ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಒತ್ತುವರಿ ತೆರವು ಆರಂಭ

ಒತ್ತುವರಿ ಪರಿಶೀಲಿಸಲು ಮುಡಾ ಆಯುಕ್ತರ ನೇತೃತ್ವದಲ್ಲಿ ಸಮಿತಿ
Last Updated 5 ಜೂನ್ 2018, 8:50 IST
ಅಕ್ಷರ ಗಾತ್ರ

ಮಂಗಳೂರು: ಮಂಗಳವಾರ (ಮೇ 29) ಸುರಿದ ಮಹಾಮಳೆ ನಗರದ ಚರಂ ಡಿಯ ಅವ್ಯವಸ್ಥೆಯನ್ನು ಎತ್ತಿ ತೋರಿಸಿದೆ. ಕೂಡಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕಾಲುವೆಯ ಸ್ಥಿತಿಗತಿಯ ಕುರಿತು ಗಮನ ಹರಿಸಿದ್ದು, ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆ ಸೋಮ ವಾರದಿಂದ ಆರಂಭವಾಗಿದೆ.

ಮಂಗಳವಾರದ ಮಳೆಯಿಂದ ಕೃತಕ ನೆರೆ ಸೃಷ್ಟಿಯಾಗಲು ರಾಜಕಾಲುವೆಗಳ ಹೂಳು, ಒತ್ತುವರಿಯೂ ಪ್ರಮುಖ ಕಾರಣ ಎನ್ನುವ ಆರೋಪ ಕೇಳಿ ಬಂದಿತ್ತು. ತಕ್ಷಣವೇ ಮುಡಾ ಆಯುಕ್ತ ಡಾ. ಭಾಸ್ಕರ್‌ ನೇತೃತ್ವದಲ್ಲಿ ಸಮಿತಿ ಯನ್ನು ರಚಿಸಿದ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌, ಮೂರು ದಿನದಲ್ಲಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚನೆ ನೀಡಿದ್ದರು.

ಕೊಟ್ಟಾರದಿಂದ ಗುರುಪುರ ನದಿ ಹಾಗೂ ಜೆಪ್ಪುದಿಂದ ನೇತ್ರಾವತಿ ನದಿಗೆ ಸಂಪರ್ಕ ಕಲ್ಪಿಸುವ ಎರಡು ರಾಜಕಾಲುವೆಗಳನ್ನು ಪರಿಶೀಲಿಸಿದ ಸಮಿತಿಯು, ಒತ್ತುವರಿಯ ಕುರಿತು ಜಿಲ್ಲಾಡಳಿತಕ್ಕೆ ವರದಿ ನೀಡಬೇಕಿದೆ. ಈ ಸಮಿತಿಯ ಮಧ್ಯಂತರ ವರದಿಯ ಆಧಾರದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳ ತಂಡ ಸೋಮವಾರ ಬೆಳಿಗ್ಗೆಯಿಂದಲೇ ಒತ್ತುವರಿ ತೆರವಿಗೆ ಮುಂದಾಗಿದೆ.

ಸೋಮವಾರ ನಗರದ ಕೊಟ್ಟಾರ ಚೌಕಿ ಬಳಿಯಿಂದ ರಾಜಕಾಲುವೆಯ ಒತ್ತುವರಿ ತೆರವು ಆರಂಭವಾಗಿದೆ. ಕೊಟ್ಟಾರ ಮಾಲೆಮಾರ್‌ ರಸ್ತೆಯಲ್ಲಿರುವ ಕೆಲವು ಶಾಲಾ–ಕಾಲೇಜು ಸಹಿತ ಖಾಸಗಿ ವಾಣಿಜ್ಯ ಸಂಕೀರ್ಣಗಳು, ಮನೆಗಳು, ಅಕ್ರಮವಾಗಿ ರಾಜಕಾಲುವೆಯ ಮೇಲೆ ಹಾಕಿದ್ದ ಕಾಂಕ್ರೀಟ್‌ ಅನ್ನು ತೆರವುಗೊಳಿಸಲಾಯಿತು.

ಈ ರಾಜಕಾಲುವೆಯ ಒತ್ತುವರಿ ಮಾಡಿದ್ದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗಿರಲಿಲ್ಲ. ಅಲ್ಲದೇ ತೋಡಿನ ಮೇಲೆ ಕಾಂಕ್ರೀಟ್‌ ಹಾಕಿ, ಮುಚ್ಚಿದ್ದರಿಂದ ತೋಡಿನ ಹೂಳು ತೆಗೆಯುವುದೂ ದುಸ್ತರವಾಗಿತ್ತು.

ವಾಣಿಜ್ಯ ಕಟ್ಟಡಗಳು, ವಸತಿ ಕಟ್ಟಡ ಗಳಿಗೆ ಸಂಪರ್ಕ ರಸ್ತೆ ಇಲ್ಲದೇ ಇದ್ದಲ್ಲಿ, ರಾಜಕಾಲುವೆಯ ಮೇಲೆ ಕಟ್ಟಡದ ಗೇಟ್‌ವರೆಗಿನ ಜಾಗಕ್ಕೆ ಮಾತ್ರ ಕಾಂಕ್ರೀಟ್‌ ಹಾಕಬಹುದಾಗಿದೆ. ಆದರೆ, ಕೊಟ್ಟಾರದ ಕಾಲೇಜಿನ ಕಟ್ಟಡವೊಂದಕ್ಕೆ ಸಂಪರ್ಕ ಕಲ್ಪಿಸಲು ಗೇಟ್‌ ಜತೆಗೆ ಇಕ್ಕೆಲಗಳಲ್ಲಿ ಸಂಪೂರ್ಣ ಕಾಂಕ್ರೀಟ್‌ ಹಾಕಿ, ರಾಜಕಾಲುವೆ ಮುಚ್ಚಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಅಧಿಕಾರಿಗಳು ಗೇಟ್‌ವರೆಗೆ ಸಂಪರ್ಕಿಸುವ ಕಾಂಕ್ರೀಟ್‌ ಅನ್ನು ಮಾತ್ರ ಬಿಟ್ಟು, ಉಳಿದ ಕಾಂಕ್ರೀಟ್‌ ಅನ್ನು ತೆರವುಗೊಳಿಸಿದರು.

ಪಾಲಿಕೆ ಆಯುಕ್ತ ಮುಹಮ್ಮದ್‌ ನಜೀರ್‌ ಆದೇಶದ ಮೇರೆಗೆ ಪಾಲಿಕೆ ಸಹಾಯಕ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಆರ್‌. ಗಣೇಶ್‌, ರವಿಶಂಕರ ನೇತೃತ್ವದಲ್ಲಿ ಕಾರ್ಯಾ ಚರಣೆ ನಡೆಸಲಾಯಿತು. ಪಾಲಿಕೆ ನಗರ ಯೋಜನಾಧಿಕಾರಿ ಬಾಲಕೃಷ್ಣ ಗೌಡ, ಸಹಾಯಕ ನಗರ ಯೋಜನಾಧಿಕಾರಿ ಶಿವರಾಜ್‌, ಸಹಾಯಕ ಎಂಜಿನಿಯರ್‌ ಲತಾ, ಪಾಲಿಕೆ ಸಿಬ್ಬಂದಿ ಭಾಗವಹಿಸಿದ್ದರು.

ಖಾಸಗಿ ಏಜೆನ್ಸಿ ನೇಮಕ

ಮುಡಾ ಆಯುಕ್ತ ಡಾ. ಭಾಸ್ಕರ್‌ ನೇತೃತ್ವದ ಸಮಿತಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಡಳಿತ ಸೂಚನೆ ನೀಡಿದ್ದು, ಇದೀಗ ರಾಜಕಾಲುವೆ ಒತ್ತುವರಿ ಸಮೀಕ್ಷೆಗಾಗಿ ಖಾಸಗಿ ಏಜೆನ್ಸಿಯೊಂದನ್ನು ನೇಮಕ ಮಾಡಲಾಗಿದೆ. ಮುಡಾ ಆಯುಕ್ತರ ನೇತೃತ್ವದಲ್ಲಿ ಈ ಏಜೆನ್ಸಿಯು ಈಗಾಗಲೇ ಸಮೀಕ್ಷೆ ಆರಂಭಿಸಿದ್ದು, ಎರಡು ದಿನದಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಿದೆ ಎಂದು ತಿಳಿದುಬಂದಿದೆ.

ಈ ಸಮಿತಿಯು ನಗರದ ಎರಡು ರಾಜಕಾಲುವೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಿದ್ದು, ಒತ್ತುವರಿಯ ಕುರಿತು ಸಂಪೂರ್ಣ ವಿವರವನ್ನು ವರದಿಯಲ್ಲಿ ನಮೂದಿಸಲಿದೆ. ಸಮಿತಿಯ ವರದಿಯನ್ವಯ ಜಿಲ್ಲಾಡಳಿತ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ತಿಳಿಸಿದ್ದಾರೆ.

**
ಪಾಲಿಕೆಯ ಜೆಸಿಬಿ, ಬ್ರೇಕರ್‌, ಹಿಟಾಚಿ, ಟಿಪ್ಪರ್‌ಗಳನ್ನು ಬಳಸಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಇದು ಮುಂದುವರಿಯಲಿದೆ
– ಮುಹಮ್ಮದ್‌ ನಜೀರ್‌, ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT