ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಜಕ್ಕಲಿ ಗ್ರಾಮದಲ್ಲಿ ಗಾಂಧಿ ರುಜು!

Last Updated 30 ಸೆಪ್ಟೆಂಬರ್ 2020, 7:20 IST
ಅಕ್ಷರ ಗಾತ್ರ

ಗಾಂಧಿ ತತ್ವ, ಆದರ್ಶಗಳನ್ನು ಕಣ್ಣಿಗೆ ಒತ್ತಿಕೊಂಡು ಬದುಕುತ್ತಿರುವ ಗದಗ ಜಿಲ್ಲೆ ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮಸ್ಥರು, ಗಾಂಧಿ ಗ್ರಾಮ ಪರಿಕಲ್ಪನೆಯನ್ನು ಅಕ್ಷರಶಃ ಜೀವಂತವಾಗಿ ಇರಿಸಿದ್ದಾರೆ. ಇಲ್ಲಿನ ಜನರು ಅಕ್ಟೋಬರ್‌ 2ರಂದು ಮಾತ್ರ ರಾಷ್ಟ್ರಪಿತನನ್ನು ನೆನೆಯುವುದಿಲ್ಲ. ಬದಲಾಗಿ ವರ್ಷವಿಡೀ ಸ್ಮರಿಸುತ್ತಾರೆ. ಗಾಂಧಿಯನ್ನು ಉಸಿರಿನಂತೆ ಧ್ಯೇನಿಸುತ್ತಾರೆ.

***

ಜಕ್ಕಲಿ ಗ್ರಾಮಸ್ಥರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ತಮ್ಮ ಮನೆಯ ಹಿರಿಯ ಸದಸ್ಯನೆಂದೇ ಭಾವಿಸಿದ್ದಾರೆ. ಹಾಗಾಗಿ, ಅವರೆಲ್ಲರಿಗೂ ಬಾಪು ಇಲ್ಲಿ ‘ಗಾಂಧ್ಯಪ್ಪಜ್ಜ’ ಆಗಿದ್ದಾರೆ!

1934ರ ಮಾರ್ಚ್‌ 3ರಂದು ಸಂಜೆ 5ಕ್ಕೆ ಗಾಂಧೀಜಿ ಅವರು ಜಕ್ಕಲಿ ಗ್ರಾಮಕ್ಕೆ ಭೇಟಿ ನೀಡಿ ಹೋದ ನಂತರ, ಆ ಊರಿನಲ್ಲಿ ಗುಣಾತ್ಮಕ ಬದಲಾವಣೆಗಳ ಗಾಳಿ ಬೀಸಿತು. ಸ್ವಾತಂತ್ರ್ಯ ಹೋರಾಟಗಾರ ಅಂದಾನಪ್ಪ ದೊಡ್ಡಮೇಟಿ ಅವರ ಮೊಮ್ಮಗ ರವೀಂದ್ರನಾಥ ದೊಡ್ಡಮೇಟಿ ಅವುಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವುದು ಹೀಗೆ:

‘ಮಹಾತ್ಮ ಗಾಂಧೀಜಿ ಅವರುಅಂದಾನಪ್ಪ ದೊಡ್ಡಮೇಟಿ ಅವರ ಆಹ್ವಾನದ ಮೇರೆಗೆ ಜಕ್ಕಲಿಗೆ ಬಂದು ಹೋದ ನಂತರ ಊರಿನ ಚಿತ್ರಣ ಬದಲಾಯಿತು. ಗ್ರಾಮದಲ್ಲಿ ಮದ್ಯಪಾನ ನಿಷೇಧಗೊಂಡಿತು. ಹೊಡೆದಾಟ, ಬಡಿದಾಟಗಳು ನಿಂತವು. ಪ್ರತಿಯೊಬ್ಬರೂ ಊರಿನ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣತೊಡಗಿದರು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಯಿತು. ಅಸ್ಪೃಶ್ಯತೆ ಆಚರಣೆಗಳು ಬಂದ್‌ ಆದವು. ಖಾದಿ ಉಡುಪುಗಳನ್ನು ಧರಿಸುವವರ ಸಂಖ್ಯೆ ಹೆಚ್ಚಾಯಿತು. ಕೃಷಿಯನ್ನು ತಪಸ್ಸಿನಂತೆ ಮಾಡುವವರ ಸಂಖ್ಯೆ ದ್ವಿಗುಣಗೊಂಡಿತು.

ಗಾಂಧೀಜಿಯವರು ಅಂದು 14 ವಿಷಯಗಳ ಕುರಿತು ಮಾಡಿದ ಭಾಷಣ ಊರಿನ ಜನತೆಯ ಮೇಲೆ ಶಾಶ್ವತವಾದ ಪರಿಣಾಮ ಬೀರಿತು. ಊರಿನ ಜನರೆಲ್ಲರೂ ‘ರಘುಪತಿ ರಾಘವ’ ಗೀತೆಯನ್ನು ಪ್ರತಿದಿನ ಹಾಡುವುದನ್ನು ರೂಢಿಸಿಕೊಂಡರು. ಊರಿನಲ್ಲಿ ಚರಕಗಳು ಇದ್ದರೂ ಕೂಡ ಸದ್ದು ಮಾಡಿದ್ದು ಕಡಿಮೆ. ಆದರೆ, ಅವರು ಬಂದು ಹೋದ ನಂತರ ಹೆಣ್ಣುಮಕ್ಕಳು ಖಾದಿ ಬಗ್ಗೆ ಗಮನ ಹರಿಸಿದರು. ನೇಯ್ಗೆ ಹೆಚ್ಚಾಯಿತು.ಊರಿನಲ್ಲಿ ಮಕ್ಕಳು ಜನಿಸಿದರೆ ಅವರಿಗೆ ಗಾಂಧಿ ಎಂಬ ಹೆಸರು ಇಡುವ ಪರಿಪಾಠ ರೂಢಿಯಾಯಿತು.

ಜಕ್ಕಲಿ ಗ್ರಾಮದಲ್ಲಿ ಗಾಂಧಿ ನಿತ್ಯವೂ ಜೀವಂತವಾಗಿದ್ದಾರೆ. ಶಾಲೆಯ ಮಕ್ಕಳು, ಊರಿನ ಜನರು ವರ್ಷವಿಡೀ ಅವರನ್ನು ಪ್ರತಿಮೆ ರೂಪದಲ್ಲಿ ನೋಡುತ್ತಾರೆ. ಪೂಜಿಸುತ್ತಾರೆ. ಸ್ವಾತಂತ್ರ್ಯ ಸಿಕ್ಕ ನಂತರ ಅಂದಾನಪ್ಪ ಹೊಸಮನಿ, ಎ.ಎಂ.ಪಾಟೀಲ ಅವರಂತಹ ಗಾಂಧಿವಾದಿಗಳು ಗ್ರಾಮದ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಗಾಂಧಿ ಜಯಂತಿ ಅಂಗವಾಗಿ ಅವರು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ನಮ್ಮ ಮನೆಯಲ್ಲಿದ್ದ ಗಾಂಧೀಜಿ ಅವರ ದೊಡ್ಡದೊಂದು ಭಾವಚಿತ್ರವನ್ನು ಊರಿನ ತುಂಬ ಮೆರವಣಿಗೆ ಮಾಡಿ, ಪ್ರಾರ್ಥನೆ ಮಾಡುತ್ತಿದ್ದರು.ಗೋಧಿ ಹುಗ್ಗಿ, ಮಾದ್ಲಿಯಂತಹ ಸಿಹಿತಿನಿಸು ಮಾಡಿ ಊರಿಗೆಲ್ಲಾ ಹಂಚುತ್ತಿದ್ದರು. 1999ರವರೆಗೆ ಗಾಂಧಿ ಜಯಂತಿ ಊರಿನ ಉತ್ಸವದಂತೆ ನಡೆಯುತ್ತಿತ್ತು. ಈಗ ಶಾಲಾ ಮಕ್ಕಳು ಅದನ್ನು ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.

ಜಕ್ಕಲಿ ಗ್ರಾಮದಲ್ಲಿ ಗಾಂಧಿ ಪ್ರತಿಮೆ ಇದ್ದು, ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ಸೋಮಪ್ಪ ಕಮ್ಮಾರ್‌ ಎಂಬ ಶಿಲ್ಪಿ ಪ್ರತಿಮೆಯನ್ನು ತುಂಬ ಸುಂದರವಾಗಿ ನಿರ್ಮಿಸಿದ್ದಾರೆ. ಹತ್ತು ವರ್ಷ ಸಮಯ ತೆಗೆದುಕೊಂಡು ಗಾಂಧಿಯನ್ನು ಜೀವಂತ ಮೂರ್ತಿಯಾಗಿಸಿದ್ದಾರೆ. ಊರಿನ ಮಕ್ಕಳಿಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ನಮ್ಮ ತಾತನವರು ಆ ಮೂರ್ತಿಯನ್ನು ಶಾಲಾ ಮೈದಾನದಲ್ಲೇ ಪ್ರತಿಷ್ಠಾಪಿಸಿದ್ದಾರೆ. ಈಗಲೂ ಪ್ರತಿದಿನ ಶಾಲಾ ಮಕ್ಕಳು ಅದಕ್ಕೆ ಪೂಜೆ ಮಾಡುತ್ತಾರೆ. ಅಲ್ಲಿ ನಿಂತು ಪ್ರಾರ್ಥನೆ ಹಾಡುತ್ತಾರೆ.

ಜಕ್ಕಲಿ ಗ್ರಾಮಕ್ಕೆ ಗಾಂಧಿ ವಿಚಾರಧಾರೆಗಳ ತಳಹದಿ ಇರುವುದರಿಂದ ಊರಿನಲ್ಲಿ ಬಿಗಿ ಇದೆ. ಗ್ರಾಮದ ಹುಡುಗರು, ಶಿಕ್ಷಕರು ಹಾಗೂ ನಿವಾಸಿಗಳು ಸಮುದದಾಯದ ಜತೆಗೆ ಉತ್ತಮ ರೀತಿಯಲ್ಲಿ ವರ್ತಿಸುತ್ತಾರೆ. ಮತ್ತಷ್ಟು ಪ್ರಯತ್ನ ಮಾಡಿದರೆ ಜಕ್ಕಲಿ ಗ್ರಾಮವನ್ನು ಮತ್ತೇ ‘ಗಾಂಧಿ ವಿಲೇಜ್‌’ ಮಾಡಬಹುದು. ಅದಕ್ಕೆ ಯುವಕರು ಮನಸ್ಸು ಮಾಡಬೇಕು ಅಷ್ಟೇ. ರಾಜಕೀಯ ವಿಚಾರಧಾರೆಗಳು ಯಾವುದೇ ಇರಲಿ ಗಾಂಧೀಜಿಗೆ ಗೌರವ ಕೊಡುವುದನ್ನು ಕಲಿಯಬೇಕು. ಏಕೆಂದರೆ, ಅವರು ಎಲ್ಲರನ್ನೂ ಮೀರಿ ನಿಂತ ಅತೀತ ವ್ಯಕ್ತಿ ಎಂಬುದು ಸದಾ ನಮ್ಮ ಮನಸ್ಸಿನಲ್ಲಿ ಇರಬೇಕು.

ಹಳೆ ತಲೆಮಾರು ಹೋಯಿತು. ಹೊಸಹೊಸ ರಾಜಕೀಯ ವಿಚಾರಧಾರೆಗಳು ಹರಿದುಬಂದವು. ದೇಶದೆಲ್ಲೆಡೆ ಆದಂತೆ ಜಕ್ಕಲಿ ಗ್ರಾಮದಲ್ಲೂ ನೆಗೆಟಿವಿಟಿಯ ಗಾಳಿ ಬೀಸಿತು. ಸಾಮಾಜಿಕ ಜಾಲತಾಣಗಳು ಯುವಕರ ಮೇಲೆ ಪ್ರಭಾವ ಬೀರಿದವು. ಊರಿನ ಕೆಲವು ಯುವಕರು ಗಾಂಧಿ ವಿಚಾರಧಾರೆಗಳಿಗೆ ಬೆನ್ನುತೋರಿದರು. ಆದರೆ, ದೇಶದ ಬೇರೆಲ್ಲಾ ಗ್ರಾಮಗಳಿಗೆ ಹೋಲಿಕೆ ಮಾಡಿ ನೋಡಿದಲ್ಲಿ ನಮ್ಮ ಗ್ರಾಮ ಈಗಲೂ ಗಾಂಧಿ ಗ್ರಾಮವೇ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT