ಶನಿವಾರ, ಜುಲೈ 31, 2021
28 °C
ಗಾಂಧಿ ತತ್ವಗಳನ್ನು ಬೋಧಿಸುತ್ತಿರುವ ಬಸಾಪುರದ ಸರ್ಕಾರಿ ಶಾಲೆ

ಈ ಶಾಲೆಗೆ ಬರಲು ಗಾಂಧಿ ಟೋಪಿ ಕಡ್ಡಾಯ..! ಮಕ್ಕಳಿಗೆ ಗಾಂಧಿ ತತ್ವಗಳನ್ನು ಬೋಧಿನೆ

ನಾಗರಾಜ ಎಸ್‌. ಹಣಗಿ Updated:

ಅಕ್ಷರ ಗಾತ್ರ : | |

Deccan Herald

ಲಕ್ಷ್ಮೇಶ್ವರ: ಜಿಲ್ಲೆಯ ಭೂಪಟ ಹಾಸಿ ಹುಡುಕಿದರೆ ಸಾಸಿವೆ ಕಾಳಿನಷ್ಟು ಗಾತ್ರದ ಪುಟ್ಟ ಊರು ಬಸಾಪುರ.ಈ ಗ್ರಾಮದಲ್ಲಿ ನಿತ್ಯ ಗಾಂಧಿಸ್ಮರಣೆ ನಡೆಯುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸುವುದಕ್ಕಿಂತ ಪೂರ್ವದಲ್ಲಿ ಅಂದರೆ 1944ರಲ್ಲಿ ಪ್ರಾರಂಭವಾದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇಂದಿಗೂ ಅಕ್ಷರಶಃ ಗಾಂಧಿ ತತ್ವಗಳನ್ನು ಮಕ್ಕಳಿಗೆ ಕಲಿಸುತ್ತಾ ಬಂದಿದೆ. ಗಾಂಧಿ ಟೋಪಿ ಧರಿಸಿ ಶಾಲೆಗೆ ಬರುವ ಮಕ್ಕಳು,ನಿಸರ್ಗದ ಮಡಿಲಲ್ಲಿ ಕುಳಿತು ಪಾಠ ಕೇಳುತ್ತಾರೆ.

ಸದ್ಯ ಈ ಶಾಲೆಯಲ್ಲಿ 83 ವಿದ್ಯಾರ್ಥಿಗಳಿದ್ದಾರೆ. ಐದು ವರ್ಷಗಳ ಹಿಂದೆ ಈ ಶಾಲೆಯ ಆವರಣದಲ್ಲಿ ಸುಂದರ ಉದ್ಯಾನ ನಿರ್ಮಿಸಲು ಶಿಕ್ಷಕರು ನಿರ್ಧರಿಸಿದರು. ಅವರ ಪ್ರಯತ್ನದ ಫಲವಾಗಿ ಇಂದು ಶಾಲಾ ಆವರಣದಲ್ಲಿ ಹಸಿರು ನಳನಳಿಸುತ್ತಿದ್ದು, ನಿಸರ್ಗದ ಮಡಿಲೇ ಮಕ್ಕಳ ಕಲಿಕಾ ತಾಣವಾಗಿದೆ. ಶಾಲಾ ಕೈತೋಟದಲ್ಲಿ ಔಷಧ ಸಸ್ಯಗಳು ಸೇರಿದಂತೆ ವಿವಿಧ ಜಾತಿಯ ಹೂವು, ಹಣ್ಣಿನ ಸಸಿಗಳನ್ನು ಬೆಳೆಸಲಾಗಿದೆ.

ಗಾಂಧಿ ಟೋಪಿ ಕಡ್ಡಾಯ: ಬಾಲಕರು ಪ್ರತಿನಿತ್ಯ ಶಾಲೆಗೆ ಗಾಂಧಿ ಟೋಪಿ ಧರಿಸಿಕೊಂಡುಬರಬೇಕು. ಇದು ಕಡ್ಡಾಯ. ಇದು ಮಕ್ಕಳಲ್ಲಿ ದೇಶಾಭಿಮಾನ ಬೆಳೆಸುವಲ್ಲಿ ಸಹಕಾರಿ ಆಗಿದೆ ಎನ್ನುವುದು ಶಿಕ್ಷಕರ ಅಭಿಪ್ರಾಯ. ಮಧ್ಯಾಹ್ನ ಊಟದ ಸಮಯದಲ್ಲಿ ಮಕ್ಕಳು ಅನ್ನಪೂಣೇಶ್ವರಿಗೆ ಪ್ರಾರ್ಥನೆ ಸಲ್ಲಿಸಿ, ಆಹಾರ ಸೇವಿಸುತ್ತಾರೆ.

ಸರ್ಕಾರದಿಂದ ಲಭಿಸುವ ಎಲ್ಲ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ವರ್ಗಾಯಿಸುವುದಕ್ಕೆ ಶಿಕ್ಷಕರು ವಿಶೇಷ ಆಸಕ್ತಿ ತೋರಿಸುತ್ತಾರೆ. ಎಲ್ಲ ಮಕ್ಕಳ ವಿದ್ಯಾರ್ಥಿ ವೇತನ ಅರ್ಜಿಗಳನ್ನು ಶಿಕ್ಷಕರೇ ಆನ್‌ಲೈನ್‌ನಲ್ಲಿ ಭರ್ತಿ ಮಾಡಿ ಸಲ್ಲಿಸುತ್ತಾರೆ. ಶಾಲೆಯ ನಾಲ್ವರು ಶಿಕ್ಷಕರು ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಹೀಗಾಗಿ ಈ ಶಿಕ್ಷಕರನ್ನು ಗ್ರಾಮದಲ್ಲಿ ವಿಶೇಷ ಗೌರವದಿಂದ ಕಾಣಲಾಗುತ್ತದೆ.
2014ರಲ್ಲಿ ಜಿಲ್ಲಾ ಪರಿಸರ ಮಿತ್ರ ಪ್ರಶಸ್ತಿ ಹಾಗೂ 2014ರಿಂದ 2017ರವರೆಗೆ ಸತತವಾಗಿ ಮೂರು ವರ್ಷ ಹಸಿರು ಶಾಲೆ ಪ್ರಶಸ್ತಿಗಳನ್ನು ಶಾಲೆ ತನ್ನ ಮುಡಿಗೇರಿಸಿಕೊಂಡಿದೆ.
 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು