ಕೆರೆಗಳು ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಉಳಿದಂತೆ ಹಾಲಭಾವಿ ಕೆರೆ, ತೋಂಟದ ಕೆರೆ, ಬಯಲು ಬಸವಣ್ಣನ ಕೆರೆ, ಹೊಸೂರು ಕೆರೆ ನೀರು ಬರದ ಸ್ಥಿತಿ ಇದೆ. ಇವುಗಳ ದಂಡೆ ಪ್ರದೇಶ ಈಗ ಜನವಸತಿ ಪ್ರದೇಶಗಳಾಗಿವೆ.

ಅಂತರ್ಜಲ ವೃದ್ಧಿಗೆ ಕೃಷಿಹೊಂಡಗಳ ಬಲ:

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಜಿಲ್ಲೆಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾವಿರಾರು ಮಂದಿ ಕೆರೆಗಳ ಹೂಳೆತ್ತುವ ಕಾರ್ಯ ಮಾಡಿದ್ದರು. ಈಗ ಅದಕ್ಕೆ ಫಲ ದೊರಕಿದ್ದು ಅನೇಕ ಕಡೆಗಳಲ್ಲಿ ಜೀವಜಲ ಉಕ್ಕುತ್ತಿದೆ.

ಕಳೆದೆರಡು ವರ್ಷಗಳಲ್ಲಿ ನರೇಗಲ್‌ ಹೋಬಳಿಯಾದ್ಯಂತ ಹರಿಯುವ ಹಳ್ಳಗಳಿಗೆ ಚೆಕ್‌ಡ್ಯಾಂಗಳನ್ನು, ಹೊಲಗಳ ಇಳಿಜಾರಿಗೆ ಕೃಷಿಹೊಂಡಗಳನ್ನು ಹಾಗೂ ಅಲ್ಲಲ್ಲಿ ಒಳಗಟ್ಟಿಗಳನ್ನು, ಪರಸುಗಳನ್ನು ನಿರ್ಮಾಣ ಮಾಡಿದ್ದರಿಂದ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿದೆ.

2018–19 ಹಾಗೂ 2019–20ರಲ್ಲಿ ತಾಲ್ಲೂಕಿನಲ್ಲಿ 1,545 ಕೃಷಿ ಹೊಂಡಗಳು, 23 ಚೆಕ್‌ಡ್ಯಾಂಗಳನ್ನು ನಿರ್ಮಾಣಗೊಂಡಿವೆ. ಇದರ ಫಲವಾಗಿ ಕೃಷಿ ಜಮೀನುಗಳಲ್ಲಿನ ಸಾವಿರಾರು ಕೊಳವೆ ಬಾವಿಗಳು ಮರುಪೂರಣಗೊಂಡಿವೆ. ಕುರಿಗಾಯಿಗಳಿಗೆ, ಕೃಷಿ ಕಾರ್ಮಿಕರಿಗೆ, ವನ್ಯ ಜೀವಿಗಳಿಗೆ, ಪ್ರಾಣಿ ಪಕ್ಷಿಗಳಿಗೆ ವರದಾನವಾಗಿವೆ.

ಕೃಷಿ ಇಲಾಖೆಯವರು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇಂಗುಗುಂಡಿ ನಿರ್ಮಾಣ, ಕೆರೆಗಳ ಅಭಿವೃದ್ಧಿ, ಬದು ನಿರ್ಮಾಣ ಹೀಗೆ ಹತ್ತು ಹಲವು ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದರ ಫಲವಾಗಿ ಗ್ರಾಮೀಣ ಭಾಗದಲ್ಲಿ ನೀರಿನ ಹಾಹಾಕಾರಕ್ಕೆ ಸ್ವಲ್ಪ ಮುಕ್ತಿ ಲಭಿಸಿದೆ.

ಕೃಷಿ ಜಮಿನುಗಳಲ್ಲಿನ ಸಾವಿರಾರು ಕೊಳವೆ ಬಾವಿಗಳು ಮರುಪೂರಣಗೊಂಡು ಸಮೃದ್ಧ ನೀರಿನ ಇಳುವರಿ ಕೊಡುತ್ತಿವೆ. ನರೇಗಲ್ ಭಾಗದ ಗಡ್ಡಿಹಳ್ಳ, ಕಲ್ಲಹಳ್ಳ ಸೇರಿದಂತೆ ಸುತ್ತುಮುತ್ತಲಿನ ಹಳ್ಳಗಳಲ್ಲಿ, ಸರುವುಗಳಲ್ಲಿ ರಾಷ್ಟ್ರಪಕ್ಷಿ ನವಿಲುಗಳ ಸಂಖ್ಯೆಯೂ ಏರಿಕೆಯಾಗಿದೆ.

ಗದಗ ಜಿಲ್ಲಾ ಪಂಚಾಯ್ತಿ ಜಲಾಯನ ಹಾಗೂ ಕೆರೆ ಸಂಜೀವಿನಿ ಯೋಜನೆಯಡಿ ಗದಗ ತಾಲ್ಲೂಕಿನ ಶೀತಾಲಹರಿ, ನಭಾಪೂರ, ಕಣವಿ ಹಾಗೂ ಚಿಂಚಲಿ ಗ್ರಾಮದಲ್ಲಿ ಒಟ್ಟು 4 ಕೆರೆಗಳನ್ನು ₹67 ಲಕ್ಷದಲ್ಲಿ ಅಭಿವೃದ್ದಿಪಡಿಸಲಾಗಿದ್ದು ಇದರಲ್ಲಿ 3 ಕೆರೆಗಳು ಪೂರ್ಣಗೊಂಡು ಮಳೆ ನೀರು ತುಂಬಿಕೊಂಡಿವೆ ಎಂದು ಪಿಆರ್‌ಡಿ ಉಪ ವಿಭಾಗದ ಸಹಾಯಕ ಎಂಜನಿಯರ್‌ ಬಿ. ಆರ್.ದೇಶಪಾಂಡೆ ತಿಳಿಸಿದರು.

ಅಂತರ್ಜಲ ಹೆಚ್ಚಿಸಿದ ಚೆಕ್ ಡ್ಯಾಂಗಳು

ಲಕ್ಷ್ಮೇಶ್ವರ: ಈ ವರ್ಷ ತಾಲ್ಲೂಕಿನಾದ್ಯಂತ ಸುರಿದ ಮುಂಗಾರು ಮಳೆಗೆ ಪ್ರಮುಖ ನೀರಿನ ಮೂಲಗಳಾದ ಚೆಕ್ ಡ್ಯಾಂಗಳು ಭರ್ತಿ ಆಗಿವೆ. ತಾಲ್ಲೂಕಿನಲ್ಲಿ ಸಾಕಷ್ಟು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದ್ದು ಒಡಲ ತುಂಬ ನೀರು ತುಂಬಿಕೊಂಡು ಕಂಗೊಳಿಸುತ್ತಿವೆ.

ಮಾಗಡಿಯಿಂದ ಹರಿಯುವ ದೊಡ್ಡ ಹಳ್ಳಕ್ಕೆ ಒಟ್ಟು 18 ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದ್ದು ಸದ್ಯ ಅವು ನೀರಿನಿಂದ ಭರ್ತಿ ಆಗಿವೆ. ಅದರಂತೆ ಸಮೀಪದ ಶೆಟ್ಟಿಕೇರಿ ಗ್ರಾಮದ ಬೃಹತ್ ಕೆರೆಯೂ ತುಂಬಿದೆ.

ಚೆಕ್ ಡ್ಯಾಂಗಳು ತುಂಬಿರುವುದರಿಂದ ಅಂತರ್ಜಲಮಟ್ಟ ಹೆಚ್ಚಾಗಿದ್ದು ಸುತ್ತಮುತ್ತಲಿನ ರೈತರ ನೂರಾರು ಕೊಳವೆಬಾವಿಗಳು ಭರ್ತಿ ಆಗಿವೆ. ಮಳೆ ಆಗದಿದ್ದರೆ ಇಷ್ಟೊತ್ತಿಗೆ ರೈತರು ನೀರಿಗಾಗಿ ಪರದಾಡಬೇಕಾಗಿತ್ತು. ಆದರೆ ಈ ವರ್ಷ ಅಂಥ ಸಮಸ್ಯೆ ಎದುರಾಗುವುದಿಲ್ಲ ಎಂದು ರೈತರೇ ಹೇಳುತ್ತಿದ್ದಾರೆ.

ಚೆಕ್ ಡ್ಯಾಂಗಳು ತುಂಬಿರುವುದರಿಂದ ದನಕರು ಮತ್ತು ಕುರಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ ಸಣ್ಣಪುಟ್ಟ ಕೆರೆಗಳು ಮಾತ್ರ ಈಗಲೂ ಖಾಲಿ ಇವೆ.


ಬತ್ತಿದ್ದ ಕೊಳವೆಬಾವಿಗಳಲ್ಲಿ ನೀರು

ಮುಂಡರಗಿ: ತಾಲ್ಲೂಕಿನ ಹಮ್ಮಿಗಿ ಗ್ರಾಮದ ಬಳಿ ನಿರ್ಮಿಸಿರುವ ಶಿಂಗಟಾಲೂರ ನೀರಾವರಿ ಯೋಜನೆಯ ಬ್ಯಾರೇಜು, ತಾಲ್ಲೂಕಿನಾದ್ಯಂತ ನಿಮಾರ್ಣಗೊಂಡಿರುವ 180ಕ್ಕಿಂತಲೂ ಹೆಚ್ಚು ಚೆಕ್ ಡ್ಯಾಂಗಳು ಹಾಗೂ ಮಳೆಗಾಲದಲ್ಲಿ ತುಂಗಭದ್ರಾ ನದಿ ನೀರಿನಿಂದ ಭರ್ತಿಯಾಗುವ ತಾಲ್ಲೂಕಿನ ವಿವಿಧ ಕೆರೆಗಳು ಇಂದು ನೂರಾರು ಕೊಳವೆಬಾವಿಗಳ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕಾರಣವಾಗಿವೆ.

ಪಟ್ಟಣದ ಹಿರೇಹಳ್ಳ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ಮುಂದೆ ಹರಿದಿರುವ ಹಳ್ಳಗಳಿಗೆ ನೂರಾರು ಚೆಕ್‌ಡ್ಯಾಂ ನಿರ್ಮಿಸಲಾಗಿದೆ. ಇಂದು ಬಹುತೇಕ ಚೆಕ್‌ಡ್ಯಾಂಗಳು ಮಳೆ ನೀರಿನಿಂದ ಭರ್ತಿಯಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಬತ್ತಿ ಹೋಗಿದ್ದ ಕೊಳವೆಬಾವಿಗಳಲ್ಲಿ ಭರಪೂರ ನೀರು ದೊರೆಯುತ್ತಿದೆ. ಚೆಕ್ ಡ್ಯಾಂಗಳ ಅಕ್ಕಪಕ್ಕದ ಜಮೀನುಗಳ ಕೊಳವೆಬಾವಿಗಳನ್ನು ಹೊಂದಿದ್ದ ರೈತರು ಇಂದು ವರ್ಷದಲ್ಲಿ ಎರಡು ಬಾರಿ ಸಮೃದ್ಧ ಫಸಲು ತಗೆಯುತ್ತಿದ್ದಾರೆ. ತುಂಗಭದ್ರಾ ನದಿಗೆ ಹರಿದುಬರುವ ನೀರು ವ್ಯರ್ಥವಾಗಿ ಹರಿದು ಹೋಗಬಾರದು ಎಂದು ಬೃಹತ್ ಕಾಲುವೆಗಳ ಮೂಲಕ ತಾಲ್ಲೂಕಿನ ಕೆರೆಗಳನ್ನು ತುಂಬಿಕೊಳ್ಳಲಾಗುತ್ತದೆ. ಇದರಿಂದಾಗಿ ಕೆರೆಯ ಅಕ್ಕಪಕ್ಕದ ಜಮೀನುಗಳ ಕೊಳವೆ ಬಾವಿಗಳು ನೀರಿನಿಂದ ತುಂಬುತ್ತಿವೆ.

ತಾಲ್ಲೂಕಿನ ಬಸಾಪುರ, ಶಿರೂಳ ಕೆರೆಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ಆದರೆ ಕಾಲುವೆಗಳು ಹೂತು ಹೋಗಿರುವುದರಿಂದ ರೈತರ ಜಮೀನುಗಳಿಗೆ ನೀರು ಹರಿಯದಂತಾಗಿದೆ.

ಒತ್ತುವರಿ ತೆರವು

ಮುಳಗುಂದ : ಸ್ಥಳೀಯ ಪಟ್ಟಣ ಪಂಚಾಯ್ತಿ ಮಾಲ್ಕಿಯ ಅಬ್ಬಿಕೆರೆ, ಮೊಕಾಶಿ ಕೆರೆ, ಕೆಂಪಿ ಕೆರೆ, ಬಯಲು ಬಸವಣ್ಣ ಕೆರೆ, ಕಣವಿ ದಾರಿ ಕೆರೆ ಹಾಗೂ ಪಟ್ಟಣಶೆಟ್ಟಿ ಕೆರೆ ಸೇರಿದಂತೆ ಒಟ್ಟು 7 ಕೆರೆಗಳಿದ್ದು 56 ಎಕರೆ ವಿಸ್ತೀರ್ಣ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ ಪುನಶ್ಚೇತನ ಹಾಗೂ ಒತ್ತುವರಿ ತೆರವು ಕಾರ್ಯಾಚರಣೆ ಕಾಮಗಾರಿಯನ್ನು ಜಿಲ್ಲಾಡಳಿತದ ನೆರವಿನೊಂದಿಗೆ ಪಟ್ಟಣ ಪಂಚಾಯ್ತಿ ಕೈಗೊಂಡಿದೆ.

ರಾಷ್ಟ್ರೀಯ ಹಸಿರು ನ್ಯಾಯಾಪೀಠ, ರಾಷ್ಟ್ರೀಯ ಜಲನೀತಿ ಆಯೋಗ ಹಾಗೂ ಕರ್ನಾಟಕ ಲೋಕಾಯುಕ್ತ ನ್ಯಾಯಾಲಯದ ನಿರ್ದೇಶನದ ಅನ್ವಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಈಗಾಗಲೇ ಪ್ರತಿಯೊಂದು ಕೆರೆಯನ್ನು ಸರ್ವೇ ನಡೆಸಿ ಗಡಿ ಗುರುತಿಸಲಾಗಿದೆ. ಇದರಲ್ಲಿ ಪಟ್ಟಣಶೆಟ್ಟಿ ಕೆರೆಯನ್ನ 2019 ಮಾರ್ಚ್‌ನಲ್ಲಿ ಸರ್ವೇ ನಡೆಸಿ 1 ಎಕರೆಗೂ ಹೆಚ್ಚು ಒತ್ತುವರಿ ಜಾಗವನ್ನು ತೆರವು ಮಾಡಿಸಲಾಗಿತ್ತು.

ಒತ್ತುವರಿ ಹಾಗೂ ನೀರಿನ ಮೂಲವನ್ನ ಹೂಳು ಎತ್ತಿದ ನಂತರ ಅಬ್ಬಿಕೆರೆ ಹಾಗೂ ಕಣವಿ ದಾರಿ ಕೆರೆಗಳು ಮಳೆನೀರಿನಿಂದ ಭರ್ತಿಯಾಗಿವೆ. ಇವುಗಳ ಸುತ್ತಮುತ್ತಲಿನ ಕೊಳವೆ ಬಾವಿಗಳು ಮರುಜೀವ ಪಡೆದುಕೊಂಡಿವೆ. ಇನ್ನೂ ಕೆರೆಗೆ ಬರುವ ನೀರಿನ ಮೂಲ ಗುರುತಿಸಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದರಿಂದ ಅಂತರ್ಜಲ ವೃದ್ಧಿಯ ಜತೆಗೆ ನೀರಿನ ಸಂರಕ್ಷಣೆಯಾಗಲಿದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಂ.ಎಸ್.ಬೆಂತೂರ ತಿಳಿಸಿದರು.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಬಸವರಾಜ ಹಲಕುರ್ಕಿ, ಚಂದ್ರು ಎಂ.ರಾಥೋಡ್‌, ಚಂದ್ರಶೇಖರ ಭಜಂತ್ರಿ, ಕಾಶೀನಾಥ ಬಿಳಿಮಗ್ಗದ, ನಾಗರಾಜ ಎಸ್‌.ಹಣಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT