ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ಗದುಗಿಗೆ ಭೇಟಿ ನೀಡಿ 98 ವರ್ಷ: ನನಸಾಗದ ‘ಗಾಂಧಿಸ್ಮಾರಕ’ದ ಕನಸು

Last Updated 1 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ಗದಗ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೂ ಗದುಗಿಗೂ ಅವಿನಾಭಾವ ನಂಟು. ಎರಡು ಬಾರಿ ಬಾಪೂಜಿ ಜಿಲ್ಲೆಗೆ ಭೇಟಿ ಕೊಟ್ಟಿದ್ದಾರೆ. ಮೊದಲ ಬಾರಿ ಭೇಟಿ ನೀಡಿದ್ದು 1921ರಲ್ಲಿ. ಅಂದು ಈಗಿನ ಬೆಟಗೇರಿಯ ಹೊಸಪೇಟೆ ಚೌಕ್‌ನಲ್ಲಿ, ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.

ಗಾಂಧೀಜಿ ಅವರ ನಿಧನದ ನಂತರ, ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ಹನುಮಂತಸಾ ಬಾಕಳೆ, ಚಾಂದಸಾ ಬೊದ್ಲೇಖಾನ್, ನಾರಾಯಣಪ್ಪ ಬಗಾಡೆ, ಫಕೀರಪ್ಪ ಭರದ್ವಾಡ, ಸಂಕಪ್ಪ ಚೋಳಿನ, ಮಿರಜಕರ್, ಜೂಜಗಾರ, ಮಾಳೆಕರ್, ತುಳಜಿನಸಾ ಮತ್ತಿತರರು ಅಂದಿನ ಧಾರವಾಡ ಜಿಲ್ಲಾಧಿಕಾರಿ ಸಹಕಾರದೊಂದಿಗೆ ಗಾಂಧೀಜಿ ಅವರ ಚಿತಾಭಸ್ಮವನ್ನು ಗದುಗಿಗೆ ತಂದರು. ಚಿತಾಭಸ್ಮ ಇದ್ದ ಕುಂಡವನ್ನು ಅವರು ಭಾಷಣ ಮಾಡಿದ್ದ ಸ್ಥಳದಲ್ಲಿ ಮಣ್ಣಿನಲ್ಲಿ ಸ್ಥಾಪಿಸಿ, ಸುತ್ತಲೂ ಕಟ್ಟೆ ಕಟ್ಟಿ, ಅಲ್ಲಿ ಗಾಂಧಿ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಿದರು.

ಮುಂದೆ ಈ ಸ್ಥಳ ‘ಗಾಂಧಿಗುಡಿ’, ‘ಗಾಂಧಿ ಓಣಿ’ ಎಂದು ಜನಮಾನಸದಲ್ಲಿ ನೆಲೆ ನಿಂತಿತು. ಆದರೆ, ನಂತರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸ್ಮಾರಕ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಈಗ ಗಾಂಧೀಜಿ ಗದುಗಿಗೆ ಬಂದು 98 ವರ್ಷಗಳು ಸಂದಿವೆ. ಇನ್ನೆರಡು ವರ್ಷಗಳು ಕಳೆದರೆ ಈ ಭೇಟಿಯ ಶತಮಾನೋತ್ಸವ ಆಚರಣೆ ನಡೆಯಲಿದೆ. ಅವರ ಚಿತಾಭಸ್ಮವನ್ನು ನಗರಕ್ಕೆ 7 ದಶಕ ಕಳೆದಿದೆ. ಇನ್ನೂ ಸ್ಮಾರಕ ನಿರ್ಮಾಣದ ಕನಸು ನನಸಾಗಿಲ್ಲ.

ಹೊಸಪೇಟೆ ಚೌಕ್‌ನಲ್ಲಿ, ಚರಂಡಿ ಮೇಲಿನ ಸ್ಥಳದಲ್ಲಿ ಗಾಂಧೀಜಿ ಅವರ ಚಿತಾಭಸ್ಮ ಇರಿಸಲಾಗಿದೆ. ಪ್ರತಿ ವರ್ಷ ಗಾಂಧಿ ಜಯಂತಿಯಂದು ಇಲ್ಲಿ ಗಾಂಧಿ ಸ್ಮರಣೆ ನಡೆಯುತ್ತದೆ. ಉಳಿದ ದಿನಗಳಲ್ಲಿ ಈ ಪವಿತ್ರ ಸ್ಥಳ ಅನಾಥವಾಗಿ ಬಿದ್ದಿರುತ್ತದೆ.

‘ನಗರದ ವೃತ್ತವೊಂದಕ್ಕೆ ಈಗಾಗಲೇ ‘ಗಾಂಧಿ ವೃತ್ತ’ ಎಂದು ಹೆಸರಿಡಲಾಗಿದೆ. ಇಲ್ಲಿ ಗಾಂಧೀಜಿ ಪ್ರತಿಮೆಯನ್ನೂ ಸ್ಥಾಪಿಸಲಾಗಿದೆ. ಆದರೆ, ಈ ವೃತ್ತ ಪ್ರತಿಭಟನೆ, ಜಾಥಾ, ಮೆರವಣಿಗೆಗಳ ಕೇಂದ್ರ ಸ್ಥಾನ ಆಗಿದೆ. ಹೊಸಪೇಟೆ ಚೌಕ್‌ನಲ್ಲಿ ಗಾಂಧಿ ಸ್ಮಾರಕ ನಿರ್ಮಾಣಗೊಂಡರೆ ಅದು ಕೂಡ ಪ್ರತಿಭಟನಾಕಾರರ ತಾಣವಾಗಲಿದೆ ಎನ್ನುವುದು ಈ ಬಡಾವಣೆಯ ನಿವಾಸಿಗಳ ಆತಂಕ.

‘ಇಲ್ಲಿ ಗಾಂಧಿ ಗುಡಿ ನಿರ್ಮಾಣವಾಗಲಿ. ಆದರೆ, ಈ ಪ್ರದೇಶದಲ್ಲಿ ಪ್ರತಿಭಟನೆ, ಜಾಥಾ, ರಾಜಕೀಯ ಭಾಷಣಕ್ಕೆ ಅವಕಾಶ ಕೊಡಬಾರದು. ಪೂಜೆ, ಧ್ಯಾನಕ್ಕೆ ಮಾತ್ರ ಸಾರ್ವಜನಿಕರಿಗೆ ಅವಕಾಶ ನೀಡಬೇಕು' ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸಿದ ಈ ಓಣಿಯ ಹಿರಿಯರೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT