ಗದಗ: ದಶಕಗಳು ಕಳೆದರೂ ನಿರ್ಮಾಣವಾಗದ ಗಾಂಧಿ ಗುಡಿ..!

7
ಬೆಟಗೇರಿಯ ಹೊಸಪೇಟೆ ಚೌಕ್‌ನಲ್ಲಿ ಬಾಪೂಜಿ ಭಾಷಣ ಮಾಡಿದ ಸ್ಥಳ

ಗದಗ: ದಶಕಗಳು ಕಳೆದರೂ ನಿರ್ಮಾಣವಾಗದ ಗಾಂಧಿ ಗುಡಿ..!

Published:
Updated:
Deccan Herald

ಗದಗ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೂ ಗದುಗಿಗೂ ಅವಿನಾಭಾವ ನಂಟು. ಬಾಪೂಜಿ ಜಿಲ್ಲೆಗೆ ಮೊದಲ ಬಾರಿ ಭೇಟಿ ನೀಡಿದ್ದು 1921ರಲ್ಲಿ. ಅಂದು ಅವರು ಇಲ್ಲಿನ ಬೆಟಗೇರಿಯ ಹೊಸಪೇಟೆ ಚೌಕ್‌ನಲ್ಲಿ, ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿದ ಭಾಷಣ ಮಾಡಿದ್ದರು.ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದ್ದರು.ಗಾಂಧೀಜಿ ಭೇಟಿಯ ನಂತರ, ಅವರಿಂದ ಪ್ರೇರಣೆ ಪಡೆದು, ಜಿಲ್ಲೆಯಲ್ಲಿ ಸಾಕಷ್ಟು ಜನರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು.

ಗಾಂಧೀಜಿ ಅವರ ನಿಧನದ ನಂತರ, ಅವರ ಚಿತಾಭಸ್ಮವನ್ನು ಗದುಗಿಗೆ ತಂದು, ಅವರು ಭಾಷಣ ಮಾಡಿದ ಹೊಸಪೇಟೆ ಚೌಕ್‌ನಲ್ಲಿ ಗಾಂಧಿ ಸ್ಮಾರಕ ನಿರ್ಮಾಣ ಮಾಡುವ ಪ್ರಯತ್ನ ನಡೆಯಿತು. ಹೊಸಪೇಟೆ ಚೌಕ್ ಭಾಗದ ಹಿರಿಯರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಹನುಮಂತಸಾ ಬಾಕಳೆ, ಚಾಂದಸಾ ಬೊದ್ಲೇಖಾನ್, ನಾರಾಯಣಪ್ಪ ಬಗಾಡೆ, ಫಕೀರಪ್ಪ ಭರದ್ವಾಡ, ಸಂಕಪ್ಪ ಚೋಳಿನ, ಮಿರಜಕರ್, ಜೂಜಗಾರ, ಮಾಳೆಕರ್, ತುಳಜಿನಸಾ ಮತ್ತಿತರರು ಅಂದಿನ ಧಾರವಾಡ ಜಿಲ್ಲಾಧಿಕಾರಿ ಸಹಕಾರದೊಂದಿಗೆ ಗಾಂಧೀಜಿ ಅವರ ಚಿತಾಭಸ್ಮವನ್ನು ಗದುಗಿಗೆ ತಂದರು. ಹೊಸಪೇಟೆ ಚೌಕ್‌ನಲ್ಲಿರುವ ಬಾಕಳೆಯವರ ಮನೆಯ ಸಮೀಪ, ಚಿತಾಭಸ್ಮ ಇದ್ದ ಕುಂಡವನ್ನು ಮಣ್ಣಿನಲ್ಲಿ ಸ್ಥಾಪಿಸಿ, ಕಟ್ಟೆ ಕಟ್ಟಿ, ಅಲ್ಲಿ ಗಾಂಧಿ ಸ್ಮಾರಕ ನಿರ್ಮಿಸುವ ಉದ್ದೇಶದಿಂದ ಈ ಸ್ಥಳಕ್ಕೆ ಗಾಂಧಿಗುಡಿ ಎಂದು ನಾಮಕರಣ ಮಾಡಿದರು.

ಇಂದಿಗೂ ಈ ಓಣಿಯನ್ನು ಗಾಂಧಿ ಗುಡಿ ಓಣಿ ಎಂದೇ ಕರೆಯಲಾಗುತ್ತದೆ. ಆದರೆ, ಗಾಂಧೀಜಿ ಅವರ ಚಿತಾಭಸ್ಮ ಗದುಗಿಗೆ ಬಂದು 7 ದಶಕಗಳು ಕಳೆದಿದ್ದರೂ ಈ ಸ್ಥಳದಲ್ಲಿ ಇದುವರೆಗೂ ಗಾಂಧಿಗುಡಿ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ.ಹೊಸಪೇಟೆ ಚೌಕ್‌ನಲ್ಲಿ, ಚರಂಡಿ ಮೇಲಿನ ಸ್ಥಳದಲ್ಲಿ ಗಾಂಧೀಜಿ ಅವರ ಚಿತಾಭಸ್ಮ ಇರಿಸಲಾಗಿದೆ. ಪ್ರತಿ ವರ್ಷ ಗಾಂಧಿ ಜಯಂತಿಯಂದು ಇಲ್ಲಿ ಗಾಂಧಿಸ್ಮರಣೆ ನಡೆಯುತ್ತದೆ. ಉಳಿದ ದಿನಗಳಲ್ಲಿ ಈ ಪವಿತ್ರ ಸ್ಥಳ ಅನಾಥವಾಗಿ ಬಿದ್ದಿರುತ್ತದೆ.

 

'ಹೊಸಪೇಟೆ ಚೌಕ್‌ನಲ್ಲಿ ಗಾಂಧಿ ಗುಡಿ ನಿರ್ಮಾಣಕ್ಕೆ ಸಾರ್ವಜನಿಕರಿಂದ ಮನವಿ ಬಂದರೆ, ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ' ಎನ್ನುತ್ತಾರೆ ನಗರಸಭೆ ಪೌರಾಯುಕ್ತರು. ‘ಇಲ್ಲಿ ಗಾಂಧಿ ಗುಡಿ ನಿರ್ಮಿಸಬಹುದು. ಆದರೆ, ಇಲ್ಲಿ ಪ್ರತಿಭಟನೆ, ಮೆರವಣಿಗೆ, ರಾಜಕೀಯ ಭಾಷಣ ಯಾವುದಕ್ಕೂ ಅವಕಾಶ ನೀಡಬಾರದು. ಪೂಜೆಗೆ ಮಾತ್ರ ಸಾರ್ವಜನಿಕರಿಗೆ ಅವಕಾಶ ನೀಡಬೇಕು' ಎನ್ನುತ್ತಾರೆ ಈ ಓಣಿಯ ನಿವಾಸಿಗಳು.‘ಗಾಂಧಿ ಗುಡಿ ನಿರ್ಮಾಣಗೊಂಡರೆ, ಇದು ಪ್ರತಿಭಟನೆ, ಜಾಥಾ, ಮೆರವಣಿಗೆಗಳ ಕೇಂದ್ರ ಸ್ಥಾನ ಆಗುತ್ತದೆ. ಹೀಗಾಗಿ ಸ್ಥಳೀಯರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ’ ಎನ್ನುತ್ತಾರೆ ಮತ್ತೊಬ್ಬ ಹಿರಿಯರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !