ಗಜೇಂದ್ರಗಡ: ತಾಲ್ಲೂಕಿನ ಮುಖ್ಯ ರಸ್ತೆಗಳು ತಕ್ಕಮಟ್ಟಿಗೆ ಸುಸ್ಥಿತಿಯಲ್ಲಿದ್ದು, ಕೆಲ ರಸ್ತೆಗಳು ಗುಂಡಿ ಬಿದ್ದು, ಪ್ರಯಾಣಕ್ಕೆ ಪ್ರಯಾಸವನ್ನುಂಟು ಮಾಡುತ್ತಿವೆ.
ಪಟ್ಟಣದಿಂದ ಇಳಕಲ್ ಸಂಪರ್ಕಿಸುವ ರಸ್ತೆ ಕುಂಟೋಜಿ ಗ್ರಾಮದಿಂದ ತಾಲ್ಲೂಕಿನ ಗಡಿವರೆಗೆ ಹಾಗೂ ಗಜೇಂದ್ರಗಡದಿಂದ ಗದಗ ನಗರಕ್ಕೆ ಸಂಪರ್ಕಿಸುವ ರಸ್ತೆ ನಿಡಗುಂದಿವರೆಗೆ ಅಲ್ಲಲ್ಲಿ ಹಾಳಾಗಿದೆ. ಕುಷ್ಟಗಿಯಿಂದ ಪಟ್ಟಣದ ಮೂಲಕ ರೋಣ ಪಟ್ಟಣಕ್ಕೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು, ಪ್ರಯಾಣದ ಅವಧಿ ಹೆಚ್ಚಿಸುತ್ತಿದೆ.
ಹದಗೆಟ್ಟ ಗ್ರಾಮೀಣ ಪ್ರದೇಶದ ರಸ್ತೆಗಳು: ಗ್ರಾಮೀಣ ಭಾಗದ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ತಾಲ್ಲೂಕಿನ ಹಲವು ರಸ್ತೆಗಳು ನಿರ್ವಹಣೆ ಕೊರತೆಯಿಂದ ಸಂಪೂರ್ಣ ಹಾಳಾಗಿದ್ದು, ಈ ರಸ್ತೆಯಲ್ಲಿ ವಾಹನಗಳಿರಲಿ ರೈತರೂ ಸಹ ತಮ್ಮ ಹೊಲಗಳಿಗೆ ಚಕ್ಕಡಿಗಳಲ್ಲಿ ತೆರಳುವುದೂ ದುಸ್ತರವಾಗಿದೆ. ಅಳಗುಂಡಿ-ಗುಳಗುಳಿ ಸಂಪರ್ಕಿಸುವ ರಸ್ತೆ ಕಾಮಗಾರಿ ನಡೆದಿದ್ದು, ಅಳಗುಂಡಿ ಗ್ರಾಮದ ಹತ್ತಿರ 200 ಮೀ. ರಸ್ತೆ ಕಾಮಗಾರಿಗೆ ಅಡ್ಡಿ ಎದುರಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
ಗಜೇಂದ್ರಗಡದಿಂದ ಕಾಲಕಾಲೇಶ್ವರ ಮಾರ್ಗವಾಗಿ ಗುಡುರು ಸಂಪರ್ಕಿಸುವ ರಸ್ತೆ ಬದಿಮನಾಳ ಕ್ರಾಸ್‌ವರೆಗೆ (15 ಕಿ.ಮೀ.), ನಿಡಗುಂದಿ-ಸೂಡಿ (5 ಕಿ.ಮೀ.), ಸೂಡಿ-ದ್ಯಾಮುಣಸಿ (2 ಕಿ.ಮೀ.), ಸೂಡಿ-ಬೇವಿನಕಟ್ಟಿ (3 ಕಿ.ಮೀ.), ಕಾಲಕಾಲೇಶ್ವರ-ರಾಜೂರ (4 ಕಿ.ಮೀ.), ಗಜೇಂದ್ರಗಡ-ದಿಂಡೂರ ಒಳರಸ್ತೆ (8 ಕಿ.ಮೀ.), ರಾಮಾಪೂರ-ಹೊಸ ರಾಮಾಪೂರ (3 ಕಿ.ಮೀ.), ಗೋಗೇರಿ-ನಾಗರಸಕೊಪ್ಪ (4 ಕಿ.ಮೀ), ಇಟಗಿ-ಗುಳಗುಳಿ (4 ಕಿ.ಮೀ.), ಅಳಗುಂಡಿ-ಇಟಗಿ (5 ಕಿ.ಮೀ.), ಇಟಗಿ-ಮುಗುಳಿ (4 ಕಿ.ಮೀ.), ಅಳಗುಂಡಿ ರಸ್ತೆಯಿಂದ-ಕುರುಬನಾಳ (3 ಕಿ.ಮೀ.), ಗುಳಗುಳಿ-ಮುಶಿಗೇರಿ (4 ಕಿ.ಮೀ), ಮಾಟರಂಗಿ-ಬಂಡಿ ಸೀಮೆ (3 ಕಿ.ಮೀ), ಮಾಟರಂಗಿ ಗ್ರಾಮದಿಂದ ಗಜೇಂದ್ರಗಡ-ಕುಷ್ಟಗಿ ಮುಖ್ಯ ರಸ್ತೆವರೆಗೆ (3 ಕಿ.ಮೀ.) ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಈ ರಸ್ತೆಗಳಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಅಲ್ಲದೆ ರಸ್ತೆ ಬದಿಯಲ್ಲಿ ಜಾಲಿ ಕಂಟಿಗಳು ಬೆಳೆದಿದ್ದು, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ಗಜೇಂದ್ರಗಡ ತಾಲ್ಲೂಕಿನ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳಿಗೆ ಮರುಜೀವ ನೀಡಬೇಕಿದ್ದು, ಸರ್ಕಾರ ಸೂಕ್ತ ಅನುದಾನ ನೀಡಿ ಗ್ರಾಮೀಣ ಜನರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅನುದಾನಕ್ಕೆ ಅನುಗುಣವಾಗಿ ಗ್ರಾಮೀಣ ರಸ್ತೆಗಳ ನಿರ್ವಹಣೆ ಮಾಡುತ್ತಿದ್ದೇವೆ. ಮಳೆಯಿಂದ ಹಾಳಾಗಿರುವ ರಸ್ತೆಗಳ ಪಟ್ಟಿ ಮಾಡಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಂದ ಮೇಲೆ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು-ಚಂದ್ರಕಾಂತ ನರ್ಲೇಕರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರೋಣ
ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗ್ರಾಮೀಣ ರಸ್ತೆಗಳ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಹಳ್ಳಿ ಜನರು ಮತ್ತು ರೈತರು ಓಡಾಡಲು ತೊಂದರೆ ಆಗುತ್ತಿದೆ- ಉಮೇಶ ಮಲ್ಲಾಪುರ, ಬಿಜೆಪಿ ರೋಣ ಮಂಡಲ ಪ್ರಧಾನ ಕಾರ್ಯದರ್ಶಿ ಇಟಗಿ
ಗಜೇಂದ್ರಗಡ ಪಟ್ಟಣದ ಮೂಲಕ ಹಾದು ಹೋಗುವ ಕಾರವಾರ-ಇಳಕಲ್ ರಾಷ್ಟ್ರೀಯ ಹೆದ್ದಾರಿ ಯೋಜನೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. 2016ರಲ್ಲಿ ಕೇಂದ್ರ ಸರ್ಕಾರ ದೇಶದ ಒಟ್ಟು 2266 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದರು. ಕಾರವಾರ-ಕೈಗಾ-ಮುಂಡಗೋಡ-ಸವಣೂರ-ಗದಗ-ನರೇಗಲ್ಲ-ಗಜೇಂದ್ರಗಡ-ಇಲಕಲ್ (318 ಕಿ.ಮೀ.) ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸಲು ಹಸಿರು ನಿಶಾನೆ ತೋರಿಸಲಾಗಿತ್ತು.
ಅದರಂತೆ 318 ಕಿ.ಮೀ. ದ್ವಿಪಥ ರಸ್ತೆ ನಿರ್ಮಾಣದ ಡಿಪಿಆರ್ ತಯಾರಿಸಿ ಸಲ್ಲಿಸಲಾಗಿತ್ತು. ಡಿಸೆಂಬರ್ 2019 ಮತ್ತು ಜನವರಿ 2020ರಲ್ಲಿ ಉನ್ನತೀಕರಿಸಲಾಗಿದ್ದ ಎಲ್ಲ ರಸ್ತೆ ಕಾಮಗಾರಿಗಳ ಯೋಜನಾ ವರದಿ ಮರು ಪರಿಶೀಲನೆ ನಡೆಸಲಾಗಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಬಹುತೇಕ ಯೋಜನೆಗಳನ್ನು ತಡೆ ಹಿಡಿಯಲಾಗಿದೆ ಎನ್ನಲಾಗಿತ್ತು.
ಕಾರವಾರ-ಇಳಕಲ್ ರಸ್ತೆ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸಿದ್ದರೂ ಇಂದಿಗೂ ಕಾಮಗಾರಿ ಪ್ರಾರಂಭವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಸದ್ಯ ನೂತನ ಸಂಸದರಾಗಿರುವ ಬಸವರಾಜ ಬೊಮ್ಮಾಯಿ ಅವರು ಕಾರವಾರ-ಇಳಕಲ್ ಹೆದ್ದಾರಿ ಕಾಮಗಾರಿಗೆ ಮರುಜೀವ ನೀಡುವರೇ ಎಂದು ಸ್ಥಳೀಯರು ಎದುರು ನೋಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.