ಗಜೇಂದ್ರಗಡ: ‘ದೇಶಾದ್ಯಂತ ಯುವ ಜನತೆ ಬಿಜೆಪಿಯತ್ತ ವಾಲುತ್ತಿದ್ದು, ಯುವ ಮೋರ್ಚಾದ ಪ್ರತಿಯೊಬ್ಬ ಪದಾಧಿಕಾರಿಯೂ ಕನಿಷ್ಟ 250 ಜನರಿಗೆ ಬಿಜೆಪಿ ಸದಸ್ಯತ್ವ ಕೊಡಿಸಬೇಕು’ ಎಂದು ಬಿಜೆಪಿ ರೋಣ ಮಂಡಲ ಯುವ ಮೋರ್ಚಾದ ಅಧ್ಯಕ್ಷ ಉಮೇಶ ಚನ್ನು ಪಾಟೀಲ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಅಂಗವಾಗಿ ರೋಣ ಮಂಡಲದ ಯುವ ಮೋರ್ಚಾದಿಂದ ಶನಿವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
‘ಕೆಲ ದಿನಗಳಲ್ಲಿ ಯುವ ಮೋರ್ಚಾದ ತಂಡ ರೋಣ, ನರೇಗಲ್, ಗಜೇಂದ್ರಗಡ ನಗರಗಳ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಬಿಜೆಪಿ ಸದಸ್ಯತ್ವ ಮಾಡಿಸಲಿದೆ’ ಎಂದರು.
ಬಿಜೆಪಿ ರೋಣ ಮಂಡಲದ ಅಧ್ಯಕ್ಷ ಮುತ್ತಣ್ಣ ಕಡಗದ ಮಾತನಾಡಿ, ‘ಯುವ ಜನತೆ ಬಿಜೆಪಿಯತ್ತ ವಾಲುತ್ತಿರುವುದರಿಂದ ದೇಶದ ಬಲಿಷ್ಠ ಪಕ್ಷವಾಗಿ ಹೊರಹೊಮ್ಮುತ್ತಿದೆ. ಪಕ್ಷದ ಪದಾಧಿಕಾರಿಗಳು ಸದಸ್ಯತ್ವ ಬಯಸುವವರಿಗೆ ಸದಸ್ಯತ್ವ ಕೊಡಿಸಲು ಸಹಾಯ ಮಾಡಬೇಕು’ ಎಂದು ಹೇಳಿದರು.
ರೋಣ ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ ಮಲ್ಲಾಪುರ ಮಾತನಾಡಿದರು.
ಚಂದ್ರು ಕುರಿ, ಸುರೇಶ ಚೌವ್ಹಾಣ, ಬಾಲಾಜಿರಾವ್ ಭೋಸಲೆ, ಶಿವಕುಮಾರ ದಡ್ಡೂರ, ಸಂಗಮೇಶ ಸೊಬಗಿನ, ಕಿರಣ ಕಟ್ಟಿ, ವೀರೇಶ ಬಿಲ್ದಂಡಗಿಮಠ ಸೇರಿದಂತೆ ಇತರರು ಇದ್ದರು.